Agripedia

ಮಣ್ಣಿನ ಆರೋಗ್ಯ ತಿಳಿಯಲು ಮಣ್ಣು ಪರೀಕ್ಷೆ ಅಗತ್ಯ

12 November, 2020 8:13 AM IST By:

ಮಣ್ಣು ರೈತನ ಕಣ್ಣು’ ಎಂದೇ ಹೇಳುತ್ತಾರೆ. ಮನುಕುಲಕ್ಕೆ ಸೃಷ್ಟಿಯ ಕೊಡುಗೆಗಳಲ್ಲಿ ಮಣ್ಣು ಅತ್ಯಂತ ಅಮೂಲ್ಯ. ಇತರ ಜೀವಿಗಳಂತೆ ಮಣ್ಣು ಕೂಡ ಜೀವ ಹೊಂದಿರುವ ವಸ್ತುವಾಗಿದ್ದು, ಇದರ ಅರಿವಿಲ್ಲದೆ ಹೆಚ್ಚು ಇಳುವರಿ ಪಡೆಯುವ ಧಾವಂತದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಸೇರಿಸಿ ಮಣ್ಣಿನ ಆರೋಗ್ಯ ಹಾಳಾಗುತ್ತಿದೆ. ಮನುಷ್ಯ ತನ್ನ ಆರೋಗ್ಯ ಕಾಪಾಡಿಕೊಳ್ಳಲು ಕಾಲ ಕಾಲಕ್ಕೆ ಹೇಗೆ ಆರೋಗ್ಯ ತಪಾಸಣೆ ಮಾಡಿಸುತ್ತಾನೊ ಹಾಗೆಯೇ ಕಾಲ ಕಾಲಕ್ಕೆ ಮಣ್ಣಿನ ಆರೋಗ್ಯ ತಿಳಿಯಲು ಮಣ್ಣು ಪರೀಕ್ಷೆ ಅತ್ಯಗತ್ಯವಾಗಿರುತ್ತದೆ.

ಯಾವುದೇ ಬೆಳೆಯನ್ನು ಬೆಳೆದು ಅಧಿಕ ಇಳುವರಿ ಪಡೆಯಲು ಬೆಳೆಯುವ ಮಣ್ಣಿನ ಗುಣಧರ್ಮವನ್ನು ಅರಿಯುವುದು ತುಂಬಾ ಮುಖ್ಯ. ಮಣ್ಣಿನ ರಾಸಾಯನಿಕ, ಭೌತಿಕ ಹಾಗೂ ಜೈವಿಕ ಗುಣಲಕ್ಷಣಗಳು ಯಾವುದೇ ಬೆಳೆಯ ಬೆಳವಣಿಗೆಯ ಮೇಲೆ ಪರಿಣಾಮವನ್ನು ಬೀರುತ್ತವೆ. ನಮ್ಮ ಮಣ್ಣನ್ನು ಅರಿತು ಅದಕ್ಕೆ ಹೊಂದುವಂತಹ ಬೆಳೆಗಳನ್ನು ಹಾಗೂ ತಳಿಗಳನ್ನು ಬೆಳೆದಲ್ಲಿ ಅತಿ ಹೆಚ್ಚಿನ ಉತ್ಪಾದನೆಯನ್ನು ಪಡೆಯಬಹುದು. ಕರ್ನಾಟಕದಲ್ಲಿನ ಬಹು ಪಾಲು ಮಣ್ಣುಗಳಲ್ಲಿ ಮುಖ್ಯ ಹಾಗೂ ಲಘುಪೋಷಕಾಂಶಗಳ ಕೊರತೆ ಕಂಡುಬಂದಿದ್ದು ಈ ಪೋಷಕಾಂಶಗಳು ಬೆಳೆಯ ಬೆಳವಣಿಗೆಯ ಮೇಲೆ ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತವೆ.  ಹಾಗಾಗಿ ಮಣ್ಣು ಪರೀಕ್ಷೆ ಮಾಡಿಸುವುದರ ಮೂಲಕ ಮಣ್ಣಿನಲ್ಲಿರುವ ಕೊರತೆಗಳನ್ನು ಅರಿತು ಅವುಗಳನ್ನು ಸರಿಪಡಿಸಿ ಬೆಳೆಗೆ ಬೇಕಾಗುವಂತಹ ಪೂರಕ ವಾತಾವರಣ ನಿರ್ಮಿಸಬಹುದು. ಈಗಾಗಲೇ ಮುಂಗಾರಿನ ಹಂಗಾಮು ಮುಕ್ತಾಯವಾಗಿದ್ದು ಮಣ್ಣು ಪರೀಕ್ಷಿಸಲು ಮಾದರಿ ತೆಗೆಯಲು ಸೂಕ್ತ ಕಾಲವೆನಿಸಿದೆ.

ಮಣ್ಣು ಪರೀಕ್ಷೆ ಏಕೆ ಮಾಡಬೇಕು ?

  • ಬೆಳೆಗಳಿಗೆ ಬೇಕಾಗುವ ಮುಖ್ಯ ಪೋಷಕಾಂಶಗಳ (ಸಾರಜನಕ, ರಂಜಕ, ಪೊಟ್ಯಾಷ್, ಕ್ಯಾಲ್ಸಿಯಮ್, ಮೆಗ್ನೆಸಿಯಮ್, ಗಂಧಕ ಹಾಗೂ ಸತು, ಬೋರಾನ್, ಕಬ್ಬಿಣ, ತಾಮ್ರ, ಮ್ಯಾಂಗನೀಸ್ ಮತ್ತು ಮಾಲಿಬ್ಡಿನಮ್) ಲಭ್ಯತೆಯ ಪ್ರಮಾಣ ಹಾಗೂ ಕೊರತೆಯನ್ನು ತಿಳಿಯಲು.
  • ಮಣ್ಣಿನಲ್ಲಿರುವ ರಸಸಾರ (ಹುಳಿ/ಕ್ಷಾರ). ಲವಣಾಂಶ ಪ್ರಮಾಣವನ್ನು ತಿಳಿದು, ಸುಧಾರಣೆಗೆ ಬೇಕಾಗುವ ಸುಣ್ಣ/ಜಿಪ್ಸಂ ಪ್ರಮಾಣ ನಿರ್ಧರಿಸಲು.
  • ನೀರು ಹಿಡಿದಿಟ್ಟುಕೊಳ್ಳುವಿಕೆ, ಮಣ್ಣಿನ ಸ್ವರೂಪ, ರಚನೆ, ಸಾಂದ್ರತೆ ತಿಳಿಯಲು
  • ಮಣ್ಣಿನ ಪರೀಕ್ಷೆ, ಮಣ್ಣಿನ ವರ್ಗೀಕರಣ ಮತ್ತು ಮಣ್ಣಿನ ಫಲವತ್ತತೆಯ ನಕ್ಷೆ ತಯಾರಿಸಲು.

ಮಣ್ಣಿನ ಮಾದರಿ ಏಲ್ಲಿ ತೆಗೆಯಬಾರದು ?

  • ಮಳೆಗಾಲದಲ್ಲಿ ತೋಟಕ್ಕೆ ನೀರು ಹಾಯಿಸಿದ ನಂತರ, ಬೆಳೆಗಳ ತ್ಯಾಜ್ಯ ವಸ್ತುಗಳನ್ನು ಸುಟ್ಟ ಜಾಗದಲ್ಲಿ.
  • ಗೊಬ್ಬರ ಹಾಕಿದ ಪ್ರದೇಶ, ದಿಣ್ಣೆ ಕಾಲುವೆಗಳ ಸಮೀಪ, ಜೌಗು ಪ್ರದೇಶ, ಗಿಡದ ಬುಡ.
  • ಗೊಬ್ಬರದ ಚೀಲಗಳಲ್ಲಿ ಮಣ್ಣಿನ ಮಾದರಿ ಸಂಗ್ರಹಿಸಬಾರದು.

ಮಣ್ಣಿನ ಮಾದರಿಯನ್ನು ತೆಗೆಯುವ ಕಾಲ:

  • ಬೆಳೆ ಕಟಾವಾದ ನಂತರ, ಬೆಳೆ ಬಿತ್ತುವ ಮೊದಲು, ಬೆಳೆಯಿಲ್ಲದೆ ಇರುವಾಗ , ರಸಗೊಬ್ಬರ ಹಾಕುವ ಮೊದಲು ಅಥವಾ ರಸಗೊಬ್ಬರ ಹಾಕಿದ ಮೂರು ತಿಂಗಳ ನಂತರ, ಪ್ರತಿ 3 ವರ್ಷಗಳಿಗೊಮ್ಮೆ.

ಮಣ್ಣು ಮಾದರಿ ತೆಗೆಯುವ ಆಳ:

  • ಭತ್ತ, ರಾಗಿ, ಶೇಂಗಾ, ಬದನೆ, ಬೆಂಡೆ ಮತ್ತಿತರ ತರಕಾರಿ ಬೆಳೆಗಳಲ್ಲಿ : 6-9 ಅಂಗುಲ
  • ಅಡಿಕೆ, ಕಾಫಿ, ತೆಂಗು, ಬಾಳೆ ಮುಂತಾದ ತೋಟಗಾರಿಕೆ ಬೆಳೆಗಳಲ್ಲಿ :  12-16 ಅಂಗುಲ

ಮಣ್ಣು ಪರೀಕ್ಷೆಗೆ ಮಾದರಿಗಳನ್ನು ತೆಗೆಯುವ ಹಂತಗಳು:

ಹಂತ-1: ವಿವಿಧ ಗುಣದ ಪ್ರದೇಶಗಳಲ್ಲಿ ಕನಿಷ್ಠ 8 ರಿಂದ 10 ಉಪ ಮಾದರಿಗಳನ್ನು ತೆಗೆಯಲು ಜಾಗಗಳನ್ನು ಗುರ್ತಿಸಿ ಕಸ ಇತ್ಯಾದಿ ತೆಗೆಯುವುದು.

ಹಂತ-2:  "ಗಿ" ಆಕಾರದಲ್ಲಿ ಭೂಮಿಯನ್ನು ನೇಗಿಲನಾಘದವರೆಗೆ (15 ಸೆಂ. ಮೀ.) ಅಗೆದು ಎರಡೂ ಕಡೆಗಳಿಂದ 1.5 ಸೆಂ. ಮೀ. ನಷ್ಟು ದಪ್ಪದ ಮಣ್ಣಿನ ಪದರವನ್ನು ಸಂಗ್ರಹಿಸಬೇಕು. ಒಂದು ಎಕರೆ ಪ್ರದೇಶಕ್ಕೆ 8-10 ಮಣ್ಣಿನ ಉಪ ಮಾದರಿಗಳನ್ನು ಸಂಗ್ರಹಿಸುವುದು.

ಹಂತ-3: ಸಂಗ್ರಹಿಸಿದ ಮಣ್ಣಿನ ಮಾದರಿಗಳನ್ನು ಮಿಶ್ರ ಮಾಡಿ ಕಲ್ಲು, ಕಸ ಕಡ್ಡಿಗಳನ್ನು ತೆಗೆದು ಪುಡಿ ಮಾಡುವುದು.

ಹಂತ-4:  ಚತುರ್ಥಾಂಶ ಪದ್ಧತಿಯಂತೆ ಎದುರು ಭಾಗಗಳನ್ನು ತೆಗೆದು ಸುಮಾರು ಒಂದು ಕಿ. ಗ್ರಾಂ ಮಣ್ಣಿನ ಮಾದರಿಯನ್ನು ಸಂಗ್ರಹಿಸುವುದು.

ಹಂತ-5: ಮಣ್ಣನ್ನು ನೆರಳಿನಲ್ಲಿ ಒಣಗಿಸಿ ಪ್ಲಾಸ್ಟಿಕ್ ಚೀಲಗಳಲ್ಲಿ ಶೇಖರಿಸಿ. ಪೂರ್ಣ ಮಾಹಿತಿಯೊಂದಿಗೆ ಪರೀಕ್ಷೆಗೆ ಕೊಡುವುದು.

ಮಣ್ಣು ಆರೋಗ್ಯ ಚೀಟಿ:

ಪ್ರತಿ ರೈತನ ಹೊಲದ ಮಣ್ಣಿನ ಗುಣಧರ್ಮ, ಮುಖ್ಯ ಹಾಗೂ ಲಘುಪೋಷಕಾಂಶಗಳ ಪ್ರಮಾಣ, ಮಣ್ಣು ಪರೀಕ್ಷೆ ಆಧಾರಿತ ಗೊಬ್ಬರಗಳ ಶಿಫಾರಿಸ್ಸುಳ್ಳ ಚೀಟಿ.

ಮಣ್ಣು ಪರೀಕ್ಷೆಯಿಂದ ರೈತರಿಗೆ ಏನು ಉಪಯೋಗ:

  • ಸಮತೋಲನ ಪ್ರಮಾಣದಲ್ಲಿ ಗೊಬ್ಬರ ಕೊಡಲು ಅನುಕೂಲ.
  • ಸಮಸ್ಯಾತ್ಮಕ ಮಣ್ಣುಗಳ ಗುರುತಿಸಿವಿಕೆ, ಹಾಗೂ ಸುಧಾರಣೆ.
  • ಕಡಿಮೆ ಸಾಗುವಳಿ ವೆಚ್ಚ. ಸುಸ್ಥಿರ ಇಳುವರಿ

ಮಣ್ಣು ಪರೀಕ್ಷೆಯಿಂದ ವಿಜ್ಞಾನಿಗಳಿಗೆ / ಅಧಿಕಾರಿಗಳಿಗೆ ಏನು ಉಪಯೋಗ:

  • ಗ್ರಾಮವಾರು ಮಣ್ಣು ಪರೀಕ್ಷೆ ಫಲಿತಾಂಶವನ್ನು ಕ್ರೂಡಿಕರಿಸಿ ಮಣ್ಣಿನ ಆರೋಗ್ಯ ಪಂಗಡ ಗುರುತಿಸುವುಕೆ.
  • ಜಿ.ಪಿ.ಎಸ್ ಆಧಾರಿತ ಪ್ರತಿ ರಾಜ್ಯ, ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಪಂಚಾಯಿತಿ, ಗ್ರಾಮದ ಮಣ್ಣು ಆರೋಗ್ಯ ನಕ್ಷೆ ತಯಾರಿಸುವಿಕೆ
  • ಬೆಳೆ ಆಧಾರಿತ ಪೋಷಕಾಂಷಗಳ ಹಾಗೂ ಭೂ ಬಳಕೆಯ ಶಿಪಾರಸ್ಸು.

ಲೇಖಕರು : ಡಾ. ಸುನಿಲ್ ಕುಮಾರ್. ಕೆ ಮತ್ತು ಡಾ. ಮಧುರಿಮಾ ವಿನೋದ್

ಸಹಾಯಕ ಸಂಶೋಧಕರು, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಬ್ರಹ್ಮಾವರ, ಉಡುಪಿ- 576213