ಕೃಷಿ ಭೂಮಿ ಇದ್ದವರೇ ಕೋಳಿ ಸಾಕಾಣಿಕೆ ಮಾಡಬೇಕು ಅಂತೇನು ಇಲ್ಲ. ಕೋಳಿ ಸಾಕಾಣಿಕೆ ಎಲ್ಲ ವರ್ಗದ ರೈತರು ಕೈಗೊಳ್ಳಬಹುದಾದ ಉದ್ಯಮ ಇದಾಗಿದೆ. ಭೂಮಿ ಇಲ್ಲದವರಿಗೂ ಕೋಳಿ ಸಾಕಾಣಿಕೆ ಲಾಭದಾಯಕ ಉದ್ಯಮ. ಕಡಿಮೆ ಖರ್ಚಿನಲ್ಲಿ ಮತ್ತು ಸುಲಭವಾಗಿ ಕೈಗೊಳ್ಳಬಹುದಾದ ಈ ಕೋಳಿ ಸಾಕಾಣಿಕೆಯನ್ನು ಪ್ರಸ್ತುತ ಲಕ್ಷಾಂತರ ಜನರು ಉದ್ಯಮವನ್ನಾಗಿ ನಡೆಸುತ್ತಿದ್ದಾರೆ.
ಕೋಳಿ ಸಾಕಾಣಿಕೆ ಪ್ರಾಚೀನ ಕಾಲದಿಂದಲೂ ಬೆಳೆದು ಬಂದಿದೆ. ಹಿಂದೆ ದೇಶೀಯ ಕೋಳಿಗಳಿಂದ ಮೊಟ್ಟೆ ಮತ್ತು ಮಾಂಸ ಉತ್ಪಾದಿಸಲಾಗುತ್ತಿತ್ತು. ಆ ನಂತರ ಬಳಕೆಗೆ ಬಂದ ಕ್ರಾಸ್ ಬ್ರೀಡ್ ತಳಿಗಳು, ಉತ್ತಮ ನಿರ್ವಹಣಾ ವಿಧಾನಗಳು ಹಾಗೂ ಮಾರಾಟ ಸೌಕರ್ಯದಿಂದಾಗಿ, ಈ ಉದ್ಯಮ ದಿನೇ ದಿನೇ ಅಭಿವೃದ್ಧಿಗೊಳ್ಳುತ್ತಾ ಬಂದಿದೆ. ಉತ್ತಮ ಜಾತಿಯ ಕೋಳಿಗಳಿಂದ ಅಧಿಕ ಮೊಟ್ಟೆ ಮತ್ತು ಮಾಂಸ ಉತ್ಪಾದಿಸಲಾಗುತ್ತಿದೆ.
ಈ ಕೋಳಿಗಳ ಮಾಂಸ ಮೃದು ಹಾಗೂ ರುಚಿಕರ. ಅಧಿಕ ಪ್ರೊಟಿನ್ ಹಾಗೂ ಕಡಿಮೆ ಕೊಬ್ಬು ಹೊಂದಿದ ಶಕ್ತಿವರ್ಧಕ ಆಹಾರ. ಇವುಗಳ ಸಾಕಣೆ ಅತ್ಯಂತ ಸುಲಭ ಹಾಗೂ ಸರಳ. ಕೆಲವೇ ದಿನಗಳ ತರಬೇತಿ ಅಥವಾ ಅನುಭವದೊಂದಿಗೆ ಇದನ್ನು ಪ್ರಾರಂಭಿಸಬಹುದು. ಇದರೊಂದಿಗೆ ತಜ್ಞರ ಸಲಹೆ ಮುನ್ನೆಚ್ಚರಿಕೆ ಮಾರುಕಟ್ಟೆಯ ವ್ಯವಹಾರ ಅತೀ ಮುಖ್ಯ.
ಇತ್ತೀಚೆಗೆ ತರಬೇತಿಯ ಕೊರತೆ, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸರಿಯಾದ ಮಾರ್ಗದರ್ಶನವಿಲ್ಲದ ಕಾರಣ, ಕೆಲವೊಮ್ಮೆ ಉದ್ಯಮಿಗಳು ಕೈಸುಟ್ಟುಕೊಂಡಿರುವ ಉದಾಹರಣೆಗಳೂ ಇವೆ. ಸ್ವಲ್ಪ ಎಚ್ಚರಿಕೆಯಿಂದ ಹೆಜ್ಜೆ ಹಾಕಿದರೆ, ನಾಲ್ಕೈದು ಸಾವಿರ ಕೋಳಿಗಳನ್ನು ಒಬ್ಬನೇ ನಿರ್ವಹಿಸಬಹುದು. ಕೈತುಂಬಾ ಆದಾಯವೂ ಗಳಿಸಬಹುದು.
ಕೋಳಿಗಳ ವಿಶೇಷತೆಗಳು (Poultry variety)
ಕೋಳಿಗಳಲ್ಲಿ ಮಾಂಸಕೋಳಿ, ಮತ್ತು ಮೊಟ್ಟೆ ಕೊಳಿಗಳೆಂದು ವಿಂಗಡಿಸಲಾಗುತ್ತದೆ. ಕೆಲವರು ಮಾಂಸಕ್ಕಾಗಿ ಸಾಕುತ್ತಾರೆ.ಇನ್ನೂ ಕೆಲವರು ಮೊಟ್ಟೆ ಮತ್ತು ಮಾಂಸಕ್ಕಾಗಿ ಕೋಳಿಗಳನ್ನು ಸಾಕುತ್ತಾರೆ. ಯಾವುದಕ್ಕಾಗಿ ಉದ್ಯಮ ಆಯ್ಕೆ ಮಾಡಿಕೊಳ್ಳುತ್ತೇವೆಯೋ ಅದ ಕೋಳಿ ಸಾಕಾಣಿಕೆ ಮಾಡುವವ ವಿವೇಚನೆಗೆ ಬಿಟ್ಟಿದ್ದು.
ಬಾಯ್ಲರ್ ಕೋಳಿಗಳನ್ನು ಮಾಂಸಕ್ಕಾಗಿಯೇ ಉಪಯೋಗಿಸುತ್ತಾರೆ. ಈ ಕೋಳಿಗಳು ಕೇವಲ ಒಂದು ಒಂದೂವರೆ ತಿಂಗಳುಗಳಲ್ಲಿ ಎರಡು ಎರಡೂವರೆ ಕೆ.ಜಿ ತೂಕ ಪಡೆಯುತ್ತವೆ. ಒಂದು ಕೆ.ಜಿ. ತೂಕ ಬರಲು ಪ್ರತಿ ಕೋಳಿಗೆ 1.6 ಕೆಜಿ ಯಿಂದ 1.75 ಕೆ.ಜಿಯಷ್ಟು ಆಹಾರ ಸಾಕು! ಮೊಟ್ಟೆ ಕೋಳಿಗಳ ಸಾಕಣೆಗೆ ಹೊಲಿಸಿದರೆ ಮಾಂಸದ ಕೋಳಿ ಸಾಕಣೆಯ ಪ್ರಾರಂಭಿಕ ವೆಚ್ಚ ತೀರಾ ಕಡಿಮೆ. ಸಾಕಣೆ ಕಾಲಾವಧಿ ಕೇವಲ 4ರಿಂದ 6 ವಾರಗಳು ಮಾತ್ರ. ಇವುಗಳ ಮಾಂಸಕ್ಕೆ ಬೇಡಿಕೆ ಹೆಚ್ಚು.
ಸಾಕಣೆಗೆ ಏನೇನು ಬೇಕು?
ಈ ಉದ್ಯೋಗವನ್ನು ಕೈಗೊಳ್ಳಲು ಮೊದಲು ಆಸಕ್ತಿ, ದೃಢವಾದ ಮನಸ್ಸು, ಕನಿಷ್ಠ ತರಬೇತಿ ಹಾಗೂ ಪರಿಶ್ರಮದೊಂದಿಗೆ ಮುನ್ನೆಚ್ಚರಿಕೆಯೊಂದಿಗೆ ವ್ಯವಹಾರಿಕ ಜ್ಞಾನವೂ ಬೇಕು. ಸತತ ಶುದ್ಧ ನೀರಿನ ಸೌಕರ್ಯ ಬೇಕು. ರಾತ್ರಿಯೆಲ್ಲ ಬೆಳಕಿನ ಅವಶ್ಯಕತೆಯಿರುವುದರಿಂದ ವಿದ್ಯುತ್ ಬೇಕು.
ಅತಿ ಶೀಘ್ರದಲ್ಲಿ ಬೆಳವಣಿಗೆ ಹೊಂದಿ ಮಾಂಸವನ್ನು ಉತ್ಪಾದಿಸುವ ಉದ್ದೇಶಕ್ಕೆಂದೇ ವಿಶೇಷವಾಗಿ ಅಭಿವೃದ್ಧಿಪಡಿಸಿರುವ ಕುಕ್ಕುಟ ತಳಿಗಳಿವೆ. ಉದಾಹರಣೆಗೆ ಕಾಬ್, ಹಬ್ಬರ್ಡ್, ಹಬ್ಚಿಿಕ್ಸ್ ಇತ್ಯಾದಿ.
ಈ ಕೋಳಿಮರಿಗಳು ಹುಟ್ಟಿದಾಗ 42ಗ್ರಾಂ ನಿಂದ 45 ಗ್ರಾಂ ತೂಕವಿರುತ್ತವೆ. ಅದನ್ನು ಪಡೆದ ರೈತರು ಪ್ರಾರಂಭದ 10-15 ದಿನಗಳ ಕಾಲ ವಿದ್ಯುತ್ ಬಲ್ಬುಗಳ ಮೂಲಕ ಬೆಚ್ಚಗೆ ಕಾವು ಕೊಟ್ಟು ಪೌಷ್ಟಿಕ ಆಹಾರ ಹಾಕಿ ಸತತವಾಗಿ ನೀರುಣಿಸಿ ಒಂದು ಒಂದೂವರೆ ತಿಂಗಳುಗಳ ತನಕ ಸಾಕಿ ಮಾರಾಟ ಮಾಡುತ್ತಾರೆ. ಕೇವಲ 45 ದಿನಗಳಲ್ಲಿ ಕೋಳಿ ಮರಿಯು ತನ್ನ ತೂಕವನ್ನು 50 ಪಟ್ಟು ಹೆಚ್ಚಿಸಿಕೊಳ್ಳುತ್ತದೆ. ಕೋಳಿ ಗೊಬ್ಬರ ಹೆಚ್ಚು ಸಾರಜನಕ ಹೊಂದಿದೆ. ಇದನ್ನು ಕಾಂಪೋಸ್ಟ್ ಮಾಡಿ ಕೃಷಿಗೂ ಬಳಸುತ್ತಾರೆ.
ಕೋಳಿ ಆಹಾರ (poultry breeding)
ಕೋಳಿಗಳಿಗೆ ಉತ್ತಮ ಸಮತೋಲನ ವಾಗಿರುವ ಆಹಾರವನ್ನು ವೈಜ್ಞಾನಿಕ ರೀತಿಯಲ್ಲಿ ತಿನ್ನಿಸಬೇಕು. ಆಗ ಮಾತ್ರ ಕೋಳಿಗಳಿಂದ ಅಧಿಕ ಉತ್ಪಾದನೆ (ಮೊಟ್ಟೆ ಮತ್ತು ಮಾಂಸ) ಪಡೆಯಲು ಸಾಧ್ಯ. ಕೋಳಿ ಸಾಕಾಣೆಯ ಒಟ್ಟು ವೆಚ್ಚದಲ್ಲಿ ಶೇಕಡ 70-75 ರಷ್ಟು ಭಾಗ ಆಹಾರದ್ದಾಗಿರುತ್ತದೆ. ಆರ್ಥಿಕ ದೃಷ್ಟಿಯಿಂದ ಈ ವೆಚ್ಚ ಒಂದು ಗಮನಾರ್ಹ ಅಂಶ.
ಈ ಆಹಾರದಲ್ಲಿ ಮರಿಗಳ ವಯಸ್ಸಿಗೆ ತಕ್ಕಂತೆ ನೀಡುವ ಪ್ರಿಸ್ಟಾರ್ಟರ್, ಸ್ಟಾರ್ಟರ್, ಹಾಗೂ ಫಿನಿಶರ್ ಎಂಬ ಆಹಾರಗಳಿವೆ. ಆಹಾರದ ಗುಣಮಟ್ಟ ಮತ್ತು ಸಂಗ್ರಹಣೆಯ ಬಗ್ಗೆ ಹೆಚ್ಚು ಕಾಳಜಿವಹಿಸುವುದು ಅವಶ್ಯ. ಆಹಾರವು ಶಿಲೀಂಧ್ರಪೀಡಿತ(ಫಂಗಸ್)ವಾಗಿರಬಾರದು.
ರೋಗನಿರೋಧಕ ಲಸಿಕೆಗಳು
ಮಾರಕರೋಗಗಳಾದ ರಾಣಿಖೇಟ್(ಕೊಕ್ಕರೆ ರೋಗ), ಗುಂಬಾರೋ ಮತ್ತು ರೋಗಗಳ ವಿರುದ್ಧ ಮರಿಗಳಿಗೆ ಪಶುವೈದ್ಯರ ಸಲಹೆಯ ಮೇರೆಗೆ ಲಸಿಕೆಯನ್ನು ನೀರಿನಲ್ಲಿ ಕೊಡಬೇಕಾಗುತ್ತದೆ. ಇವಲ್ಲದೇ ರಕ್ತ ಬೇಧಿ(ಕಾಕ್ಸಿಡಿಯಾ), ಶ್ವಾಸಕೋಶಗಳ ಕಾಯಿಲೆ ಸಿ.ಆರ್.ಡಿ), ಗೌಟ್ ಹಾಗೂ ಟೈಫಾಯಿಡ್ನಂ(ತಹ ರೋಗಗಳ ಕುರಿತು ನಿಗಾ ಅವಶ್ಯ.
ಮಾಂಸದ ಕೋಳಿಗಳಿಗೆ ಹೋಲಿಸಿದರೆ ಮೊಟ್ಟೆ ಕೋಳಿಯ ಮಾಂಸಕ್ಕೆ ಬೆಲೆ ಕಡಿಮೆ ಎಂದೇ ಹೇಳಬಹುದು. ಮೊಟ್ಟೆ ಇಡುವ ಕೋಳಿ ಮರಿಗಳು ಮೊಟ್ಟೆಯಿಡಲು 17 ರಿಂದ 18 ವಾರಗಳನ್ನು ತೆಗೆದುಕೊಳ್ಳುತ್ತದೆ ಇವು ವರ್ಷಕ್ಕೆ 300 ರಿಂದ 330 ರವರೆಗೆ ಕೂಡಾ ಮೊಟ್ಟೆಗಳನ್ನು ಇಡಬಲ್ಲವು. ಇದರಲ್ಲಿ ಹಲವಾರು ರೀತಿಯ ತಳಿಗಳಿದ್ದು,ಕಾಲ್ಬ್, ಬಿವಿ 300, ಕಿಸ್ಟೋನ್, ಪೂನಾಪರ್ಲ, ಎಚ್‌ಎಚ್ 280, ಹೈಲೈನ್, ರಾಣಿಶೇವರ್, ಮೈಚಿಕ್ಸ್ ಮುಂತಾದವು. ಇವು ತಾವು ತಿನ್ನುವ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಮೊಟ್ಟೆ ಇಡಲು ಉಪಯೋಗಿಸುತ್ತವೆ. ಸುಮಾರು 17-18 ವಾರಗಳಲ್ಲಿ ಮೊಟ್ಟೆ ಇಡಲು ಪ್ರಾರಂಭ ಮಾಡುತ್ತವೆ. ವರ್ಷಕ್ಕೆ ಸರಾಸರಿ 310-330 ಮೊಟ್ಟೆ ಇಡಬಲ್ಲವು. ಇವುಗಳ ಆಹಾರ ಬಳಕೆ ಸಾಮರ್ಥ್ಯ 12 ಮೊಟ್ಟೆಗಳಿಗೆ 1.5 ಕಿ.ಗ್ರಾಂ.
ಸ್ವರ್ಣಧಾರ ಕೋಳಿ
ಥೇಟ್ ನಾಟಿ ಕೋಳಿ ರೂಪವನ್ನೇ ಹೋಲುವ ಈ ಕೋಳಿಯ ಹೆಸರು ಸ್ವರ್ಣಧಾರ. ಈ ವಿಶೇಷ ತಳಿಯ ಕೋಳಿಯನ್ನು ಸಾಕುವುದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಪಡೆಯಬಹುದು.
ಹಳ್ಳಿಯ ನಾಟಿಕೋಳಿಯಲ್ಲಿ 4-5 ವಾರಗಳಲ್ಲಿ 800 ಗ್ರಾಂ ಮಾಂಸ ಸಿಗುವುದಾದರೆ ಸ್ವರ್ಣಧಾರದಲ್ಲಿ 1.5 ಕೆಜಿ ವರೆಗೆ ಮಾಂಸ ಸಿಗುತ್ತದೆ. ಇನ್ನೂ ಆಹಾರದ ವಿಷಯಕ್ಕೆ ಬಂದರೆ ನಾಟಿ ಕೊಳಿ ತರಹ ಸ್ವರ್ಣಧಾರ ಕೋಳಿಗಳನ್ನು ಮನೆ ಹಿತ್ತಲಲ್ಲಿ ಬಿಟ್ಟು ಸಾಕಬಹುದು. ಅಕ್ಕಿ ಗೋಧಿ, ಹುಲ್ಲು, ಹಿತ್ತಲಿನ ಕ್ರಿಮಿ ಕೀಟಗಳನ್ನು ತಿನ್ನುತ್ತವೆ. ಸ್ವರ್ಣಧಾರ ಕೋಳಿ 140-180 ಮೊಟ್ಟ ಇಡುತ್ತದೆ. ಮೊಟ್ಟೆ ಮಾರಿಯೂ ಲಾಭ ಗಳಿಸಬಹದು.
ಪಂಜರದ ಪದ್ಧತಿ (ಮೊಟ್ಟೆ ಕೋಳಿ)
ಈ ಪದ್ಧತಿಯಲ್ಲಿ ಕೋಳಿಗಳನ್ನು ಪಂಜರದಲ್ಲಿಟ್ಟು ಸಾಕಲಾಗುತ್ತದೆ. ಒಂದು ಕೋಳಿಗೆ ಸುಮಾರು 70 ಚದರ ಅಂಗುಲ ಸ್ಥಳಾವಕಾಶ ಸಾಕು. ಓಡಾಡಲು ಬಿಡುವ ಕಾಲು ಹಾದಿಯನ್ನು ಸೇರಿಸಿ ಪ್ರತಿ ಕೋಳಿಗೆ 1 ಚದರ ಅಡಿಯಷ್ಟು ಜಾಗ ಬೇಕಾಗುತ್ತದೆ. ಈ ಪದ್ಧತಿಯಲ್ಲಿ ಕೋಳಿಗಳ ನಿರ್ವಹಣೆ ಸುಲಭ. ಅಲ್ಲದೆ, ರೋಗ ಹರಡುವ ಸಾಧ್ಯತೆಯೂ ಕಡಿಮೆ. ರೋಗದಿಂದ ನರಳುತ್ತಿರುವ ಮತ್ತು ಮೊಟ್ಟೆ ಇಡುವ ಕೋಳಿಗಳನ್ನು ಬೇರ್ಪಡಿಸಬಹುದು.. ಪಂಜರದ ಪದ್ಧತಿಯಲ್ಲಿ ಮರಿಗಳಿಗೆ ಡೀಪ್ ಲೀಟರ್ ಪದ್ಧತಿಯಲ್ಲಿ ಕೊಡುವ ಶೇ. 50-80 ವಸತಿ ಜಾಗ ಮತ್ತು ಬೆಳೆದ ಕೋಳಿಗಳಿಗೆ ಶೇ. 30-40 ರಷ್ಟು ವಸತಿ ಸ್ಥಳ ಬೇಕಾಗುತ್ತದೆ. ಸಾಮಾನ್ಯವಾಗಿ 18 ಅಂಗುಲ ಉದ್ದ, 15 ಅಂಗುಲ ಅಗಲ ಮತ್ತು 18 ಅಂಗುಲ ಎತ್ತರದ ಒಂದು ಪಂಜರ 4 ಮೊಟ್ಟೆ ಕೋಳಿಗಳಿಗೆ ಸಾಕಾಗುತ್ತದೆ.
ಕೋಳಿಗಳ ಶೆಡ್ ನಿರ್ಮಾಣದಲ್ಲಿ ಗಮನಿಸಬೇಕಾದ ಅಂಶಗಳು:
ನೀವು ದೊಡ್ಡ ಪ್ರಮಾಣದಲ್ಲಿ ಶೆಡ್ ನಿರ್ಮಾಣ ಮಾಡುವುದಾದರೆ ಬಯಲು ಪ್ರದೇಶವನ್ನು ಆಯ್ಕೆಮಾಡಿಕೊಳ್ಳುವುದು ಉತ್ತಮ. ಏಕೆಂದರೆ ಮುಕ್ತವಾದ ಗಾಳಿ ಬೆಳಕು ಈ ಪ್ರದೇಶದಲ್ಲಿದ್ದರೆ ಕೋಳಿಗಳ ಬೆಳವಣಿಗೆಗೆ ಇದು ತುಂಬಾ ಅನುಕೂಲಕಲವಾಗಿರುತ್ತದೆ. ಇದನ್ನು ನಿರ್ಮಿಸುವಾಗ ನೆಲದಿಂದ ಎತ್ತರವಾಗಿ ಮತ್ತು ಸಮವಾಗಿರುವಂತೆ ನಿರ್ಮಿಸಬೇಕು. ಅಲ್ಲದೇ ಬೇಸಿಗೆಯಲ್ಲಿ ತಂಪಾಗಿರುವಂತೆ ಮತ್ತು ಚಳಿಗಾಲದಲ್ಲಿ ಬೆಚ್ಚಗೆ ಇರುವಂತ ಸ್ಥಳವನ್ನು ಆಯ್ಕೆಮಾಡಬೇಕು ಆದಷ್ಟು ಇಳಿಜಾರಾಗಿರುವ ಪ್ರದೇಶದಲ್ಲಿ ಇದನ್ನು ನಿರ್ಮಿಸುವುದು ಸೂಕ್ತ. ಅಲ್ಲದೇ ಇದಕ್ಕೆ ನೀರಿನ ಪೂರೈಕೆ ಮತ್ತು ಬೆಳಕಿನ ಪೂರೈಕೆ ಇರುವ ಹಾಗೆ ಗಮನಹರಿಸಬೇಕು.