ರಾಜ್ಯದ ಎಲ್ಲಾ ಭಾಗದಲ್ಲಿ ಶೇಂಗಾ ಬೆಳೆಯಲಾಗುತ್ತದೆ. ಈ ದ್ವಿದಳ ಧಾನ್ಯ ಎಣ್ಣೆಕಾಳು ಬೆಳೆಯಾಗಿದ್ದು, ಎಲ್ಲಾ ರೀತಿಯ ಹವಾಗುಣುಕ್ಕೂ ಹೊಂದಿಕೊಳ್ಳುವ ಗುಣ ಹೊಂದಿದೆ. ಇದನ್ನು ನೀರಾವರಿ ಹಾಗೂ ಖುಷ್ಠಿಯಲ್ಲಿ ಬೆಳೆಯಲಾಗುತ್ತದೆ.ನೀರಾವರಿ ಬೆಳೆಯಿಂದ ಹೆಚ್ಚಿನ ಇಳುವರಿ ಪಡೆಯಬಹುದು. ಉತ್ತಮ ತಳಿಗಳನ್ನು ಆಯ್ಕೆ ಮಾಡಿಕೊಂಡು ಬಿತ್ತಿದರೆ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ.
ಇಲ್ಲಿದೆ ಹೆಚ್ಚು ಇಳುವರಿ ಕೊಡುವ ಶೇಂಗಾ ತಳಿಗಳು
ಜಿಕೆವಿಕೆ-5 ತಳಿಯ ವಿಶೇಷತೆ: ಇದನ್ನು ಮುಂಗಾರು ಮತ್ತು ಬೇಸಿಗೆಗೆ ಬೆಳೆಯಬಹುದು.110-120 ದಿನಗಳಲ್ಲಿ ಈ ಬೆಳೆ ಕಟಾವಿಗೆ ಬರುತ್ತದೆ. ನೀರಾವರಿಯಲ್ಲಿ 11 ರಿಂದ 12 ಕ್ವಿಂಟಲ್ ಪ್ರತಿ ಎಕರೆಗೆ ಬೆಳೆಯಬಹುದು. ಕುಷ್ಕಿಯಲ್ಲಿ 8 ರಿಂದ 10 ಕ್ವಿಂಟಾಲ್ ಬೆಳೆಯಬಹುದು. ಬೆಳೆ ಕಟಾವಿನವರೆಗೂ ಎಲೆಗಳು ಹಸಿರಾಗಿರುತ್ತವೆ. ತಡವಾದ ಎಲೆಚುಕ್ಕೆ ರೋಗಕ್ಕೆ ಮಧ್ಯಮವಾಗಿ ನಿರೋಧಕತೆ ಹೊಂದಿದೆ. ಗಾಢ ಹಸಿರು ಬಣ್ಣದ ಎಲೆಗಳನ್ನು ಹೊಂದಿರುತ್ತದೆ.
ಐಸಿಜಿವಿ-91114 ಮುಂಗಾರು ಮತ್ತು ಬೇಸಿಗೆಯಲ್ಲಿ ಬಿತ್ತಬಹುದು. 95 ರಿಂದ 100 ದಿನಗಳಲ್ಲಿ ಕಟಾವಿಗೆ ಬರುತ್ತದೆ. 8 ರಿಂದ 10 ಕ್ವಿಂಟಾಲ್ ಪ್ರತಿ ಎಕರೆಗೆ ಪಡೆಯಬಹುದು.ಇದು ಅಲ್ಪಾವಧಿಯ ತಳಿಯಾಗಿದೆ.
ಕೆಸಿಜಿ-6 ತಳಿಯನ್ನು ಮುಂಗಾರು ಮತ್ತು ಬೇಸಿಗೆಯಲ್ಲಿ ಬಿತ್ತಬಹುದು. 110-115 ದಿನಗಳ ಕಾಲಾವಧಿಯಲ್ಲಿ ಕಟಾವಿಗೆ ಬರುತ್ತದೆ. ಪ್ರತಿ ಎಕರೆಗೆ 10 ರಿಂದ 12 ಕ್ವಿಂಟಲ್ ಇಳುವರಿ ಪಡೆಯಬಹುದು. ಅಲ್ಪಾವಧಿ ತಳಿಯಾಗಿದ್ದು, ಅಧಿಕ ಎಣ್ಣೆ ಅಂಶ ಹೊಂದಿರುತ್ತದೆ.
ಜಿಪಿಬಿಡಿ-4 ತಳಿಯನ್ನು ಸಹ ಮುಂಗಾರು ಮತ್ತು ಬೇಸಿಗೆಯಲ್ಲಿ ಬಿತ್ತಬಹುದು. 105-110 ದಿನಗಳವರೆಗೆ ಕಟಾವಿಗೆ ಬರುತ್ತದೆ. ಇದನ್ನು ಪ್ರತಿ ಎಕರೆಗೆ 6 ರಿಂದ 8 ಕ್ವಿಂಟಾಲ್ ಇಳುವರಿ ಪಡೆಯಬಹುದು. ತುಕ್ಕುರೋಗ ಮತ್ತು ಎಲೆ ಚುಕ್ಕೆ ರೋಗಕ್ಕೆ ನಿರೋಧಕ ತಳಿಯಾಗಿದೆ.
ಟಿಎಂವಿ-2 ಇದನ್ನೂ ಸಹ ಮುಂಗಾರು ಮತ್ತು ಬೇಸಿಗೆಯಲ್ಲಿ ಬಿತ್ತಬಹುದು. ಎಲ್ಲಾ ವಲಯಗಳಲ್ಲಿ ಬೆಳೆಯಬಹುದು. 100 ರಿಂದ 120 ದಿನಗಳಲ್ಲಿ ಕಟಾವಿಗೆ ಬರುತ್ತದೆ. 8 ರಿಂದ 10 ಕ್ವಿಂಟಾಲ್ ಪ್ರತಿ ಎಕರೆಗೆ ಪಡೆಯಬಹುದು. ಜಿಎಲ್-24 ತಳಿಯು 95 ರಿಂದ 100 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಕಾಯಿ ಮತ್ತು ಬೀಜ ದಪ್ಪ ಮತ್ತು ಆಕರ್ಷಕವಾಗಿರುತ್ತದೆ.
ಯಾವ ನೆಲಗಡಲೆ ಬೀಜ ಉತ್ತಮ: ನೆಲಗಡಲೆ ತಳಿ ಐಸಿಜಿವಿ 03043 ಭಾರತದಲ್ಲಿ ಬೆಳೆಯುವ ತಳಿಗಳಲ್ಲಿ 53% ನಷ್ಟು ಹೆಚ್ಚಿನ ತೈಲ ಅಂಶವನ್ನು ಹೊಂದಿದೆ. ಸಾಮಾನ್ಯ ತಳಿಗಳು ಸುಮಾರು 48% ಅನ್ನು ಹೊಂದಿವೆ ಮತ್ತು ರೈತರು ಉತ್ಪನ್ನದಲ್ಲಿ ಪ್ರತಿ ಹೆಚ್ಚುವರಿ 1% ತೈಲದೊಂದಿಗೆ ಹೆಚ್ಚಿನ ಬೆಲೆಯನ್ನು ಪಡೆಯುತ್ತಾರೆ.
ಬೀಜೋಪಚಾರ : ಬಿತ್ತನೆಗೆ ಮುಂಚೆ ನೆಲಗಡಲೆ (ಶೇಂಗಾ) ಬೀಜವನ್ನು 2.5 ಗ್ರಾಂ ಥೈರಾಮ್ ಪುಡಿಯನ್ನು ಪ್ರತಿ ಕಿ.ಗ್ರಾಂ ಬೀಜಕ್ಕೆ ಬೆರಸಿ, ನೆರಳಿನಲ್ಲಿ ಒಣಗಿಸಬೇಕು. ತದನಂತರ ಒಂದು ಎಕರೆ ಬಿತ್ತನೆ ಬೀಜಕ್ಕೆ 150 ಗ್ರಾಂ ರೈಜೋಬಿಯಂ ಮತ್ತು 400 ಗ್ರಾಂ ರಂಜಕ ಕರಗಿಸುವ (ಪಿಎಸ್.ಬಿ) ಜೀವಾಣು ಜೈವಿಕ ಗೊಬ್ಬರಗಳಿಂದ ಉಪಚರಿಸಿ ಬಿತ್ತನೆಗೆ ಬಳಸಬಹುದು. ಗೊಣ್ಣೆ ಹುಳು, ಅಥವಾ ಗೆದ್ದಲು ಹುಳುಗಳ ಬಾಧೆಯಿದ್ದಲ್ಲಿ, ಅವುಗಳ ಹತೋಟಿಗೆ ಪ್ರತಿ ಕಿ.ಗ್ರಾಂ ಬಿತ್ತನೆ ಬೀಜಕ್ಕೆ 15 ಮಿ.ಲೀ ಕ್ಲೋರಾಫೈರಿಫಾಸ್ ಲೇಪಿಸಿ ಬಿತ್ತನೆ ಮಾಡಬೇಕು.
ಸೂಚನೆ: ರೈಜೋಬಿಯಂ ಮತ್ತು ರಂಜಕ ಕರಗಿಸುವ ಜೀವಾಣು (ಪಿಎಸ್.ಬಿ) ಬಿಜೋಪಚಾರಕ್ಕೆ ಮುಂಚೆ ಶಿಲೀಂದ್ರನಾಶಕದ ಬೀಜೋಪಚಾರವನ್ನು ಮಾಡಬೇಕು.