ತಾವು ಬೆಳೆದ ಕಲ್ಲಂಗಡಿ ಹಣ್ನುಗಳನ್ನು ಕೊಳ್ಳುವವರಿಲ್ಲದೆ ಆ ಹಣ್ಣಿನಿಂದ ಜೋನೆ ಬೆಲ್ಲ ತಯಾರಿಸುವ ಮೂಲಕ ರಾಜ್ಯ ಮಾತ್ರವಲ್ಲದೆ ದೇಶದಾದ್ಯಂತ ಮನೆಮಾತಾಗಿರುವ ಜಯರಾಮ ಶೆಟ್ಟಿ ಸಂಪದಮನೆ ಅವರ ಪ್ರಯತ್ನದ ಕುರಿತಾದ ಲೇಖನವನ್ನು ಇದೇ ಕೃಷಿ ಜಾಗರಣ ವೇದಿಕೆಯಲ್ಲಿ ನೀವು ಈಗಾಗಲೇ ಓದಿದ್ದೀರಿ.
ಕೃಷಿ ಜಾಗರಣ ಸೇರಿದಂತೆ ರಾಜ್ಯ, ದೇಶ ಹಾಗೂ ಅಂತಾರಾಷ್ಟಿçÃಯ ಮಟ್ಟದ ಒಟ್ಟು 60ಕ್ಕೂ ಹೆಚ್ಚು ದಿನಪತ್ರಿಕೆಗಳು, ಸುದ್ದಿ ವಾಹನಿಗಳು ಹಾಗೂ ಡಿಜಿಟಲ್ ಮಾಧ್ಯಮಗಳು ಜಯರಾಮ ಶೆಟ್ಟಿ ಅವರ ಸಾಧನೆಯ ಸಾರವನ್ನು ಪ್ರಕಟಿಸಿ ಅವರು ಮನೆಮಾತಾಗುವಂತೆ ಮಾಡಿವೆ. ಇದರಿಂದ ಶೆಟ್ಟರೇನೋ ಖುಷಿಯಾಗಿದ್ದಾರೆ. ಜೊತೆಗೆ ಪ್ರಚಾರ ಸಿಕ್ಕಿತೆಂದು ಸುಮ್ಮನೆ ಕೂರದೆ, ತಮ್ಮಂತೆ ಕಲ್ಲಂಗಡಿ ಬೆಳೆದು, ಈಗ ಹಣ್ಣುಗಳು ಮಾರಾಟವಾಗದೇ ತಲೆ ಮೇಲೆ ಕೈ ಹೊತ್ತು ಕುಳಿತ ರೈತರು ಹಾಗೂ ಇತರೆ ಆಸಕ್ತ ಜನರಿಗೆ ಕಲ್ಲಂಗಡಿ ಹಣ್ಣಿನಲ್ಲಿ ಜೋನೆ ಬೆಲ್ಲವನ್ನು ತಯಾರಿಸುವ ಕುರಿತು ಮಾಹಿತಿ, ಮಾರ್ಗದರ್ಶನ ನೀಡಲು ಜಯರಾಮ ಶೆಟ್ಟಿ ಅವರು ಸಿದ್ಧರಿದ್ದಾರೆ.
ಮೊದಲು ಸಣ್ಣ ಪ್ರಮಾಣ
ಈ ಕುರಿತು ‘ಕೃಷಿ ಜಾಗರಣ’ ಜೊತೆ ಮಾತನಾಡಿರುವ ಕಲ್ಲಂಗಡಿ ಜೋನೆ ಬೆಲ್ಲದ ಜನಕ ಜಯರಾಮ ಶೆಟ್ಟಿ ಅವರು, ‘ನಾನೇನು ಇದರಲ್ಲಿ ಪರಿಣಿತ ಅಲ್ಲ. ಹೋಟೆಲ್ ಉದ್ಯಮದವನಾಗಿರುವ ಕಾರಣ ಅಡುಗೆ ಬಗ್ಗೆ ನನಗಿರುವ ಅಲ್ಪ ಜ್ಞಾನವನ್ನು ಬಳಸಿಕೊಂಡು ಕಲ್ಲಂಗಡಿಯಲ್ಲಿ ಜೋನೆ ಬೆಲ್ಲ ತಯಾರಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದೇನೆ. ಆದರೆ ನಾನು ಏಕಾಏಕಿ ಎಲ್ಲ 6 ಟನ್ ಹಣ್ಣುಗಳನ್ನು ಒಮ್ಮೆಲೆ ರಸ ಮಾಡಿ, ಕುಪ್ಪರಿಗೆಗೆ ಸುರಿದು ಬೆಲ್ಲ ತೆಗೆಯಲಿಲ್ಲ. ದೊಡ್ಡ ಪ್ರಮಾಣದಲ್ಲಿ ಬೆಲ್ಲ ಕುದಿಸುವ ಮೊದಲು ಐದಾರು ಬಾರಿ ಸಣ್ಣ ಬಾಣಲೆಯಲ್ಲಿ ಒಂದೋ, ಎರಡೋ ಕಲ್ಲಂಗಡಿ ಹಣ್ಣುಗಳ ರಸ ತೆಗೆದು ಒಲೆ ಮೇಲಿರಿಸಿ ಪ್ರಯೋಗ ಮಾಡಿದ್ದೇನೆ’.
‘ಮೊದಲ ಬಾರಿ, ಎರಡನೇ ಬಾರಿ, ಅಷ್ಟೇ ಏಕೆ ಮೂರನೇ ಬಾರಿ ಪ್ರಯೋಗ ಮಾಡಿದಾಗಲೂ ನನಗೆ ವಿಶ್ವಾಸ ಬರಲಿಲ್ಲ. ಕೊನೆಗೆ ನಾಲ್ಕನೇ ಬಾರಿಯೂ ಹಾಗೇ ಆಯಿತು. ಐದನೇ ಬಾರಿ ಪ್ರಯೋಗ ಪೂರ್ಣಗೊಳಿಸಿದಾಗ ನಾನು ದೊಡ್ಡ ಪ್ರಮಾಣದಲ್ಲಿ ಬೆಲ್ಲ ತಯಾರಿಸಬಲ್ಲೆ ಎಂಬ ವಿಶ್ವಾಸ ಬಂತು. ಆ ಬಳಿಕವೇ ನಾನು ದೊಡ್ಡ ಪ್ರಯತ್ನಕ್ಕೆ ಕೈ ಹಾಕಿದೆ. ನನ್ನ ಹೋಟೆಲ್ ಉದ್ಯೋಗಿಗಳು, ಸ್ನೇಹಿತರು ಮತ್ತು ಕುಟುಂಬದವರ ಸಹಕಾರದಿಂದ ಆ ಪ್ರಯತ್ನದಲ್ಲಿ ಯಶಸ್ವಿಯೂ ಆದೆ,’ ಎನ್ನುತ್ತಾರೆ ಜಯರಾಮ ಶೆಟ್ಟರು.
ಪ್ರಯೋಗ ಮಾಡಿ
ಕಲ್ಲಂಗಡಿ ಹಣ್ಣಿನಲ್ಲಿ ಜೋನೆ ಬೆಲ್ಲ ತಯಾರಿಸುವ ಮೊದಲು ಜೋನೆ ಬೆಲ್ಲದ ಹದ ಹಾಗೂ ರುಚಿಯ ಅನುಭವ ಇರಬೇಕು. ಕಲ್ಲಂಗಡಿ ರಸವನ್ನು ಹೆಚ್ಚು ಹೊತ್ತು ಒಲೆ ಮೇಲೆ ಕಾಯಿಸಿದರೆ ಅಥವಾ ಕುದಿಸಿದರೆ ಕಹಿಯಾಗುತ್ತದೆ. ಹೀಗಾಗಿ ಸರಿಯಾದ ಹದ ಬರುವವರೆಗೆ ಮಾತ್ರ ಕುದಿಸಬೇಕು. ಈ ಹದ ತಿಳಿಯಬೇಕೆಂದರೆ ಮೊದಲು ಮನೆಯಲ್ಲೇ ಸಣ್ಣ ಪ್ರಮಾಣದಲ್ಲಿ ಬೆಲ್ಲ ತಯಾರಿಸಿ ನೀವೇ ರುಚಿ ನೋಡಿ. ಬೆಲ್ಲ ಸರಿಯಾದ ಹದಕ್ಕೆ ಬಂದಿದೆ, ರುಚಿ ಚೆನ್ನಾಗಿದೆ, ಈಗ ದೊಡ್ಡ ಪ್ರಮಾಣದಲ್ಲಿ ತಯಾರಿಸಬಹುದು ಎಂಬ ವಿಶ್ವಾಸ ಬಂದ ನಂತರವಷ್ಟೇ ಈ ಕಾರ್ಯಕ್ಕೆ ಕೈ ಹಾಕಿ. ಏಕೆಂದರೆ, ಎಲ್ಲ ಕೆಟ್ಟುಹೋದ ನಂತರ ಬೇರೆಯವರನ್ನು ದೂಷಿಸಿದರಿಂದ ಯಾವ ಪ್ಪರಯೋಜನವೂ ಇಲ್ಲ ಎಂಬುದು ಶೆಟ್ಟರ ಸಲಹೆ.
ಬೆಲ್ಲದ ರುಚಿ ನೋಡಿ ಬನ್ನಿ
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ನಿಟ್ಟೂರು ಗ್ರಾಮದಲ್ಲಿರುವ ಜಯರಾಮ ಶೆಟ್ಟಿ ಅವರ ಮಾಲಿಕತ್ವದ ‘ನವರತ್ನ’ ಹೋಟೆಲ್‌ನಲ್ಲಿ ಕಲ್ಲಂಗಡಿಯಿAದ ತಯಾರಿಸಿರುವ ಜೋನೆ ಬೆಲ್ಲ ಸ್ಟಾಕ್ ಇದೆ. ಸುಮಾರು 500 ಕೆ.ಜಿಯಷ್ಟು ಬೆಲ್ಲ ಸಿದ್ಧವಿದ್ದು, ಆಸಕ್ತರು ಹೋಟೆಲ್‌ಗೆ ಭೇಟಿ ನೀಡಿದರೆ ಬೆಲ್ಲದ ರುಚಿ (ಉಚಿತ ಸ್ಯಾಂಪಲ್) ನೋಡಬಹುದು. ಬೆಲ್ಲದ ರುಚಿ ನೋಡಲು ಇಚ್ಛಿಸುವವರು, ಖರೀದಿಸುವವರು ಹಾಗೂ ಬೆಲ್ಲ ತಯಾರಿಸುವ ಬಗ್ಗೆ ಮಾರ್ಗದರ್ಶನ ಪಡೆಯಲು ಆಸಕ್ತಿ ಇರುವವರು 8971925238 ಸಂಖ್ಯೆಗೆ ಕರೆ ಮಾಡುವ ಮೂಲಕ ಜಯರಾಮ ಶೆಟ್ಟಿ ಸಂಪದಮನೆ ಅವರನ್ನು ತಲುಪಬಹುದು.
ಪೇಟೆಂಟ್ ಪಡೆಯುವ ಉದ್ದೇಶವಿಲ್ಲ
ಕಲ್ಲಂಗಡಿಯ ಜೋನೆ ಬೆಲ್ಲ ನಾನೇ ಆವಿಷ್ಕರಿಸಿದ ಉತ್ಪನ್ನ. ಹಾಗಂತಾ ನಾನೇನು ಅದಕ್ಕೆ ಪೇಟೆಂಟ್ ಪಡೆಯುವ ಯಾವುದೇ ಉದ್ದೇಶ ಸದಸ್ಯದ ಮಟ್ಟಿಗಂತೂ ನನಗಿಲ್ಲ. ನಾನು ನನ್ನ ಕೈಲಾದ ಪ್ರಯತ್ನ ಮಾಡಿ, ಒಂದು ಉಪಯುಕ್ತ ಮಾದರಿಯನ್ನು ಜನರ ಮುಂದಿರಿಸಿದ್ದೇನೆ. ಕೃಷಿ ವಿಜ್ಞಾನಿಗಳು, ಸಂಶೋಧಕರು ಇದೇ ಕಲ್ಲಂಗಡಿಯಲ್ಲಿ ಇತರ ಉಪ ಉತ್ಪನ್ನಗಳನ್ನು ತಯಾರಿಸುವುದು, ಇಲ್ಲವೇ ಜೋನೆ ಬೆಲ್ಲದ ಮಾದರಿಯನ್ನೇ ಆಧಾರವಾಗಿಟ್ಟುಕೊಂಡು ಇದರಲ್ಲಿ ಇತರ ವಿಧಗಳನ್ನು ಅಭಿವೃದ್ಧಿ ಪಡಿಸುವ ಪ್ರಯತ್ನ ಮಾಡಬಹುದು. ಸಂಕಷ್ಟದಲ್ಲಿರುವ ರೈತರಿಗೆ ಇದರಿಂದ ಹೆಚ್ಚು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ನನ್ನ ಕೈಲಾದ ಮಾಹಿತಿ, ನೆರವು ನೀಡಲು ಸಿದ್ಧನಿದ್ದೇನೆ,’ ಎಂದು ಜಯರಾಮ ಶೆಟ್ಟಿ ಹೇಳಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಜಯರಾಮ ಶೆಟ್ಟಿ ಸಂಪದಮನೆ- 89719 25238 / 84520 32888.