Agripedia

ಹೊಲದಲ್ಲಿ ಯಥೇಚ್ಚವಾಗಿ ಬೆಳೆಯುವ ಪಾರ್ಥೇನಿಯಂ ನಿಯಂತ್ರಣ ಹೇಗೆ?....ಇಲ್ಲಿದೆ ಮಾಹಿತಿ

25 March, 2021 7:00 AM IST By:

ಕಾಂಗ್ರೆಸ್ ಕಸ ಎಂಬ ರೂಢನಾಮ ಹೊಂದಿದ ಪಾರ್ಥೇನಿಯಂ ವಿನಾಶಕಾರಿಯಾಗಿದ್ದು, ಈ ಕಸವು ಇಂದು ಸಾರ್ವತ್ರಿಕ ಸಮಸ್ಯೆಯಾಗಿ ಕಾಡುತ್ತಿದೆ.  ಜಮೀನಿನಲ್ಲಿ ಬಿತ್ತನೆ ಮಾಡದೆ ಬೆಳೆಯವ ಕಳೆಯಲ್ಲಿ ಪಾರ್ಥೇನಿಯಂ ಸಹ  ಒಂದಾಗಿದೆ. ಈ ಕಳೆಯನ್ನು ಕ್ಯಾರೇಟ್ ಕಳೆ, ನಕ್ಷತ್ರ ಕಳೆ, ಬಿಳಿ ಟೋಪಿ ಎಂಬಿತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಇದರಿಂದ ಮನುಷ್ಯರಿಗೆ ಅಲರ್ಜಿ, ಚರ್ಮರೋಗ, ಉಸಿರಾಟದ ಸಮಸ್ಯೆ ಬರುತ್ತದೆ.

ಯಾವುದೇ ಬೆಳೆಯಿರಲಿ ಕಳೆಯು ಬೆಳೆಯ ಬೆಳವಣಿಗೆ ಮತ್ತು ಇಳುವರಿಯಲ್ಲಿ ಭಾರೀ ನಷ್ಟ ಉಂಟುಮಾಡುತ್ತದೆ.  ಕಳೆಗಳು ಬೆಳೆಗಳ ಬೆಳವಣಿಗೆಗೆ ಬೇಕಾಗುವ ಬೆಳಕು, ತೇವಾಂಶ, ಪೋಷಕಾಂಶ ಮತ್ತು ಜಾಗಕ್ಕೆ ಪೈಪೋಟಿ ನೀಡುವ ಮೂಲಕ ಬೆಳೆಗಳ ಇಳುವರಿಯನ್ನು ಕುಂಠಿತಗೊಳಿಸುತ್ತದೆ. ರೈತರು ಪಾರ್ಥೇನಿಯಂ ಕಳೆಯನ್ನು ಹೂವು ಬಿಡುವ ಮೊದಲೇ ನಾಶಮಾಡಬೇಕು. ಇಲ್ಲದಿದ್ದರೆ ಕಳೆ ಮತ್ತೆ ದ್ವಿಗುಣಗೊಳಿಸಿ ಬೆಳೆಯನ್ನು ಹಾನಿಬಿಡುತ್ತದೆ. ಮನುಷ್ಯ ಹಾಗೂ ಪ್ರಾಣಿಗಳ ಆರೋಗ್ಯಕ್ಕೂ ಮಾರಕವಾಗಿರುವ ಪಾರ್ಥೇನಿಯಂ ಸಸ್ಯವನ್ನು ಹೂವು ಬಿಡುವ ಮುಂಚೆಯೇ ನಾಶಪಡಿಸಬೇಕು.

 ಕಳೆಯನ್ನು ನಾಲ್ಕು ಪ್ರಕಾರವಾಗಿ ನಾಶಮಾಡಬಹುದು.

  1. ಬೇಸಾಯ ಪದ್ಧತಿ,
  2. ಯಾಂತ್ರಿಕ ಪದ್ಧತಿ
  3. ಜೈವಿಕ ಪದ್ಧತಿಗಳು
  4. ಕಳೆನಾಶಕಗಳ ಬಳಕೆ

ಬೇಸಾಯ ಮತ್ತು ಯಾಂತ್ರಿಕ ಪದ್ಧತಿ:  

ಉತ್ತಮ ಬೇಸಾಯ, ಯಾಂತ್ರಿಕ ಪದ್ಧತಿಗಳು ಸಾಮಾನ್ಯವಾಗಿ ರಾಸಾಯನಿಕ ಪದ್ಧತಿಗೆ ಪರ್ಯಾಯ ಅಥವಾ ಬದಲಿ ಮಾರ್ಗವಾಗಿದೆ. ಅಲ್ಲದೆ ಈ ಪದ್ಧತಿ ಅನುಸರಿಸಿ ಕಳೆ ಹತೋಟಿಯಿಂದ ಪರಿಸರ ಮಾಲಿನ್ಯ ಉಂಟಾಗುವುದಿಲ್ಲ. ಕೆಳಕಂಡ ಕ್ರಮ ಅನುಸರಿಸಿ ಕಳೆ ಹತೋಟಿ ಮಾಡಬಹುದು

  1. ಆಳವಾಗಿ ಮಣ್ಣಿನಲ್ಲಿ ಸೇರಿರುವ ಬಹುವಾರ್ಷಿಕ ಕಳೆಗಳನ್ನು ಹಾರೆ, ಗುದ್ದಲಿ ಯಿಂದ ಅಗೆಯುವುದು ಮತ್ತು ಆಳವಾಗಿ ಉಳುಮೆ ಮಾಡಬೇಕು.
  2. ಬೇಸಗೆ ಕಾಲದಲ್ಲಿ ಅದನ್ನು ಬಿಸಿಲಿಗೆ ಬಿಟ್ಟು ಅವುಗಳ ಗಡ್ಡೆಗಳನ್ನು ಒಣಗಿಸುವುದು.
  3. ಕೈಯಿಂದ ಕಳೆಗಳನ್ನು ಕಿತ್ತು ಹಾಕುವುದು.
  4. ಉಳುಮೆ ಮಾಡುವುದು.
  5. ಹುಲ್ಲು, ಮಣ್ಣು, ಎಲೆ, ಕಪ್ಪು ಪಾಲಿಥೀನ್‌ ಶೀಟ್‌ಗಳಿಂದ ಕಳೆ ಅಥವಾ ಭೂಮಿಯ ಮೇಲ್ಮೈಯನ್ನು ಮುಚ್ಚುವುದು, ಹೊದಿಸುವುದು.
  6. ನೀರನ್ನು ಬಸಿಯುವುದು.
  7. ಕಳೆಗಳನ್ನು ಕೊಯ್ದು ಹಾಕುವುದು.

ಈ ಕೆಳಕಂಡ ಪರಿಸ್ಥಿತಿಯಲ್ಲಿ ಅಥವಾ ಅನ್ಯ ಮಾರ್ಗವಿಲ್ಲದೆ ರಾಸಾಯನಿಕ ಕೀಟನಾಶಕಗಳನ್ನು ಎಚ್ಚರಿಕೆಯಿಂದ ಬಳಸಬೇಕು.

  1. ಕೈಯಲ್ಲಿ ಕಳೆ ಕೀಳದಿರುವುದಕ್ಕೆ ಆಗದಿದ್ದಾಗ.
  2. ಕಳೆ ಮತ್ತು ಸಸಿಗಳು ಒಂದೇ ರೀತಿ ಕಾಣುವಾಗ (ಭತ್ತ, ಗೋಧಿ) .
  3. ಕೃಷಿ ಕಾರ್ಮಿಕರಿಗೆ ಕೊಡುವ ಕೂಲಿ, ರಾಸಾಯನಿಕ ಕಳೆನಾಶಕ ಬಳಕೆಗಿಂತ ಹೆಚ್ಚಿದ್ದರೆ.
  4. ಕೃಷಿ ಕಾರ್ಮಿಕರು ಸಿಗದೆ ಇದ್ದಾಗ.

ರಾಸಾಯನಿಕ ನಿಯಂತ್ರಣ:

 ವ್ಯವಸಾಯದ ಜಮೀನಿನಲ್ಲಿ ಕಳೆಯು ಕಂಡಾಗ, ಬೆಳೆಗೆ ಶಿಫಾರಸು ಮಾಡಿರುವ ಕಳೆನಾಶಕಗಳನ್ನು ಉಪಯೋಗಿಸುವುದರಿಂದ ಬೇರೆ ಕಳೆ ಜೊತೆಯಲ್ಲಿ ಪಾರ್ಥೇನಿಯಂ ಸಹ ನಿಯಂತ್ರಿಸುತ್ತವೆ. ಬಂಜರು ಪ್ರದೇಶದಲ್ಲಿ ಒಂದು ವೇಳೆ ಸಿಂಪಡಣೆ ಮಾಡುವುದಾದರೆ, ಕಳೆಯು ಹಸಿರಾಗಿದ್ದಾಗ ಅದರ ಮೇಲೆ ಬೀಳುವ ತರಹ ಪೋಸೇಟ್‌ 8-10 ಮಿಲಿ ಲೀಟರ್‌, ಪ್ರತಿ ಲೀಟರ್‌ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಣೆ ಮಾಡಬೇಕು. ಕಳೆಯು ಚಿಕ್ಕದಿರುವಾಗ, ನಿಯಂತ್ರಣೆ ಸುಲಭ ಹಾಗೂ ಖರ್ಚು ಕಡಿಮೆ. ಇದರಿಂದ ಪರಿಸರವನ್ನು ಪಾರ್ಥೇನಿಯಂ ತರಹ ವಿನಾಶಕಾರಿ ಕಳೆಗಳಿಂದ ಕಾಪಾಡಲು ಸಾಧ್ಯವಾಗುತ್ತದೆ ಎಂಬುದು ಕೃಷಿ ತಜ್ಞರ ಅಭಿಪ್ರಾಯವಾಗಿದೆ.

ಪ್ರಾಣಿಗಳಿಗೂ ಕಂಟಕ:

ಜಾನುವಾರುಗಳು ಪಾರ್ಥೇನಿಯಂ ತಿನ್ನದಿದ್ದರೂ ಇದು ಬೆಳೆದ ಜಾಗದಲ್ಲಿ ಓಡಾಡಿದರೆ ಪ್ರಾಣಿಗಳಿಗೆ ಬಿಸಿಲಿನಲ್ಲಿ ಮೇಯುವಾಗ ಮೈ ತುರಿಸುವುದು ಹೆಚ್ಚಾಗುತ್ತದೆ. ಅನಿವಾರ್ಯ ಕಾರಣಗಳಿಂದ ಜಾನುವಾರುಗಳು ಇದನ್ನು ತಿಂದಾಗ ಇದರಲ್ಲಿನ ಮುಖ್ಯ ಕ್ರಿಯಾಶೀಲ ಪಾರ್ಥೇನಿಯಂನಿಂದ ಹಾಲು ಕೂಡ ಕಲುಷಿತ ವಾಗುತ್ತದೆ. ಇತರ ಸಾಕು ಪ್ರಾಣಿಗಳಾದ ಮೇಕೆ, ಕುರಿ, ಎಮ್ಮೆ ಮುಂತಾದವುಗಳಲ್ಲಿ ಕಳೆಯ ಸತತ ಸಂಪರ್ಕದಿಂದಾಗಿ ಅವುಗಳಲ್ಲಿ ಚರ್ಮ ವ್ಯಾಧಿಯಿಂದ ಕೂದಲುಗಳು ಉದುರುತ್ತವೆ ಎನ್ನುತ್ತಾರೆ ವಿಜ್ಞಾನಿಗಳು.