ಭಾರತವು ವೈವಿಧ್ಯಮಯ ಕೃಷಿ ಹವಾಮಾನ ವಲಯಗಳನ್ನು ಒಳಗೊಂಡಿದೆ ಮತ್ತು ಪ್ರತಿಯೊಂದು ವಲಯಗಳು ಎಲ್ಲಾ ಋತುಗಳಲ್ಲಿ ವ್ಯಾಪಕ ಶ್ರೇಣಿಯ ಬೆಳೆಗಳನ್ನು ಬೆಳೆಸಲು ಉತ್ತಮ ಸಾಮರ್ಥ್ಯವನ್ನು ಹೊಂದಿದೆ. ತರಕಾರಿಗಳು ನಮ್ಮ ಆಹಾರದ ಅವಶ್ಯಕತೆಗಳ ಪ್ರಮುಖ ಭಾಗವಾಗಿದೆ, ಈ ಬೆಳೆಯು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವ್ಯಾಪಕವಾಗಿ ಬೆಳೆಯುತ್ತಿದ್ದಾರೆ. ಭಾರತದಲ್ಲಿ, ಕ್ಯಾಪ್ಸಿಕಂ ಅನ್ನು 46 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, 327 ಸಾವಿರ ಟನ್‌ನಷ್ಷು ಉತ್ಪಾದನೆಯು ಕಂಡುಬಂದಿದೆ. ಇದನ್ನು ಭಾರತದಲ್ಲಿ, ಕರ್ನಾಟಕ, ಮಧ್ಯಪ್ರದೇಶ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಹಿಮಾಚಲ ಪ್ರದೇಶ, ಮತ್ತು ಉತ್ತರ ಪ್ರದೇಶದ ಗುಡ್ಡಗಾಡು ಪ್ರದೇಶಗಳಲ್ಲಿ ವ್ಯಾಪಕವಾಗಿ ಬೆಳೆಸಲಾಗುತ್ತಿದೆ ದೇಶದಲ್ಲಿ ಕರ್ನಾಟಕವು 4130 ಹೆಕ್ಟೇರ್ ಪ್ರದೇಶ ಮತ್ತು 81.67 ಸಾವಿರ ಟನ್ ಉತ್ಪಾದನೆಯೊಂದಿಗೆ ಮೊದಲ ಸ್ಥಾನದಲ್ಲಿದ್ದರೇ, ಹಿಮಾಚಲ ಪ್ರದೇಶ 2500 ಹೆಕ್ಟೇರ್ ಮತ್ತು 58.29 ಸಾವಿರ ಟನ್ ಉತ್ಪಾದನೆಯೊಂದಿಗೆ ನಂತರದ ಸ್ಥಾನದಲ್ಲಿದೆ.
ಉನ್ನತ ಮೌಲ್ಯದ ದೇಶೀಯ ಮತ್ತು ರಫ್ತು ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಹೆಚ್ಚಿನ ಮೌಲ್ಯದ ತರಕಾರಿಗಳ ಸಂರಕ್ಷಿತ ಕೃಷಿ ಸೇರಿದಂತೆ ಹೈಟೆಕ್ ತೋಟಗಾರಿಕೆ ಹೆಚ್ಚುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆ, ಭೂ ಹಿಡುವಳಿಗಳ ವಿಘಟನೆ ಮತ್ತು ನಗರೀಕರಣವು ಕೃಷಿ ಪ್ರದೇಶದಲ್ಲಿ ಕುಸಿತಕ್ಕೆ ಕಾರಣವಾಗಿದೆ, ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ಸಂರಕ್ಷಿತ ಕೃಷಿ ಪದ್ಧತಿಯಡಿಯಲ್ಲಿ ತರಕಾರಿಗಳ ಉತ್ಪಾದನೆಯು ಭೂ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಗೆ ಕಾರಣವಾಗುತ್ತಿದೆ ಜೊತೆಗೆ ಜೈವಿಕ ಮತ್ತು ಅಜೀವಕ ಒತ್ತಡಗಳನ್ನು ಸರಿದೂಗಿಸುವ ಮೂಲಕ ರಫ್ತು ಮತ್ತು ದೇಶೀಯ ಮಾರುಕಟ್ಟೆಗಳಿಗೆ ಗುಣಮಟ್ಟದ ತರಕಾರಿಗಳ ಉತ್ಪಾದನೆಯನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಸಂರಕ್ಷಿತ ಕೃಷಿಯಲ್ಲಿ, ಹೆಚ್ಚಿನ ಉತ್ಪಾದಕತೆ ಮತ್ತು ಆರ್ಥಿಕ ಕಾರ್ಯಸಾಧ್ಯತೆಯಿಂದಾಗಿ ಕ್ಯಾಪ್ಸಿಕಂಗಳನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ.
ಸಿಹಿ ಮೆಣಸು, ಬೆಲ್ ಪೆಪರ್ ಅಥವಾ ಶಿಮ್ಲಾ ಮಿರ್ಚ್ ಎಂದೂ ಕರೆಯಲ್ಪಡುವ ಕ್ಯಾಪ್ಸಿಕಂ ಭಾರತದಾದ್ಯಂತ ಬೆಳೆಯುವ ಜನಪ್ರಿಯ ತರಕಾರಿಗಳಲ್ಲಿ ಒಂದಾಗಿದೆ. ಇದರಲ್ಲಿ ವಿಟಮಿನ್ ಎ (8493 ಐಯು), ವಿಟಮಿನ್ ಸಿ (283 ಮಿಗ್ರಾಂ) ಮತ್ತು ಕ್ಯಾಲ್ಸಿಯಂ (13.4 ಮಿಗ್ರಾಂ), ಮೆಗ್ನೀಸಿಯಮ್ (14.9 ಮಿಗ್ರಾಂ) ರಂಜಕ (28.3 ಮಿಗ್ರಾಂ) ಪೊಟ್ಯಾಸಿಯಮ್ (263.7 ಮಿಗ್ರಾಂ) ಹೇರಳವಾಗಿದೆ. ಕ್ಯಾಪ್ಸಿಕಂ ತಂಪಾದ ವಾತವರಣದಲ್ಲಿ ಬೆಳೆಯುವಂತಹ ಬೆಳೆಯಾಗಿದೆ, ಆದರೆ ತಾಪಮಾನ ಮತ್ತು ಸಾಪೇಕ್ಷ ಆರ್ದ್ರತೆ (ಆರ್ಹೆಚ್) ಅನ್ನು ನಿರ್ವಹಿಸಬಹುದಾದ ಸಂರಕ್ಷಿತ ರಚನೆಗಳನ್ನು ಬಳಸಿಕೊಂಡು ವರ್ಷಪೂರ್ತಿ ಇದನ್ನು ಬೆಳೆಯಬಹುದು.
ಬಣ್ಣದ ಕ್ಯಾಪ್ಸಿಕಂಗಳಿಗೆ ನಗರ ಮಾರುಕಟ್ಟೆಗಳಲ್ಲಿ ಮುಖ್ಯವಾಗಿ ಹೋಟೆಲ್ ಮತ್ತು ಅಡುಗೆ ಉದ್ಯಮದಲ್ಲಿ ಹೆಚ್ಚಿನ ಬೇಡಿಕೆಯಿದೆ. ಸಾಂಪ್ರದಾಯಿಕವಾಗಿ ಬೆಳೆದ ಹಸಿರು ಕ್ಯಾಪ್ಸಿಕಂ, ವೈವಿಧ್ಯತೆ ಮತ್ತು ಹಂಗಾಮವನ್ನು ಅವಲಂಬಿಸಿ, ಸಾಮಾನ್ಯವಾಗಿ ಸುಮಾರು 4-5 ತಿಂಗಳಲ್ಲಿ ಹೆಕ್ಟೇರ್‌ಗೆ 20-40 ಟನ್ ಇಳುವರಿ ನೀಡುತ್ತದೆ. ಅದೇ ಹಸಿರುಮನೆಯಲ್ಲಿ ಹಸಿರು ಮತ್ತು ಬಣ್ಣದ ಕ್ಯಾಪ್ಸಿಕಂಗಳ ಅವಧಿ ಸುಮಾರು 7-10 ತಿಂಗಳುಗಳು ಮತ್ತು ಪ್ರತಿ ಹೆಕ್ಟೇರ್‌ಗೆ 80-100 ಟನ್ ಇಳುವರಿ ನೀಡುತ್ತದೆ.
ಹವಾಮಾನ
ಈ ಬೆಳೆಗೆ 25-300ಸಿ ಹಗಲಿನ ತಾಪಮಾನ ಮತ್ತು 18-200 ಸಿ ರಾತ್ರಿಯ ಉಷ್ಣತೆಯು 50-60% ನಷ್ಟು ಆರ್ದ್ರತೆಯ ಅಗತ್ಯವಿರುತ್ತದೆ. ತಾಪಮಾನವು 350 ಸಿ ಮೀರಿದರೆ ಅಥವಾ 120 ಸಿ ಗಿಂತ ಕಡಿಮೆಯಿದ್ದರೆ, ಹಣ್ಣಿನ ಸೆಟ್ಟಿಂಗ್ ಪರಿಣಾಮ ಬೀರುತ್ತದೆ. ಹೆಚ್ಚಿನ ಉಷ್ಣಾಂಶದಲ್ಲಿ ಗಿಡದ ಬೆಳವಣಿಗೆ ಹೆಚ್ಚಾಗಿ, ಕಾಯಿ ಕಚ್ಚುವುದು ಕಡಿಮೆಯಾಗುತ್ತದೆ. ಹಸಿರು ಮತ್ತು ನೆರಳು ಮನೆಯಲ್ಲಿ ಇದರ ಬೇಸಾಯ ಮಾಡುವದರಿಂದ ಉತ್ತಮ ಗುಣಮಟ್ಟದ ಹೆಚ್ಚಿನ ಇಳುವರಿಯನ್ನು ಪಡೆಯಬಹುದು.
ತಳಿಗಳು
ಡೊಣ್ಣ ಮೆಣಸಿನಕಾಯಿಯ ಹೈಬ್ರಿಡ್ ತಳಿಗಳನ್ನು ಬೆಳೆಯಬಹುದು. ಅದರಲ್ಲೂ ಅನಿರ್ದಿಷ್ಟ ಬೆಳವಣಿಗೆಯ (ಇನ್‌ಡಿಟರ್ಮಿನೇಟ್) ಹೈಬ್ರಿಡ್ ತಳಿಗಳಾದ ಇಂದಿರಾ (ಹಸಿರು), ಗ್ರೀನ್ ಗೋಲ್ಡ್ (ಹಸಿರು), ನನ್ -3020 (ಹಳದಿ), ನನ್ -3019 (ಕೆಂಪು), ಭಾರತ್ (ಹಸಿರು), ಮಹಾಭಾರತ್ (ಹಸಿರು), ಮಮತಾ (ಕೆಂಪು), ಇನ್ಸ್ಪಿರೇಶನ್ (ಕೆಂಪು), ಗೋಲ್ಡನ್ ಸಮ್ಮರ್ (ಹಳದಿ), ಬಾಂಬಿ (ಕೆಂಪು), ಒರೊಬೆಲ್ಲಿ (ಹಳದಿ), ಹೀರಾ (ಕೆಂಪು) ಇತ್ಯಾದಿ ಹೈಬ್ರಿಡ್ ತಳಿಗಳನ್ನು ಯಶಸ್ವಿಯಾಗಿ ಬೆಳೆಯಬಹುದು.
ಸಸಿಗಳನ್ನು ಬೆಳೆಸುವದು
ಕೊಕೊಪಿಟ್ ಮಾಧ್ಯಮವನ್ನು 98 ಕಪ್ಪುಗಳ ಸಸಿ ಟ್ರೇಗಳಿಗೆ ತುಂಬಿ, 0.3% ಕಾಪರ್ ಆಕ್ಸಿಕ್ಲೋರೈಡ್ ದ್ರಾವಣವನ್ನು ಸಿಂಪರಣೆ ಮಾಡಬೇಕು. ಬೀಜವನ್ನು ಥೈರಾಮ್ (100 ಗ್ರಾಂ ಬೀಜಕ್ಕೆ 0.3 ಗ್ರಾಂ ನಂತೆ) ನಿಂದ ಉಪಚರಿಸಿ ಒಂದು ಕಪ್ಪಿಗೆ ಒಂದು ಬೀಜ ಹಾಕಿ, ಟ್ರೇಗಳಿಗೆ ನೀರನ್ನು ಒದಗಿಸಿ ಹಾಳೆಯಿಂದ ಮುಚ್ಚಬೇಕು. ಸಸಿಗಳನ್ನು ನೆರಳು ಮನೆಯಲ್ಲಿ ಬೆಳೆಸಬೇಕು. ಎಕರೆ (40 ಗುಂಟೆ) ಕ್ಷೇತ್ರಕ್ಕೆ ಬೇಕಾಗುವ ಸಸಿಗಳನ್ನು ತಯಾರಿಸಲು 160-200 ಗ್ರಾಂ. ಬೀಜ ಬೇಕಾಗುತ್ತದೆ. ಟ್ರೇದಲ್ಲಿ ಬೆಳೆಸಿದ ಸಸಿಗಳು 30 ದಿನಗಳಲ್ಲಿ ನಾಟಿ ಮಾಡಲು ಸಿದ್ಧವಾಗುತ್ತವೆ. ಸಸಿಗಳನ್ನು ನಾಟಿ ಮಾಡುವ ಮುಂಚಿತವಾಗಿ ಇಮೀಡಾಕ್ಲೊಪ್ರೀಡ್ (0.25 ಮಿ.ಲಿ./ಲೀ.) ಮತ್ತು ಕ್ಲೋರೋಥಾಲೊನಿಲ್ (1 ಗ್ರಾಂ/ಲೀ.) ಔಷಧಿಯನ್ನು ಸಿಂಪಡಿಸಬೇಕು. ಪ್ರತಿ ಬಾರಿ ಕೀಟನಾಶಕವನ್ನು ಸಿಂಪಡಿಸುವಾಗ, ಅಂಟನ್ನು (0.3ಮಿ.ಲಿ./ಲೀ.) ಬೆರೆಸಿ ಸಿಂಪಡಿಸಬೇಕು.
ಮಡಿಗಳ ತಯಾರಿಕೆ ಮತ್ತು ನಾಟಿ ಮಾಡುವದು
ಡೊಣ್ಣ ಮೆಣಸಿನಕಾಯಿಗೆ ಚೆನ್ನಾಗಿ ನೀರು ಬಸಿದು ಹೋಗುವ ಮರಳು ಮಿಶ್ರಿತ ಕೆಂಪು ಮಣ್ಣು ಸೂಕ್ತ. ಮಣ್ಣಿನ ರಸಸಾರ 6 ರಿಂದ 7 ಮತ್ತು ವಿದ್ಯುತ್ ವಾಹಕತೆ 1 mmhos/ಛಿm ಕ್ಕಿಂತ ಕಡಿಮೆ ಇದ್ದರೆ ಅತೀ ಸೂಕ್ತ. ಮಡಿ ತಯಾರಿಸುವದಕ್ಕಿಂತ ಮೊದಲು 100 ಚ.ಮೀ. ಕ್ಷೇತ್ರದ ಹಸಿರು/ನೆರಳು ಮನೆಗೆ ಸುಮಾರು 250 ಕಿ.ಗ್ರಾಂ. ಕೊಟ್ಟಿಗೆ ಗೊಬ್ಬರ ಮಿಶ್ರ ಮಾಡಬೇಕು. ನಂತರ 1.0 ಮೀ. ಅಗಲ ಮತ್ತು 20-30 ಸೆಂ.ಮೀ. ಎತ್ತರದ ಏರು ಮಡಿಗಳನ್ನು ನಿರ್ಮಿಸಬೇಕು. ಸಸಿಗಳನ್ನು ನಾಟಿ ಮಾಡುವ ಮುಂಚಿತವಾಗಿ ಮಡಿಗಳನ್ನು ಶುದ್ಧೀಕರಿಸಬೇಕು. ಇದಕ್ಕಾಗಿ, ಮಡಿಗಳಿಗೆ 4% ಫಾರ್ಮಾಲ್ಡಿಹೈಡ್ (4 ಲೀ ಪ್ರತಿ ಚದರ ಮೀಟರ್‌ಗೆ) ದ್ರಾವಣವನ್ನು ಸಿಂಪರಣೆ ಮಾಡಬೇಕು ಮತ್ತು ಕಪ್ಪು ಪಾಲಿಥೀನ್ ಹೊದಿಕೆಯಿಂದ (100 ಮೈಕ್ರಾನ್) ಮುಚ್ಚಬೇಕು. ಫಾರ್ಮಾಲ್ಡಿಹೈಡ್ ಬದಲಾಗಿ ಡೈಜೋಮೆಟ್ (40ಗ್ರಾಂ/ಚದರ ಮೀ ಗೆ) ಅನ್ನು ಮಡಿಗಳ ಸೋಂಕು ನಿವಾರಿಸಲು ಸಿಂಪರಣೆ ಮಾಡಬಹುದು. 3 ರಿಂದ 4 ದಿನಗಳ ನಂತರ ಮಡಿಗಳಿಗೆ ಗಾಳಿಯನ್ನು ಒದಗಿಸಲು ಪಾಲಿಥೀನ್ ಹೊದಕೆಯನ್ನು ತೆರೆದಿಡಬಹುದು. ಪಾಲಿಥೀನ್ ಹೊದಿಕೆಯನ್ನು ತೆರೆದ ನಂತರ ಮಡಿಗಳ ಮಣ್ಣನ್ನು ಸಡಿಲಗೊಳಿಸಿ ಫಾರ್ಮಾಲ್ಡಿಹೈಡ್ ಹೊಗೆಯನ್ನು ಸಂಪೂರ್ಣವಾಗಿ ಹೊರತೆಗೆಯಬೇಕು.
ಮಡಿ ತಯಾರಿಸಿದ ಮೇಲೆ ಪ್ರತಿ ಎಕರೆಗೆ 100 ಕಿ.ಗ್ರಾಂ. ಎರೆಗೊಬ್ಬರ ಮತ್ತು 200 ಕಿ.ಗ್ರಾಂ. ಬೇವಿನ ಹಿಂಡಿ ಮತ್ತು 2 ಕಿ.ಗ್ರಾಂ ಟ್ರೆಕೋಡರ್ಮಾ (100:1 ಪ್ರಮಾಣದಲ್ಲಿ ತಯಾರಿಸಿದ ಮಿಶ್ರಣ) ಮಿಶ್ರಣವನ್ನು ಬೆರೆಸಬೇಕು. ಮಡಿಗಳ ಮಧ್ಯದಲ್ಲಿ 50 ಸೆಂ.ಮೀ. ದಾರಿ ಬಿಡಬೇಕು. 100 ಮೈಕ್ರಾನ್ ದಪ್ಪದ ಮತ್ತು 1.2ಮೀ. ಅಗಲದ ಕಪ್ಪು ಪಾಲಿ ಎಥಲೀನ್ ಹೊದಿಕೆಯನ್ನು ನಾಟಿ ಮಾಡುವಂತಹ ಸಾಲುಗಳಿಗೆ ಹೊದಿಸಬೇಕು ಮತ್ತು ಅಂಚುಗಳನ್ನು ಮಣ್ಣಿನಲ್ಲಿ ಬಿಗಿಯಾಗಿ ಮುಚ್ಚಬೇಕು. ಈ ಹೊದಿಕೆಯನ್ನ ಸಾಕಷ್ಟು ಉದ್ದಕ್ಕೆ ಕತ್ತರಿಸಿ ಸಸಿಗಳನ್ನು ನಾಟಿ ಮಾಡಲು, 5 ಸೆಂ.ಮೀ. ಅಳತೆಯ ರಂಧ್ರಗಳನ್ನು ಮಾಡಬೇಕು. ಸಸಿಗಳನ್ನು ಪ್ರತಿ ಮಡಿಯಲ್ಲಿ ಎರಡು ಸಾಲಿನಲ್ಲಿ ನಾಟಿ ಮಾಡಬೇಕು. ಎರಡು ಸಾಲುಗಳ ಮಧ್ಯ 45 ಸೆಂ.ಮೀ. ಅಂತರವಿಟ್ಟು, ಸಸಿಗಳನ್ನು 30 ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬೇಕು. ಹೀಗೆ ನಾಟಿ ಮಾಡುವದರಿಂದ ಎಕರೆ ಕ್ಷೇತ್ರದಲ್ಲಿ 16,000-20,000 ಸಸಿಗಳನ್ನು ನಾಟಿ ಮಾಡಬಹುದು. ನಾಟಿ ಮಾಡಿದ ನಂತರ, ತಾಮ್ರದ ಆಕ್ಸಿ ಕ್ಲೋರೈಡ್ (3 ಗ್ರಾಂ/ಲೀ.) ಅಥವಾ ಕ್ಯಾಪ್ಟನ್ (3 ಗ್ರಾಂ/ಲೀ.) ಅಥವಾ ತಾಮ್ರದ ಹೈಡ್ರಾಕ್ಸೈಡ್ (2 ಗ್ರಾಂ/ಲೀ.) ದ್ರಾವಣವನ್ನು ಸಸಿಗಳ ತಳಕ್ಕೆ 25-30 ಮಿ.ಲಿ. ದರದಲ್ಲಿ ಹಾಕಬೇಕು.
ರಸಗೊಬ್ಬರಗಳ ಬಳಕೆ: ಪ್ರತಿ ಎಕರೆ ಬೆಳೆಗೆ ತಳಗೊಬ್ಬರ 20:25:20 ಕಿ.ಗ್ರಾಂ. ಸಾರಜನಕ, ರಂಜಕ ಮತ್ತು ಪೊಟ್ಯಾಷ್ (80 ಕಿ.ಗ್ರಾಂ ಕ್ಯಾಲ್ಸಿಯಂ ಅಮೋನಿಯಂ ನೈಟ್ರೇಟ್, 125 ಕಿ.ಗ್ರಾಂ ಸೂಪರ್ ಫಾಸ್ಫೇಟ್ ಮತ್ತು 32 ಕಿ.ಗ್ರಾಂ ಮ್ಯೂರೇಟ್ ಆಫ್ ಪೊಟ್ಯಾಶ್ ಅಥವಾ 40 ಕಿ.ಗ್ರಾಂ ಸಲ್ಫೇಟ್ ಆಫ್ ಪೊಟ್ಯಾಶ್) ಬೇಕಾಗುವದು. ಇದನ್ನು ಸಸಿಗಳನ್ನು ನಾಟಿ ಮಾಡುವ ಮುನ್ನ ಅಂದರೆ ಫಾರ್ಮಾಲ್ಡಿಹೈಡ್ ಹೊಗೆಯು ಪೂರ್ತಿಯಾಗಿ ಆವಿಯಾದ ತಕ್ಷಣ ಹಾಕಬೇಕು.
ನೀರಾವರಿ ಮತ್ತು ರಸಾವರಿ:
ನೀರನ್ನು ಹನಿ ನೀರಾವರಿ ಮುಖಾಂತರ ಒದಗಿಸಬೇಕು. ಪ್ರತಿ ಮಡಿಗೆ 16 ಮಿ.ಮೀ. ಹನಿ ನೀರಾವರಿ ಪೈಪ್ (ಲ್ಯಾಟರಲ್)ಗಳನ್ನು ಹಾಕಬೇಕು. ಲ್ಯಾಟರಲ್ ಗಳಲ್ಲಿ 30 ಸೆಂ.ಮೀ.ಗೆ ಒಂದು ತಾಸಿಗೆ 2 ಲೀ. ನೀರು ಬೀಳುವ ಹನಿ ಸಾಧನ (ಎಮಿmರ್) ಇರಬೇಕು. ಪ್ರತಿ ದಿನ ವಾತಾವರಣಕ್ಕೆ ಅನುಗುಣವಾಗಿ ನೀರು ಕೊಡಬೇಕು. ರಸಾವರಿಯನ್ನು ನಾಟಿ ಮಾಡಿದ 3 ವಾರಗಳ ನಂತರ ಪ್ರಾರಂಭಿಸಬೇಕು ಮತ್ತು 18 ವಾರಗಳವರೆಗೆ ಮುಂದುವರಿಸಬೇಕು. ವಾರಕ್ಕೆ ಎರಡು ಸಲ ಕೊಷ್ಟಕದಲ್ಲಿ ತಿಳಿಸಿದ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಇರುವ ಸಮ್ಮಿಶ್ರ ರಾಸಾಯನಿಕ ಗೊಬ್ಬರವನ್ನು ಡ್ರಿಪ್ ಮುಖಾಂತರ ನೀರಿನೊಂದಿಗೆ ಕೊಡಬೇಕು.
ಕ್ರ.ಸಂ. |
ಬೇಕಾಗುವ ಗೊಬ್ಬರ |
ಪ್ರತಿ ರಸಾವರಿಗೆ ರಸಗೊಬ್ಬರದ ಪ್ರಮಾಣ (ಕಿ.ಗ್ರಾಂ/ಎಕರೆಗೆ) |
1 |
19:19:19 |
4 ಕಿ.ಗ್ರಾಂ |
2 |
ಪೊಟ್ಯಾಸಿಯಮ್ ನೈಟ್ರೇಟ್ (13: 0: 45) |
1.5 ಕಿ.ಗ್ರಾಂ |
3 |
ಕ್ಯಾಲ್ಸಿಯಂ ನೈಟ್ರೇಟ್ |
1.5 ಕಿ.ಗ್ರಾಂ |
|
|
|
ತರಕಾರಿ ಸ್ಪೇಷಲ್ (5 ಗ್ರಾಂ / ಲೀಟರ್) ಅನ್ನು ಪ್ರತಿ 15 ದಿನಗಳ ಮಧ್ಯಂತರದಲ್ಲಿ ಸಿಂಪಡಿಸಬಹುದು
ಚಾಟನಿ ಮಾಡುವುದು
ದೊಣ್ಣೆ ಮೆಣಸಿನಕಾಯಿ ಗಿಡಗಳಲ್ಲಿ ಬಲಿಷ್ಠವಾದ ನಾಲ್ಕು ಕಾಂಡಗಳನ್ನು ಬಿಟ್ಟು ಉಳಿದ ಕಾಂಡಗಳನ್ನು ಚಾಟನಿ ಮಾಡಬೇಕು. ನಾಟಿ ಮಾಡಿದ 15 ರಿಂದ 20 ದಿನಗಳ ನಂತರ ವಾರಕ್ಕೊಮ್ಮೆ ಚಾಟನಿ ಮಾಡಬೇಕು. ದೊಣ್ಣೆ ಮೆಣಸಿನಕಾಯಿ ಸಸಿಗಳು ಧ್ವಿಬಜನೆಗೊಳ್ಳುವ ರೆಂಬೆಗಳನ್ನು ಹೊಂದಿರುತ್ತವೆ. ಗಿಡದ 5 ಮತ್ತು 6 ನೇ ಕವಲಿನಲ್ಲಿ ತುದಿ ಭಾಗವು ವಿಭಜನೆಗೊಂಡು ಮತ್ತೆ ಈ ಎರೆಡು ರೆಂಬೆಗಳು ಎರಡು ಕವಲು ರೆಂಬೆಗಳಾಗಿ ವಿಭಜನೆಗೊಳ್ಳುತ್ತವೆ. ಈ ನಾಲ್ಕು ಬಲಿಷ್ಠ ರೆಂಬೆಗಳನ್ನು ಮಾತ್ರ ಇರಿಸಿಕೊಳ್ಳಬೇಕು. ನಾಲ್ಕು ಬಲಿಷ್ಠ ರೆಂಬೆ (ದೊಡ್ಡದಾದ ಕಾಂಡ ಮತ್ತು ಎಲೆಗಳು) ಮತ್ತು ಇನ್ನೊಂದು ದುರ್ಬಲ ರೆಂಬೆ (ಕಾಂಡ ತೆಳ್ಳಗೆ ಮತ್ತು ಚಿಕ್ಕ ಎಲೆಗಳು)ಯಾಗಿ ಬೆಳೆಯುತ್ತದೆ. ಬಲಿಷ್ಟ ರೆಂಬೆಯನ್ನು ಉಳಿಸಿಕೊಂಡು ದುರ್ಬಲ ರೆಂಬೆಯನ್ನು ಕತ್ತರಿಸಬೇಕು. ಈ ಕಾರ್ಯವನ್ನು ವಾರಕ್ಕೊಮ್ಮೆ ಮಾಡಬೇಕು. ಗಿಡದ ಬುಡ ಭಾಗದಲ್ಲಿ ಕಾಣಿಸಿಕೊಳ್ಳುವ ರೆಂಬೆಗಳು ಫಲಕಾರಿಯಾಗಿರುವುದಿಲ್ಲ. ಆದ್ದರಿಂದ, ಅವುಗಳನ್ನು ಕತ್ತರಿಸಿ ತೆಗೆಯಬೇಕು.
ದೊಣ್ಣೆ ಮೆಣಸಿನಕಾಯಿ ಬೇಸಾಯದಲ್ಲಿ ಹೂಗಳನ್ನು ಚಿವುಟುವುದು ಬಹು ಮುಖ್ಯ ಕ್ರಮವಾಗಿದೆ. ಸಾಮಾನ್ಯವಾಗಿ ನಾಡಿ ಮಾಡಿದ ಒಂದು ತಿಂಳಗವರೆಗೆ ಹೂಗಳನ್ನು ಚಾಟನಿ ಮಾಡಬೇಕು. ಒಂದು ತಿಂಗಳ ನಂತರ ಹುಟ್ಟಿದ ಹೂವಿನ ಮೊಗ್ಗುಗಳನ್ನು ಕಾಯಿ ಕಚ್ಚಲು ಬಿಡಬೇಕು. ಒಂದು ಕವಲಿನಲ್ಲಿ ಒಂದು ಕಾಯಿ ಮಾತ್ರ ಬೆಳವಣಿಗೆಯಾಗುವಂತೆ ನೋಡಿಕೊಳ್ಳಬೇಕು.
ಗಿಡಗಳಿಗೆ ಆಧಾರ
ಪ್ರತಿ ಮಡಿಗಳ ಮೇಲೆ ಒಂದು ತಂತಿಯನ್ನು ಹಸಿರು/ನೆರಳು ಮನೆ ಎತ್ತರಕ್ಕೆ ಕಟ್ಟಿ, ಪ್ರತಿ ಗಿಡಕ್ಕೆ ಒಂದು ಪ್ಲಾಸ್ಟಿಕ್ ದಾರ ಕಟ್ಟಿ ಆ ದಾರದೊಂದಿಗೆ ಗಿಡಗಳನ್ನು ಬೆಳೆಸಬೇಕು. ಗಿಡ ಬೆಳೆದಂತೆ 25-30 ದಿನಕ್ಕೆ ಒಂದು ಸಲ ಸೆಣಬಿನಿಂದ ಗಿಡವನ್ನು ಪ್ಲಾಸ್ಟಿಕ್ ದಾರಕ್ಕೆ ಕಟ್ಟಬೇಕು ಇದರಿಂದ ಗಿಡಗಳು ಎತ್ತರಕ್ಕೆ ಬೆಳೆಯುತ್ತವೆ.
ಸಸ್ಯ ಸಂರಕ್ಷಣೆ
ಸಂರಕ್ಷಿತ ಬೇಸಾಯದಲ್ಲಿ ಡೊಣ್ಣ ಮೆಣಸಿನಕಾಯಿಗೆ ರಸ ಹೀರುವ ಕೀಟಗಳಾದ ಹೇನು ನುಶಿ ಮತ್ತು ಕೆಂಪು ಜೇಡ ನುಶಿ ಬಾಧೆ ಹೆಚ್ಚಾಗಿ ಕಂಡುಬರುತ್ತದೆ. ರಸ ಹೀರುವ ಕೀಟಗಳಾದ ಹೇನು ಮತ್ತು ನುಶಿ ಹತೋಟಿಗೆ ಅಸಿಫೇಟ್ 1.5 ಗ್ರಾಂ/ಲೀ. ಅಥವಾ ಇಮಿಡಾಕ್ಲೋಪ್ರಿಡ್ 0.5ಮಿಲೀ./ ಲೀ. ಅಥವಾ ಆಕ್ಸಿಡೆಮೆಟಾನ್ ಮೀಥೈಲ್ 2 ಮಿ.ಲೀ ಅಥವಾ ಡೈಮಿಥೋಯೇಟ್ 2 ಮಿ.ಲೀ ನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಕೆಂಪು ಜೇಡಿ ನುಶಿ ಹತೋಟಿಗಾಗಿ ಡೈಕೋಫಾಲ್ 2.5 ಮಿ.ಲೀ. ಅಥವಾ 3 ಗ್ರಾಂ ನೀರಿನಲ್ಲಿ ಕರಗುವ ಗಂಧಕವನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. ಬೆಳೆಗೆ ಹೆಚ್ಚಾಗಿ ಬೂದು ರೋಗ ಬರುತ್ತದೆ. ಇದನ್ನು 3 ಗ್ರಾಂ ನೀರಿನಲ್ಲಿ ಕರಗುವ ಗಂಧಕ ಅಥವಾ ಕಾರ್ಬೆಂಡೈಜಿಮ್ 1 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು
ಕೊಯ್ಲು ಮತ್ತು ಇಳುವರಿ
ಬೆಳೆ ನಾಟಿ ಮಾಡಿದ ಎರಡು ತಿಂಗಳುಗಳಲ್ಲಿ ಕಾಯಿಗಳು ಕೊಯ್ಲಿಗೆ ಬರುತ್ತವೆ. ಪೂರ್ಣ ಬಲಿತ ಕಾಯಿಗಳನ್ನು ಚಾಕುವಿನಿಂದ ಕತ್ತರಿಸಬೇಕು. ಕತ್ತರಿಸುವಾಗ ರೆಂಬೆಗಳು ಮುರಿಯದಂತೆ ಎಚ್ಚರವಹಿಸಬೇಕು. ಮೇಲೆ ತಿಳಿಸಿದ ತಳಿಗಳು ನಾಟಿ ಮಾಡಿದಾಗಿನಿಂದ 6 ತಿಂಗಳ ಕಾಲ ಇಳುವರಿ ಕೊಡುತ್ತವೆ. ಪ್ರತಿ ಎಕರೆಗೆ ಸುಮಾರು 30-40ಟನ್ ಇಳುವರಿಯನ್ನು ಪಡೆಯಬಹುದು.
ಕೊಯ್ಲೋತ್ತರ ನಿರ್ವಹಣೆ:
ಏಕರೂಪದ ಆಕರ್ಷಕ ಪ್ಯಾಕಿಂಗ್ ಅನ್ನು ಖಾತ್ರಿ ಪಡಿಸಿಕೊಳ್ಳಲು ಗಾತ್ರ ಮತ್ತು ಬಣ್ಣದ ಆಧಾರದ ಮೇಲೆ ಕಾಯಿಗಳನ್ನು ಶ್ರೇಣೀಕರಿಸಬೇಕು. ಪ್ರತಿ ಕಾಯಿಯನ್ನು ಪ್ಲಾಸ್ಟಿಕ್ ಹಾಳೆಯಿಂದ ಪ್ಯಾಕಿಂಗ್ ಮಾಡುವದರಿಂದ ಹಾಗೂ ಗರಿಷ್ಟ 7 ರಿಂದ 80ಸೆ. ಇದ್ದರೆ 15 ರಿಂದ 20 ದಿನಗಳವರೆಗೆ ಕಾಯಿಗಳ ಶೇಖರಣಾ ಗುಣಮಟ್ಟವನ್ನು ಹೆಚ್ಚಿಸಬಹುದು.
ಲೇಖನ: ಹೀನಾ ಎಮ್.ಎಸ್, ರವಿ ವೈ, ಸಂತೋಷ ಶಿಂಧೆ ಆರ್. ಬಿ. ನೆಗಳೂರು ಮತ್ತು ಎಸ್. ಎಸ್. ಅಂಜುಮ್, ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಇಂಡಿ