Agripedia

ಈ ರೈತಮಿತ್ರ ಕೀಟಗಳು ನಿಮ್ಮ ಹೊಲ, ತೋಟದಲ್ಲಿದ್ದರೆ ಕೀಟನಾಶಕ ಬಳಸುವ ಅಗತ್ಯವಿಲ್ಲ

18 June, 2021 8:17 PM IST By:

ಕೃಷಿಕರಿಗೆ ನೂರಾರು ಕೀಟಗಳು ಕಾಟ ಕೊಡುತ್ತಲೇ ಇರುತ್ತವೆ. ಆದರೆ ಪ್ರಕೃತಿಯಲ್ಲಿ ಕೆಲವೇ ಕೆಲವು ಕೀಟಗಳು ಅಥವಾ ಹುಳುಗಳು ಮಾತ್ರ ಕೃಷಿಕರ ಮಿತ್ರರಾಗಿ ಕೆಲಸ ಮಾಡುತ್ತವೆ. ಕೆಲವು ಕೀಟಗಳು ಪರಭಕ್ಷಕಗಳಾಗಿದ್ದು, ಬೆಳೆಗಳನ್ನು ತಿಂದು ತೇಗುವ ಕೀಟಗಳನ್ನು ಕೊಂದು ತಿಂದರೆ, ಹಲವು ಕೀಟಗಳು ರೈತರ ಕಣ್ಣಿಗೆ ಕಾಣದೆ, ಮಣ್ಣಿನಲ್ಲೇ ಅಡಗಿ ಕುಳಿತು, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತಾ ಹೋಗುತ್ತವೆ. ಹೀಗಾಗಿ ಕೃಷಿ ಭೂಮಿಯಲ್ಲಿ ಎರೆ ಹುಳು, ಶಿವನ ಕುದುರೆ, ಗುಲಗಂಜಿ ಹುಳು, ಸಗಣಿ ಹುಳು ರೀತಿಯ ಹಲವು ಕೀಟಗಳು ಇರಬೇಕಾಗುತ್ತದೆ.

ಈ ರೈತ ಮಿತ್ರ ಕೀಟಗಳೆಲ್ಲವೂ ಪ್ರಕೃತಿ ರರೈತರಿಗೆ ನೀಡಿರುವ ಬಹುದೊಡ್ಡ ಕೊಡುಗೆಗಳಾಗಿವೆ. ಪ್ರತಿ ಬಾರಿಯೂ ಕೀಟ ಬಾಧೆ ಕಾಣಿಸಿಕೊಂಡಾಗ ಸಾಮಾನ್ಯವಾಗಿ ರೈತರು ಕೀಟ ನಾಶಕಗಳನ್ನು ಬೆಳೆಗೆ ಸಿಂಪಡಿಸುತ್ತಾರೆ. ಆದರೆ ಆ ಕೀಟನಾಶಕದ ಪ್ರಭಾವ ಕಡಿಮೆಯಾದಂತೆ ಮತ್ತೆ ಬೇರೆ ಕೀಟಗಳು ಅಥವಾ ಮೊದಲಿದ್ದ ಪ್ರಜಾತಿಯ ಬೆಳೆ ಭಕ್ಷಕ ಕೀಟಗಳೇ ಮತ್ತೆ ಬೆಳೆ ಮೇಲೆ ಹಾವಳಿ ಮಾಡುತ್ತವೆ. ಹೀಗಾದಾಗ ರೈತ ಮತ್ತೊಮ್ಮೆ ಕೀಟನಾಶಕ ಸಿಂಪಡಿಸಬೇಕು. ಆದರೆ, ಮಾರುಕಟ್ಟೆಯಲ್ಲಿ ಯಾವುದೇ ಕೀಟನಾಶಕ ಕಡಿಮೆ ಬೆಲೆಗೆ ಸಿಗುವುದಿಲ್ಲ. ಎಲ್ಲವುಗಳ ಬೆಲೆಯೂ ಗಗನಮುಖಿ. ಹೀಗಾಗಿ ಹಾನಿಕಾರಕ ಕೀಟಗಳನ್ನು ನೈಸರ್ಗಿಕವಾಗಿಯೇ ಹತೋಟಿಗೆ ತರಲು ಈ ಪರಭಕ್ಷಕ ಕೀಟಗಳು ರೈತರಿಗೆ ನೆರವಾಗುತ್ತವೆ. ಅಲ್ಲದೆ, ಇನ್ನೊಂದೆಡೆ ಮಣ್ಣಿನ ಒಳಗಿರುವ ಹುಳುಗಳು ಮಣ್ಣಿನ ಫಲವತ್ತತೆ ಹೆಚ್ಚಿಸಿ, ಉತ್ತಮ ಇಳುವರಿ ಪಡೆಯಲು ನೆರವಾಗುತ್ತವೆ.

ಪ್ರಕೃತಿಯಿಂದಲೇ ರಿಪೇರಿ

ಪ್ರಕೃತಿಯಲ್ಲಿ ಕ್ಷಣ ಕ್ಷಣವೂ ಅಸಂಖ್ಯ ಪ್ರಕ್ರಿಯೆಗಳು ನಡೆಯುತ್ತಿರುತ್ತವೆ. ನಿಸರ್ಗ ಮಾತೆ ಆರಂಭದಲ್ಲೇ ಸೃಷ್ಟಿಸಿದ್ದ ಸಮತೋಲನವನ್ನು ಬುದ್ಧಿವಂತ ಮನುಷ್ಯ ಜೀವಿಗಳು ಹಾಳುಗೆಡವುತ್ತಾ ಬಂದಿದ್ದಾರೆ. ಹಾಗಂತ ಪ್ರಕೃತಿ ಸುಮ್ಮನೆ ಕೂರುವುದಿಲ್ಲ. ಅದು ತನ್ನ ಮಡಿಲಲ್ಲಿ ನಿತ್ಯವೂ ಹುಟ್ಟಿ-ಸಾಯುವ ಸಣ್ಣ ಪುಟ್ಟ ಜೀವಿಗಳನ್ನು ಬಳಸಿಕೊಂಡು, ಮನುಷ್ಯನು ಕೆಡಿಸಿರುವ ಎಲ್ಲ ವ್ಯವಸ್ಥೆಗಳನ್ನೂ ರಿಪೇರಿ ಮಾಡುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಈಗ ಆಹಾರ ತ್ಯಾಜ್ಯವನ್ನೇ ತೆಗೆದುಕೊಳ್ಳಿ. ಅದು ಎಂದಿಗೂ ನಿರುಪಯುಕ್ತವಾಗುವುದೇ ಇಲ್ಲ. ನಾವು ತಿಂದು, ತ್ಯಾಜ್ಯವೆಂದು ಬಿಸಾಡಿದ ಅಳಿದುಳಿದ ಆಹಾರ ಮತ್ತೆ ಕೆಲವು ಜೀವಿಗಳಿಗೆ ಊಟವಾಗುತ್ತದೆ. ಸುಮ್ಮನೇ ನೆಲಕ್ಕೆ ಬಿದ್ದ ಒಂದು ಬ್ರೆಡ್ಡಿನ ಚೂರು ಕೂಡ ಅಸಂಖ್ಯ ಸೂಕ್ಷö್ಮ ಜೀವಿಗಳ ಹೊಟ್ಟೆ ತುಂಬಿಸುತ್ತದೆ. ಇಂತಹ ತ್ಯಾಜ್ಯವನ್ನೇ ತಿಂದು ಬದುಕು ಕಟ್ಟಿಕೊಳ್ಳುವ ಜೀವಿಗಳು ಕೃಷಿಗೆ ಪೂರಕವಾಗಿ ಕೆಲಸ ಮಾಡುತ್ತವೆ. ಅಂತಹ ಹುಳು, ಕೀಟಗಳ ಪರಿಚಯ ಇಲ್ಲಿದೆ.

ಸಗಣಿ ಹುಳು

ಸಗಣಿಯನ್ನೇ ತಿಂದುAಡು, ಅದರೊಳಗೇ ಜೀವಿಸುವ ಹಾಗೂ ಸಗಣಿಯನ್ನು ಉಂಡೆಯನ್ನಾಗಿ ಮಾಡಿ ಉರುಳಿಸಿಕೊಂಡು ಹೋಗುವ ಸಗಣಿ ಹುಳುವನ್ನು ಒಂದು ನೈಸರ್ಗಿಕ ಗೊಬ್ಬರದ ಉತ್ಪಾದಕ ಎಂದು ಕರೆಯಲು ಅಡ್ಡಿಯಿಲ್ಲ. ಅದರಲ್ಲೂ ಹೊಲ ಅಥವಾ ತೋಟಗಳಿಗೆ ಸಗಣಿ ಗೊಬ್ಬರವನ್ನು ಹಾಕಿದಾಗ ಅದರಲ್ಲಿ ಈ ಸಗಣಿ ಹುಳುಗಳಿದ್ದರೆ ನಿಮ್ಮ ಭೂಮಿಯ ಫಲವತ್ತತೆ ಹೆಚ್ಚಲಿದೆ ಎಂದರ್ಥ. ಸಗಣಿಯ ಜೊತೆ ಭೂಮಿಯ ಒಳಗೆ ಸೇರಿಕೊಳ್ಳುವ ಈ ಹುಳುಗಳು ಸಗಣಿಯನ್ನು ಸೇವಿಸಿ, ಅದನ್ನೇ ವಿಸರ್ಜಿಸುವುದರಿಂದ ಫಲವತ್ತಾದ ಗೊಬ್ಬರ ಉತ್ಪಾದನೆಯಾಗುತ್ತದೆ. ಇದು ಬೆಳೆಗಳಿಗೆ ಅಗತ್ಯವಿರುವ ಹಲವು ಪೋಷಕಾಂಶಗಳ ಆಕರವಾಗಿರುತ್ತದೆ.

ಎರೆಹುಳು

ಎರೆ ಹುಳುಗಳನ್ನು ರೈತರಿಗೆ ಪರಿಚಯಿಸುವ ಅಗತ್ಯವೇ ಇಲ್ಲ. ಎರೆ ಹುಳುಗಳು ನಿಜವಾದ ‘ರೈತ ಮಿತ್ರ’ ಎಂಬ ಖ್ಯಾತಿಗೆ ಪಾತ್ರವಾಗಿವೆ. ಮಳೆ ಹುಳು ಎಂದೂ ಕರೆಯುವ ಈ ಹುಳುಗಳು ಉತ್ಪಾದಿಸುವಷ್ಟು ಪ್ರಮಾಣದ ಗೊಬ್ಬರವನ್ನು ಪ್ರಕೃತಿಯಲ್ಲಿರುವ ಮತ್ತಾವ ಹುಳು ಅಥವಾ ಕೀಟ ಕೂಡ ಉತ್ಪಾದಿಸಲಾರದು. ಬಿಡುವಿರದೆ ದುಡಿಮೆ ಮಾಡುವ ಈ ಹುಳುಗಳು ಒಂದು ದಿನಕ್ಕೆ ತಮ್ಮ ದೇಹದ ತೂಕದ ಒಂದೂವರೆ ಪಟ್ಟು ಮಣ್ಣನ್ನು ಬಗೆದು ಗೊಬ್ಬರವಾಗಿ ಪರಿರ್ತಿಸುತ್ತವೆ. ಹೀಗಾಗಿ ನಿಮ್ಮ ಒಂದು ಎಕರೆ ಜಮೀನಿನಲ್ಲಿ 2 ಲಕ್ಷ ಎರೆ ಹುಳುಗಳಿ ಇವೆ ಎಂದು ಅಂದುಕೊAಡರೆ ಒಂದು ದಿನಕ್ಕೆ 2 ಟನ್ ಗೊಬ್ಬರವನ್ನು ಉತ್ಪಾದಿಸುತ್ತವೆ. ಮಣ್ಣನ್ನು ತಿಂದು ಮಲ ವಿಸರ್ಜನೆ ಮಾಡುವ ಈ ಹುಳು ಒಂದು ನಿಶಾಚರಿ ಜೀವಿ. ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಎಂದೂ ಈ ಹುಳು ಭೂಮಿಯ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಬದಲಿಗೆ ಒಂದು ರಾತ್ರಿಗೆ 6ಕ್ಕೂ ಹೆಚ್ಚು ಬಾರಿ ಭೂಮಿಯ ಮೇಲ್ಪದರಕ್ಕೆ ಬಂದು ಹೋಗುತ್ತದೆ.

ಶಿವನ ಕುದುರೆ

ಶಿವನ ಕುದುರೆಯನ್ನು ನೇಗಿಲ ಯೋಗಿಗೆ ಹೋಲಿಸುತ್ತಾರೆ. ಹಿಂದೆಲ್ಲಾ ಕೃಷಿ ಭೂಮಿಯಲ್ಲಿ ಹೇರಳವಾಗಿ ಕಾಣಸಿಗುತ್ತಿದ್ದ ಈ ಹುಳು ಈಗ ಅತ್ಯಂತ ಅಪರೂಪದ ಕೀಟವಾಗಿದೆ. ರೈತರು ಸಾವಯವ ಕೃಷಿ ಪದ್ಧತಿಯನ್ನು ಬಿಟ್ಟು ರಾಸಾಯನಿಕ ಹಾಗೂ ವಿಷಕಾರಿ ಕೀಟನಾಶಕಗಳನ್ನು ಬೆಳೆಗೆ ಸಿಂಪಡಿಸಲು ಆರಂಭಿಸಿದ ನಂತರ ಈ ಹುಳುಗಳ ಸಂಖ್ಯೆ ಕಡಿಮೆಯಾಗಿದೆ. ಬೆಳೆಯ ಎಲೆ, ಕಾಂಡದ ಮೇಲೆ ಅಂಟಿಕೊಳ್ಳುವ ಹಿಟ್ಟು ತಿಗಣೆ, ಕಪ್ಪು ಮತ್ತು ಬಿಳಿ ನುಸಿ (ಸೀಡಿ) ಹುಳುಗಳನ್ನು ತಿನ್ನುವ ಮೂಲಕ ಬೆಳೆ ಸೊರಗುವುದನ್ನು ತಪ್ಪಿಸುವುದು ಈ ಶಿವನ ಕುದುರೆಯ ಕೆಲಸ. ಇದರೊಂದಿಗೆ ಬೆಳೆಗೆ ಹಾನಿಯುಂಟು ಮಾಡುವ ಹಲವಾರು ಸಣ್ಣ ಪುಟ್ಟ ಕೀಟಗಳನ್ನೂ ಹಸಿರು ಬಣ್ಣದ ಶಿವನಕುದುರೆ ತಿನ್ನುತ್ತದೆ.

ಗುಲಗಂಜಿ ಹುಳು

ಕೆಂಪಗೆ ಮಿರಿ ಮಿರಿ ಮಿನುಗುವ ಚಿಪ್ಪನ್ನು ಮೈಮೇಲೆ ಹೊದ್ದು ಗಿಡದಿಂದ ಗಿಡಕ್ಕೆ ಹಾರುತ್ತಾ ಸಾಗುವ ಗುಲಗಂಜಿ ಹುಳು, ಕಾಂಡ ಕೊರೆಯುವ ಸಣ್ಣ ಹುಳುಗಳು ಹಾಗೂ ಹಿಟ್ಟು ತಿಗಣೆ, ಕಪ್ಪು ಮತ್ತು ಬಿಳಿ ನುಸಿ ಹುಳುಗಳನ್ನು ಭಕ್ಷಿಸುತ್ತದೆ. ಆದರೆ, ರಾಸಾಯನಿಕ ಹಾಗೂ ವಿಷಕಾರಿ ಕೀಟನಾಶಕಗಳ ಬಳಕೆಯಿಂದ ಈ ಹುಳುಗಳು ಕೂಡ ಮರೆಯಾಗಿವೆ.

ಕೀಟನಾಶಕಗಳ ಬಳಕೆಯು ಹಾರುವ ಕೀಟಗಳಿಗೆ ಮಾತ್ರವಲ್ಲದೆ ಭೂಮಿಯಲ್ಲಿರುವ ರೈತ ಮಿತ್ರ ಹುಳುಗಳಿಗೂ ಮಾರಕವಾಗಿದೆ. ಹೀಗಾಗಿ, ಕೀಟನಾಶಕಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ, ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರೆ ಕೃಷಿಗೆ ಪೂರಕವಾಗಿರುವ ಹುಳು, ಕೀಟಗಳು ಹೊಲಗದ್ದೆಗಳಲ್ಲಿ ಹೆಚ್ಚಿ, ಬೆಳೆ ಭಕ್ಷಕ ಕೀಟಗಳನ್ನು ಸಂಹರಿಸುತ್ತವೆ. ಜೊತೆಗೆ ಇದರಿಂದ ಪ್ರಾಕೃತಿಕ ಸಮತೋಲನವನ್ನೂ ಕಾಪಾಡಿದಂತಾಗುತ್ತದೆ.