‘ರಾಗಿ ಉಂಡವ ನಿರೋಗಿ’, ‘ಅಕ್ಕಿ ಉಂಡವ ಹಕ್ಕಿ ಜೋಳ ಉಂಡವ ತೋಳ’ ಎಂಬ ಗಾದೆ ಮಾತುಗಳನ್ನು ನೀವು ಕೇಳಿರುತ್ತೀರ. ಈ ಗಾದೆಗಳು ಆಹಾರ ಧಾನ್ಯಗಳಾಗಿ ರಾಗಿ ಮತ್ತು ಅಕ್ಕಿಯ ಮಹತ್ವವನ್ನು ಸಾರಿ ಹೇಳುತ್ತವೆ. ಆದರೆ, ಆಧುನಿಕ ಜಗತ್ತಿನಲ್ಲಿ ಅಕ್ಕಿ ಮತ್ತು ಅದರಿಂದ ಮಾಡುವ ಅನ್ನದ ಆರೋಗ್ಯ ಪ್ರಯೋಜನಗಳ ಬಗ್ಗೆ ಆಗಿಂದಾಗ್ಗೇ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಹೆಚ್ಚು ಅನ್ನ ಸೇವನೆಯಿಂದ ದೇಹದ ತೂಕ ಹೆಚ್ಚುತ್ತದೆ, ಅನ್ನ ಉಂಡರೆ ಮಧುಮೇಹ ಬರುತ್ತದೆ, ಬಿಜ್ಜು ಹೆಚ್ಚುತ್ತದೆ ಎಂದೆಲ್ಲಾ ಹೇಳುತ್ತಾರೆ. ಅದೇ ರಾಗಿ ಎಂದಾಕ್ಷಣ ಎಲ್ಲರೂ ಆರೋಗ್ಯ ಮಂತ್ರ ಜಪಿಸಲು ಆರಂಭಿಸುತ್ತಾರೆ. ರಾಗಿ ಉಂಡರೆ ರೋಗಗಳು ಹತ್ತಿರ ಸುಳಿಯುವುದೇ ಇಲ್ಲ ಎನ್ನುವ ಹಂತಕ್ಕೆ ಬಹುಪರಾಕು ಮಾಡುತ್ತಾರೆ.
ರಾಗಿ ಮತ್ತು ಭತ್ತ (ಅಕ್ಕಿ-ಅನ್ನ) ಇವೆರಡರಲ್ಲಿ ಯಾವುದು ಶ್ರೇಷ್ಠ ಆಹಾರ ಧಾನ್ಯ ಎಂಬ ಚರ್ಚೆ ದಿನ ಬೆಳಗಾದರೆ ನಡೆಯುತ್ತಲೇ ಇರುತ್ತದೆ. ರಾಗಿಯೇ ಶ್ರೇಷ್ಠ ಎಂದು ಹೇಳುವ ಜನ ಅನ್ನ ತಿನ್ನದೇ ಇರಲಾರರು. ಜೊತೆಗೆ, ಭತ್ತ ಅಥವಾ ಅದರಿಂದಾಗುವ ಅನ್ನದ ಬಗ್ಗೆ ಯಾರು ಎಷ್ಟೇ ಅಪಪ್ರಚಾರ ಮಾಡಿದರೂ ಅನ್ನ ಸೇವಿಸುವವರ ಸಂಖ್ಯೆ ಹೆಚ್ಚೇ ಇದೆ. ಒಂದರ್ಥದಲ್ಲಿ ಅನ್ನ ಯೂನಿವರ್ಸಲ್ ಫುಡ್ ಆಗಿದೆ ಎಂದರೂ ತಪ್ಪಾಗಲಾರದು.
ಇಲ್ಲಿ ಒಂದು ವಿಶೇಷ ಏನೆಂದರೆ ಈ ರಗಿ ಮತ್ತು ಭತ್ತಗಳ ನಡುವಿನ ವಾಕ್ಸಮರ, ಶ್ರೇಷ್ಠ ಸ್ಥಾನಕ್ಕಾಗಿ ನಡೆಯುತ್ತಿರುವ ಜಗಳ ಇಂದು ನೆನ್ನೆಯದಲ್ಲ. ಅದು ಅನಾದಿಕಾಲದಿಂದಲೂ ನಡೆದುಕೊಂಡೇ ಬಂದಿದೆ. ಒಂದು ಮುಲದ ಪ್ರಕಾರ ಭತ್ತ-ರಾಗಿ ನಡುವಿನ ಈ ಪೌರಾಣಿಕ ಜಗಳ ಆರಂಭವಾದದ್ದು ತ್ರೇತಾಯುಗದಲ್ಲಿ!
ಹೀದೂ ಪುರಾಣಗಳ ಪ್ರಕಾರ ರಾಮಾಯಣದ ಘಟನಾವಳಿಗಳು ನಡೆದದ್ದು ಈ ತ್ರೇತಾಯುಗದಲ್ಲಿ. ಇದೇ ಯುಗದಲ್ಲಿ ಭತ್ತ ಹಾಗೂ ರಾಗಿ ನಡುವೆ ವಾಕ್ಸಮರ ನಡೆದು, ಅವುಗಳ ವ್ಯಾಜ್ಯ ಪ್ರಭು ಶ್ರೀರಾಮನ ಬಳಿ ಹೋಗಿತ್ತು. ಈ ವೃತ್ತಾಂತವನ್ನು ಶ್ರೀ ಕನಕದಾಸರು ತಮ್ಮ ‘ರಾಮಧ್ಯಾನ ಚರಿತೆ’ಯಲ್ಲಿ ವಿವರಿಸಿದ್ದಾರೆ. ರಾಮಧ್ಯಾನ ಚರಿತೆಯು ಕನಕದಾಸರು ರಚಿಸಿರುವ ಒಂದು ವಿಡಂಬನಾ ಕಾವ್ಯ. ಇದು ಸಂಪೂರ್ಣವಾಗಿ ನೆರೆದೆಲಗ (ರಾಗಿ) ವ್ರೀಹಿ (ಭತ್ತ) ನಡುವಿನ ಜಗಳದ ಕಥೆಯಾಗಿದೆ.
ರಾಗಿ-ಭತ್ತದ ಜಗಳದ ಕಥೆ
ರಾಗಿ ಮತ್ತು ಭತ್ತ ನಾನೆಚ್ಚು ತಾನೆಚ್ಚು ಎಂದು ಜಗಳ ಮಾಡುತ್ತಿರುತ್ತವೆ. ಈ ವಿಷಯ ಶ್ರೀ ರಾಮನ ಕಿವಿಗೂ ಮುಟ್ಟಿ, ಪ್ರಭು ಶ್ರೀರಾಮರು ಇವೆರಡೂ ಧಾನ್ಯಗಳನ್ನು ತಮ್ಮ ಆಸ್ತಾನಕ್ಕೆ ಕರೆಸಿಕೊಂಡು, ಅವೆರಡರ ವಾದವನ್ನು ಕೇಳುತ್ತಾರೆ. ಮೊದಲು ಮಾತನಾಡಿದ ಭತ್ತ ಈ ಜಗತ್ತಿಗೆ ತನ್ನ ಅನಿವಾರ್ಯತೆ ಮತ್ತು ಅಗತ್ಯವನ್ನು ಒತ್ತಿ ಹೇಳುತ್ತದೆ.
ಭತ್ತ ಹೇಳುತ್ತದೆ...
‘ಪ್ರಭು ಶ್ರೀರಾಮ, ಆ ರಾಗಿಗಿಂತ ನಾನೇ ಶ್ರೇಷ್ಠ. ಹೇಗೆಂದರೆ ಭೂಸುರರು ಅಂದರೆ ಮಾನವರು ನಿತ್ಯ ಆಹಾರವಾಗಿ ಬಳಸುವುದು ನನ್ನನ್ನೇ (ಅನ್ನವನ್ನೇ). ಹುಟ್ಟಿನಿಂದ ಸಾಯುವವರೆಗೂ ನಡೆಯುವ ಎಲ್ಲಾ ರೀತಿಯ ಕಾರ್ಯಗಳಲ್ಲೂ ನನ್ನ ಉಪಸ್ಥಿತಿ ಇರಲೇಬೇಕು. ಮನುಷ್ಯ ಹುಟ್ಟಿದಾಗಿನಿಂದ ಮಣ್ಣು ಸೇರುವವರೆಗೂ ನಾನೇ ಅವನಿಗೆ ಆಹಾರ. ನಾನಿಲ್ಲದೆ ಶುಭ ಕಾರ್ಯಗಳಾಗಲಿ ಅಶುಭ ಕಾರ್ಯಗಳಾಗಲಿ ನಡೆಯುವುದಿಲ್ಲ. ಈ ಲೋಕವು ನನ್ನನ್ನು ಹೆಚ್ಚಾಗಿ ಬಳಸುವುದರಿಂದ ನಾನೇ ಹೆಚ್ಚು. ನಾನೇ ಶ್ರೇಷ್ಠ,’ ಎಂದು ತನ್ನ ಗುಣಗಾನ ಮಾಡಿಕೊಳ್ಳುತ್ತದೆ.
ರಾಗಿ ಹೇಳುತ್ತದೆ...
ಮಹಾಪ್ರಭು, ಪ್ರಪಂಚದಲ್ಲಿ ನನ್ನ ಬಳಕೆಯೇ ಹೆಚ್ಚು. ಹೇಗೆಂದರೆ ಈ ಲೋಕದಲ್ಲಿ ಶ್ರೀಮಂತರಿಗಿAತ ಬಡವರೆ ಜಾಸ್ತಿ. ನಾನು ಬಡವರ ಅನು‘ರಾಗಿ’. ಕೂಲಿ ಕೆಲಸ ಮಾಡುವವರಿಂದ ಹಿಡಿದು, ಶ್ರೀಮಂತರವರೆಗೂ ನನ್ನನ್ನು ಬಳಸುತ್ತಾರೆ. ನನ್ನನ್ನು ತಿಂದವರು ಶಕ್ತಿಶಾಲಿಗಳಾಗುತ್ತಾರೆ. ‘ಹಿಟ್ಟಂ ತಿಂದವ ಬೆಟ್ಟವ ಕಿತ್ತಿಟ್ಟಂ’ ಎಂಬ ಗಾದೆ ನನ್ನನ್ನು ನೋಡೆ ಮಾಡಿದ್ದು. ಹಾಗೇ ನನ್ನನ್ನು ಸೇವಿಸಿದವರಿಗೆ ಅನಾರೋಗ್ಯದ ಚಿಂತೆಯೇ ಇರುವುದಿಲ್ಲ. ಇದಕ್ಕೂ ಕೂಡ ‘ರಾಗಿ ತಿಂದವ ನಿರೋಗಿ’ ಎಂಬ ಗಾದೆ ಮಾತಿದೆ. ಆದುದರಿಂದ ನಾನೇ ಹೆಚ್ಚು. ನಾನೇ ಶ್ರೇಷ್ಠ,’ ಎಂದು ತನ್ನನ್ನು ತಾನು ಬಣ್ಣಿಸಿಕೊಳ್ಳುತ್ತದೆ.
ವಾಸ್ತವತೆಯ ಆಧಾರದಲ್ಲಿ ನೋಡಿದಾಗ ಭತ್ತ ಮತ್ತು ರಾಗಿಯ ವಾದ ಅವುಗಳ ಪ್ರಕಾರ ಸರಿಯಾಗಿಯೇ ಇದೆ. ಆದರೆ ಎರಡೂ ಧಾನ್ಯಗಳ ವಾದದಲ್ಲಿದ್ದ ‘ನಾನು’ ಎಂಬ ಅಹಂಕಾರ ಕಂಡು ಶ್ರೀರಾಮರಿಗೆ ಕೋಪ ಬರುತ್ತದೆ. ಕೂಡಲೇ ಅವೆರಡನ್ನು ಕಾರಾಗೃಹಕ್ಕೆ ತಳ್ಳುವಂತೆ ತನ್ನ ಸೇವಕರಿಗೆ ಶ್ರೀರಾಮ ಆಜ್ಞಾಪಿಸುತ್ತಾರೆ. ಹೀಗೆ ಧಾನ್ಯಗಳೆರಡನ್ನೂ ಸೆರೆಮನೆಗೆ ತಳ್ಳಿದ ಪ್ರಭ ಶ್ರೀರಾಮ, ಐದಾರು ತಿಂಗಳು ತಮ್ಮ ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆ ಅವುಗಳನ್ನು ಮರೆತು ಬಿಡುತ್ತಾರೆ. ಆರು ತಿಂಗಳ ನಂತರ ಅವುಗಳ ನೆನಪು ಬಂದು ಎರಡನ್ನೂ ವಿಚಾರಣೆಗೆ ಕರೆಸಿದಾಗ, ರಾಗಿ ಗುಂಡಣ್ಣನAತೆ ಉರುಳಿಕೊಂಡು ಬರುತ್ತದೆ. ಭತ್ತ ಅನಾರೋಗ್ಯದಿಂದ ನಿತ್ರಾಣಗೊಂಡು ಸಾಯುವ ಸ್ಥಿತಿ ತಲುಪಿರುತ್ತದೆ.
ಆಗ ಶ್ರೀರಾಮ, ‘ನಿಮ್ಮಿಬ್ಬರಲ್ಲಿ ಯಾರು ಶ್ರೇಷ್ಠ ಈಗ ಹೇಳಿ’ ಎಂದಾಗ ಭತ್ತ ನಾಚಿಕೆಯಿಂದ ತಲೆ ತಗ್ಗಿಸುತ್ತದೆ. ಶ್ರೀರಾಮ ರಾಗಿಯನ್ನು ತನ್ನ ಬಳಿ ಕರೆದು ಅದನ್ನು ನೇವರಿಸಿ, ಅದಕ್ಕೆ ‘ರಾಮಧಾನ್ಯ’ ಎಂಬುದಾಗಿ ಹೊಸ ಹೆಸರೊಂದನ್ನು ಕೊಡುತ್ತಾನೆ. ಈ ಚರಿತೆಯಿಂದ ಭತ್ತ ಮತ್ತು ರಾಗಿ ಧಾನ್ಯಗಳು ಪುರಾಣಗಳ ಕಾಲದಿಂದಲೂ ಇರುವುದು ಖಚಿತವಾಗುತ್ತದೆ.
ಭತ್ತ ಬಾಲ್ಯವಾದರೆ, ಅಕ್ಕಿ ಯೌವನ, ಅನ್ನ ಮುಪ್ಪು. ಏಕೆಂದರೆ ಅಕ್ಕಿಯನ್ನು ಬೇಯಿಸಿ ಅನ್ನ ಮಾಡಿದರೆ ಅದು ಅದರ ಅಂತ್ಯ ಎಂದೇ ಅರ್ಥ. ಅನ್ನವಾದ ನಂತರ ಅದಕ್ಕೆ ಮರು ಹುಟ್ಟು ಇರುವುದಿಲ್ಲ. ಅದೇ ರೀತಿ ರಾಗಿ ಒಮ್ಮೆ ಹಿಟ್ಟಾಗಿ ಪರಿವರ್ತನೆ ಆಯಿತೆಂದರೆ ಅದರ ಬದುಕು ಕೂಡ ಅಂತ್ಯವಾಗುತ್ತದೆ. ಆದರೆ, ಇವೆರಡೂ ಧಾನ್ಯಗಳು ಮನುಕುಲದ ಹಸಿವು ನೀಡಿಸುವ ಮೂಲಕ ಸದಾ ಕಾಲ ಜೀವಂತವಾಗಿರುತ್ತವೆ. ಭತ್ತ ಮತ್ತು ರಾಗಿ ಎರಡೂ ಚಿರಂಜೀವಿಗಳೇ...