Agripedia

ಕೃಷಿ ಇಲಾಖೆಯಲ್ಲಿ ರಿಯಾಯ್ತಿ ದರದಲ್ಲಿ ಕೃಷಿ ಯಂತ್ರೋಪಕರಣಗಳು ಲಭ್ಯ-ಇಂದೇ ಅರ್ಜಿ ಸಲ್ಲಿಸಿ

09 September, 2020 9:57 AM IST By:

ಕೃಷಿ ಇಲಾಖೆಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 2020-21 ನೇ ಸಾಲಿನ ಕೃಷಿ ಯಾಂತ್ರೀಕರಣ ಮತ್ತು ಕೃಷಿ ಸಂಸ್ಕರಣೆ ಯೋಜನೆ ಅಡಿ ಉಳುಮೆಯಿಂದ ಕೊಯ್ಲುವರೆಗೆ ಬೇಕಾಗುವ ಕೃಷಿ ಯಂತ್ರೋಪಕರಣಗಳನ್ನು ರಿಯಾಯ್ತಿ ದರದಲ್ಲಿ ನೀಡಲಾಗುವುದು.

ಕೃಷಿ ಉತ್ಪಾದನೆಯಲ್ಲಿರುವ ಕೃಷಿ ಕಾರ್ಮಿಕರ ಕೊರತೆಯನ್ನು ನೀಗಿಸಲು,ಕೆಲವು ಬೇಸಾಯ ಕ್ರಮಗಳಲ್ಲಿ ಕಾಲ ಉಳಿತಾಯವನ್ನು ಮಾಡಲು, ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಪೂರೈಸಲು ಸರ್ಕಾರ ರೈತರಿಗೆ  ಪ್ರೋತ್ಸಾಹಿಸಲು ವಿವಿಧ ರೀತಿಯ ಕೃಷಿ ಯಂತ್ರೋಪಕರಣಗಳಿಗೆ  ಆಯಾ ಯಂತ್ರೋಪಕರಣಗಳಿಗನುಗುಣವಾಗಿ ಶೇ. 60, ಶೇ.50  ಮತ್ತು ಶೇ. 40 ರಷ್ಟು ಸಹಾಯಧನದಲ್ಲಿ ವಿತರಿಸುತ್ತದೆ. ಇದಕ್ಕಾಗಿ ರೈತಬಾಂಧವರು ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿ ಸಬ್ಸಿಡಿಯಲ್ಲಿ ಯಂತ್ರೋಪಕರಣಗಳನ್ನು ಪಡೆಯಬಹುದು. ನಿಮ್ಮ ತಾಲೂಕಿನ ವ್ಯಾಪ್ತಿಯಲ್ಲಿರುವ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿ ಯಾವ ಯಂತ್ರೋಪಕರಗಳು ಲಭ್ಯವಿದೆ ಎಂಬುದನ್ನು ವಿಚಾರಿಸಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದು.

.ಉದಾಹರಣೆಗೆ 2.00 ಲಕ್ಷದವರೆಗೆ ಇರುವ ಕೃಷಿ ಯಂತ್ರೋಪಕರಣಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ. 50ರಷ್ಟು ಸಾಮಾನ್ಯ ವರ್ಗದ ರೈತರಿಗೆ ಶೇ. 40 ರಷ್ಟು ಸಹಾಯಧನವನ್ನು ನೀಡಲಾಗುವುದು. ಕೃಷಿ ಯಾಂತ್ರೀಕರಣ ಯೋಜನೆಯಡಿ ಭೂಮಿ ಸಿದ್ದತಾ ಉಪಕರಣಗಳಾದ ಪವರ್ ಟಿಲ್ಲರ್, ಟ್ರ್ಯಾಕ್ಟರ್ ಚಾಲಿತ ನೇಗಿಲು, ರೋಟೋವೇಟರ್, ಡಿಸ್ಕ್ ನೇಗಿಲು, ಕಲ್ಟೀವೇಟರ್ ಸೇರಿದಂತೆ ಇನ್ನಿತರ ಯಂತ್ರೋಪಕರಣಗಳು ಲಬ್ಯವಿರುತ್ತವೆ.

 ನಾಟಿ ಬಿತ್ತನೆ ಮಾಡುವ ಉಪಕರಣಗಳಾದ ಭತ್ತದ ನಾಟಿ ಯಂತ್ರ, ರಿಡ್ಜರ್ ಮತ್ತು ಬೀಜ ಗೊಬ್ಬರ ಏಕಕಾಲಕ್ಕೆ ಬಿತ್ತುವ ಕೂರಿಗೆ ಸೇರಿದಂತೆ ಇತರ ಯಂತ್ರೋಪಕರಣಗಳು ಇರುತ್ತವೆ.

ಕೊಯ್ಲು ಮತ್ತು ಒಕ್ಕಣಿ ಮಾಡುವ ಉಪಕರಣಗಳಾದ ಒಕ್ಕಣಿ ಯಂತ್ರ, ಬಹು ಬೆಳೆ ಒಕ್ಕಣಿ ಯಂತ್ರ ಮತ್ತು ಕಂಬೈನ್ಡ್ ಹಾರವೆಸ್ಟರ್ ಸೇರಿದಂತೆ ಇತರ ಯಂತ್ರೋಪಕರಣಗಳು ಸಿಗುತ್ತವೆ.

 ತ್ಯಾಜ್ಯ ವಸ್ತುಗಳ ನಿರ್ವಹಣೆ ಉಪಕರಣಗಳಾದ ಚಾಫ್ ಕಟರ್, ಕಬ್ಬಿನ ಸೊಗೆ ತುಂಡಿರಿಸಿ ಹರಡುವ ಯಂತ್ರ ಮತ್ತು ಕಬ್ಬು ಅರೆಯುವ ಯಂತ್ರ, ಡಿಜೇಲ್ ಪಂಪಸೆಟ್‌ಗಳು ಮತ್ತು ಯಂತ್ರ ಚಾಲಿತ ಸಸ್ಯ ಸಂರಕ್ಷಣಾ ಉಪಕರಣಗಳು ಲಭ್ಯವಿರುತ್ತವೆ.

ಅದೇ ರೀತಿ ಕೃಷಿ ಸಂಸ್ಕರಣಾ ಯೋಜನೆಯಡಿ ಕೃಷಿ ಹುಟ್ಟುವಳಿಗಳ ಮೌಲ್ಯವರ್ಧನೆಗಾಗಿ ದಾಲ್ ಪೊಸೆಸರ್, ಹಿಟ್ಟಿನ ಗಿರಣಿ, ಖಾರಾ ಕುಟ್ಟುವ ಯಂತ್ರ, ಶಾವಿಗೆ ತಯಾರಿಕೆ ಯಂತ್ರ, ಕಬ್ಬು ಅರೆಯುವ ಯಂತ್ರ ಸಹ ರಿಯಾಯ್ತಿ ದರದಲ್ಲಿ ವಿತರಿಸಲಾಗುವುದು.

ರೈತರು ತಮ್ಮ ಅರ್ಜಿಗಳನ್ನು ತಮ್ಮ ಹತ್ತಿರದ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಸಲ್ಲಿಸಬೇಕು. ಜೇಷ್ಠತಾ ಆಧಾರ ಮತ್ತು ಅನುದಾನದ ಲಭ್ಯತೆ ಮೇರೆಗೆ ಅರ್ಜಿಗಳನ್ನು ಪುರಸ್ಕರಿಸಿ ಯಂತ್ರೋಪಕರಗಳನ್ನು ವಿತರಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ, ಅಥವಾ ಆಯಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು.