ಆಫ್ರಿಕಾದ ದೈತ್ಯ ಬಸವನಹುಳು ಇದೊಂದು ಜಗತ್ತಿನಲ್ಲಿಯೇ ಅತಿ ದೊಡ್ಡ ಮತ್ತು ಬೆಳೆ ಹಾನಿಕಾರಕ ಪೀಡೆ ಎನ್ನಬಹುದು. ಇದು ಅತಿ ವೇಗವಾಗಿ ಹೊಸ ಪ್ರದೇಶಗಳಿಗೆ ಹಲಗೆಗಳು, ಹಡಗುಗಳ ಕಂಟೆನರ್ ಮತ್ತು ವಾಹನಗಳ ಮೂಲಕ ಹರಡುತ್ತದೆ. ಈ ಪೀಡೆಯೂ ತನ್ನ ಆವಸ್ಥಾನ ಬಿಟ್ಟು ಬೇರೆ ಬೇರೆ ಪ್ರದೇಶಗಳಗಲ್ಲಿಯೂ ಹುಲುಸಾಗಿ ಬೆಳೆಯುತ್ತದೆ ಮತ್ತು ವಿವಿಧ ಬೆಳೆಗಳನ್ನು ಸರ್ವಗ್ರಾಹಿಯಾಗಿ ತಿನ್ನುತ್ತದೆ ಹಾಗೂ ರೋಗಾಣುಗಳನ್ನು ಹರಡುತ್ತದೆ. ಹೀಗೆ ಮಾಡಿ ವಿವಿಧ ಬೆಳೆಗಳನ್ನು ನಾಶಪಡಿಸುತ್ತದೆ.
ಪೂರ್ವ ಆಫ್ರಿಕಾ ಮೂಲದ ಈ ಹುಳುವನ್ನು ಮಾನವನು, ಆಹಾರಕ್ಕಾಗಿ ಆಕಸ್ಮಿಕ ಅಥವಾ ಉದ್ಧೇಶ ಪೂರ್ವಕವಾಗಿಯೋ ಇಂಡೋ ಫೇಸಿಪಿಕ್ ಪ್ರದೇಶಗಳಿಗೆ ಹರಡಿಸಿದ್ದಾನೆ. ಇವುಗಳು ಬಹಳ ದಿನಗಳವರೆಗೆ ಆಹಾರವಿರದೆ ಬದುಕುವ ಶಕ್ತಿಯನ್ನು ಹೊಂದಿದೆ. ಇವು ಶೀಘ್ರ ಸಂತಾನೋತ್ಪತ್ತಿ ದರ ಹೊಂದಿರುವುದರಿಂದ ಹೊಸ ಪ್ರದೇಶಗಳಿಗೆ ಬೇಗನೆ ಹರಡುತ್ತವೆ. ಇದು ಉಷ್ಣವಲಯದ ಜಾತಿಗೆ ಸೇರಿದ್ದು ಶೀತಲ ವಲಯಗಳಲ್ಲಿ ಕೂಡಾ ಬದುಕುತ್ತವೆ. ಸೂಪ್ತಾವಸ್ಥೆಯಲ್ಲಿ ಹಿಮ ಹೀರುವ ಕಡೆಯಲ್ಲಿಯೂ ಜೀವಿಸುತ್ತವೆ.
ವಿವರಣೆ:
ವಾತಾವರಣಕ್ಕನುಗುಣವಾಗಿ ಇದರ ಚಿಪ್ಪು (ಶಂಖು) ಕೆಂಪು ಮಿಶ್ರಿತ ಕಂದು ಬಣ್ಣ ಮತ್ತು ಹಳದಿ ಬಣ್ಣದ ಗೆರೆ ಗುರುತುಗಳನ್ನು ಹೊಂದಿರುತ್ತದೆ. ಹುಳುವಿನ ಸಂಪೂರ್ಣ ಬೆಳವಣಿಗೆ ನಂತರ ಒಂಬತ್ತು ಸುರುಳಿಗಳನ್ನೊಳಗೊಂಡ ಕಿರಿದಾದ ಶಂಖುವಿನಾಕಾರದ ಚಿಪ್ಪನ್ನು ಹೊಂದಿರುತ್ತದೆ. ಸುಮಾರು 20 ಸೆಂ. ಮೀ. ಉದ್ದ ಹಾಗೂ 32 ಗ್ರಾಂ. ತೂಕವನ್ನು ಹೊಂದಿರುತ್ತದೆ.
ಜೀವನ ಚಕ್ರ:
ಆಫ್ರಿಕಾದ ದೈತ್ಯ ಬಸವನಹುಳು ಉಭಯಲಿಂಗಿ ಜೀವಿಯಾಗಿದ್ದು, ಅಂದರೆ ಒಂದೇ ಹುಳುವಿನಲ್ಲಿ ಗಂಡು ಮತ್ತು ಹೆಣ್ಣು ಸಂತಾನೋತ್ಪತ್ತಿ ಅಂಗಗಳನ್ನು ಹೊಂದಿರುತ್ತದೆ. ಇವು ತಮ್ಮನ್ನು ಪರಸ್ಪರ ಸಂವೋಹನ ಸಂತಾನೋತ್ಪತ್ತಿ ಕ್ರಿಯೆಯಲ್ಲಿ ತೋಡಗಿಸಿಕೊಳ್ಳುತ್ತವೆ. ಹುಳುಗಳು ಸಂವೋಹನ ಕ್ರಿಯೆಯ 8-10 ದಿನಗಳ ನಂತರ ಮೊಟ್ಟೆಗಳನ್ನು ಮಣ್ಣಿನ ಗೂಡು ಅಥವಾ ಎಲೆಗಳಲ್ಲಿ ಅಥವಾ ಹರಳುಗಳಲ್ಲಿ ಇಡುತ್ತವೆ. ಸಾಮಾನ್ಯವಾಗಿ 100-500 ಮೊಟ್ಟೆಗಳನ್ನಿಡುತ್ತವೆ. 11-15 ದಿನಗಳಲ್ಲಿ ಉಷ್ಣ ಮತ್ತು ವಾತಾವರಣಕ್ಕನುಗುಣವಾಗಿ ಪ್ರತಿಶತ 90 ರಷ್ಟು ಮರಿಗಳು ಮೊಟ್ಟೆಯಿಂದ ಹೊರಬರುತ್ತವೆ. ನಂತರ ಆರು ತಿಂಗಳೂಳಗೆ ಫ್ರೌಢಾವಸ್ಥೆಯನ್ನು ಹೊಂದುತ್ತವೆ. ತದನಂತರ ಬೆಳವಣಿಗೆ ಕಡಿಮೆಯಾಗುತ್ತಾ ಸಾಯುವವರೆಗೆ ಬದಕುತ್ತವೆ. ಸಾಮಾನ್ಯವಾಗಿ ಇವುಗಳ ಜೀವಿತಾವಧಿಯು 5-6 ವರ್ಷಗಳು ಆದರೆ ಇವು 10 ವರ್ಷಗಳವರೆಗೂ ಕೂಡಾ ಬದುಕಬಲ್ಲವು.
ಹತೋಟಿ ಕ್ರಮಗಳು:
- ಬಸವನಹುಳುವಿನ ಪ್ರವೇಶವನ್ನು ತಡೆಗಟ್ಟುವುದೇ ಪರಿಣಾಮಕಾರಿ ಪದ್ಧತಿಯಾಗಿದೆ
- ಇವುಗಳ ಹರಡುವುಕೆಯನ್ನು ತಡೆಯಲು ಸಂಪರ್ಕ ತಡೆ ಮತ್ತು ಸಮೀಕ್ಷೆ ಕಾರ್ಯಗಳನ್ನು ತೆಗೆದುಕೊಳ್ಳಬೇಕು.
- ಭತ್ತ, ಗೋಧಿ ಮತ್ತು ಮೆಕ್ಕೆಜೋಳದ ಬೆಳೆಗಳನ್ನು ಬೆಳೆಯುವುದರಿಂದ ಇವುಗಳ ಹಾವಳಿ ತಡೆಯಬಹುದು
- ಇವುಗಳ ದೇಹದಲ್ಲಿ ಶೇ. 60 ರಷ್ಟು ಪ್ರೊಟೀನ್ ಇರುವುದರಿಂದ ಆರಿಸಿ ಬಾತುಕೋಳಿ, ಕೋಳಿ ಮತ್ತು ಹಂದಿಗಳಿಗೆ ಆಹಾರವಾಗಿ ಬಳಸಬಹುದು
- ಬೆಂಕಿ ದೀಪಗಳನ್ನು ಅಳವಡಿಸಿ ಇವುಗಳನ್ನು ನಾಶಪಡಿಸಬೇಕು
- ನೀರನಲ್ಲಿ ಅದ್ದಿದ ಗೋಣಿ ಚೀಲಗಳನ್ನು ಹೊಲದಲ್ಲಿ ಹಾಕಿ ಹುಳುಗಳನ್ನು ಆಕರ್ಷಿಸಿ ನಂತರ ನಾಶಪಡಿಸಬೇಕು.
- ರಾಸಾಯನಿಕಗಳಾದ ಮೆಟಾಲ್ಡಿಹೈಡ್ ಮತ್ತು ಇನ್ನಿತರ ಬಸವನಹುಳು ಪೀಡೆನಾಶಕಗಳ ಜೊತೆಗೆ ವಿಷ ಪಾಷಾಣವಾಗಿ ಬಳಸಬಹುದು.
- ಒಂದು ಹೊಲದಿಂದ ಇನ್ನೊಂದು ಹೊಲಕ್ಕೆ ವಲಸೆ ಹೋಗುವ ಹುಳುಗಳನ್ನು ಮೇಲಥಿಯಾನ್ ಅಥವಾ ಕ್ವಿನಾಲಫಾಸ್ ಅಥವಾ ಫೇನವಲರೇಟ್ ಕೀಟನಾಶಕಗಳನ್ನು ಧೂಳಿಕರಿಸಿ ನಾಶಪಡಿಸಬೇಕು.
- ಹೊಲದಲ್ಲಿ ಕಸಕಡ್ಡಿಗಳನ್ನು ಅಲ್ಲಲ್ಲಿ ಗುಡ್ಡೆ ಹಾಕಿ ಮೊದಲು ಆಕರ್ಷಿಸಬೇಕು, ನಂತರ ಮೆಟಾಲ್ಡಿಹೈಡ್ 2.5 % 5 ಕೆ.ಜಿ ಪ್ರತಿ ಹೆಕ್ಟೇರಿಗೆ ಹುಳುಗಳು ಅಡಗಿಕೊಂಡಲ್ಲಿ ಹಾಕಬೇಕು.
- ಸೀಮೆ ಎಣ್ಣೆ ಮತ್ತು ಉಪ್ಪನ್ನು ಬೆರೆಸಿ ಹುಳುಗಳನ್ನು ನಾಶಪಡಿಸಬಹುದು.
ಲೇಖಕರು: ಡಾ. ಮಧುರಿಮಾ ವಿನೋದ ಮತ್ತು ಡಾ. ಸುನಿಲ್ ಕುಮಾರ್. ಕೆ, ಸಹಾಯಕಾ ಸಂಶೋಧಕರು, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ, ಬ್ರಹ್ಮಾವರ, ಉಡುಪಿ- 576213