Agripedia

ತಂಪು ಹವಾಮಾನದಿಂದ ವಿವಿಧ ಬೆಳೆಗಳಲ್ಲಿ ಕಂಡುಬರುವ ರೋಗಗಳ ಬಗ್ಗೆ ನಿಮಗಿದೆಯೇ ಮಾಹಿತಿ?

05 August, 2021 11:16 AM IST By:

ಜುಲೈ ತಿಂಗಳಲ್ಲಿ ಬಹುತೇಕ ದಿನಗಳಂದು ಮಳೆ ಕಂಡಿರುವ ರೈತರು ಆ ತಿಂಗಳ ಕೊನೆಯಲ್ಲಿ ಕೊಂಚ ಮಳೆಯ ಅಭಾವ ಎದುರಿಸಿದ್ದಾರೆ. ಆದರೆ ಸತತ ಮಳೆಯಿಂದ ಬಳಲಿದ್ದ ಬೆಳೆಗಳು ಚೇತರಿಸಿಕೊಳ್ಳಲು ಮಳೆಯ ಬಿಡುವು ಸಹಕಾರಿಯಾಗಿದೆ. ಇದೀಗ ಆಗಸ್ಟ್ ಆರಂಭವಾಗುತ್ತಿದ್ದAತೆ ಮತ್ತೆ ಮಳೆರಾಯನ ಉತ್ಸಾಹ ಹೆಚ್ಚಿದ್ದು, ತಿಂಗಳ ಮೊದಲ ದಿನದಿಂದಲೇ ರಾಜ್ಯದ ಹಲವೆಡೆ ಮೋಡ ಮುಚ್ಚಿದ ವಾತಾವರಣವಿದೆ. ಮಲೆನಾಡು, ಮಧ್ಯ ಕರ್ನಾಟಕ ಭಾಗದಲ್ಲಿ ಮಳೆಯ ಸಿಂಚನ ಕೂಡ ಆಗಿದೆ.

ಈ ನಡುವೆ ಮುಂದಿನ ಐದು ದಿನಗಳ ಕಾಲ ಅಲ್ಪ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ, ಹವಾಮಾನಕ್ಕೆ ಅನುಗುಣವಾಗಿ ಪ್ರಮುಖ ತರಕಾರಿ ಬೆಳೆಗಳನ್ನು ನಿರ್ವಹಿಸುವುದು ಹೇಗೆ ಎಂಬ ಕುರಿತು ಬೆಂಗಳೂರಿನ ಹವಾಮಾನ ಇಲಾಖೆಯ ತಜ್ಞರು ಮತ್ತು ಕೋಲಾರ ಜಿಲ್ಲಾ ಹವಾಮಾನ ಘಟಕ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು  ‘ಕೃಷಿ ಜಾಗರಣ’ಕ್ಕೆ ಮಾಹಿತಿ ನೀಡಿದ್ದಾರೆ.

ಒಣ ಹವೆ ಮುಂದುವರಿಯುವ ಸಾಧ್ಯತೆ

ಆಗಸ್ಟ್ 8ರವರೆಗೆ ರಾಜ್ಯದ ಬಹುತೇಕ ಭಾಗಗಳಲ್ಲಿ ಒಣ ಹವೆ ಮಂದುವರಿಯುವ ಸಾಧ್ಯತೆ ಇದೆ. ತುಮಕೂರಿನಿಂದ ಆರಂಭವಾಗಿ ಮಧ್ಯ ಕರ್ನಾಟಕದ ಎಲ್ಲಾ ಜಿಲ್ಲೆಗಳು, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮೋಡ ಮುಚ್ಚಿದ ವಾತಾವರಣ ಇರಲಿದೆ. ಈ ವೇಳೆ ಗರಿಷ್ಠ ತಾಪಮಾನವು 29ರಿಂದ 32 ಡಿಗ್ರಿ ಇರಲಿದ್ದು, ಕನಿಷ್ಠ ತಾಪಮಾನ 19ರಿಂದ 20 ಡಿಗ್ರಿ ಇರಲಿದೆ. ಜೊತೆಗೆ 23ರಿಂದ 28 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ. ಹೀಗೆ ಮೋಡ ಕವಿದ ವಾತಾವರಣ ಇರುವ ಸಂದರ್ಭದಲ್ಲಿ ವಿವಿಧ ತರಕಾರಿ ಬೆಳೆಗಳಲ್ಲಿ ಕೀಟ ಬಾಧೆ ಹಾಗೂ ರೋಗಗಳು ಕಾಣಿಸಿಕೊಳ್ಳುವುದು ಸಹಜ. ಅಂತಹ ಕೀಟ ಬಾಧೆ ಹಾಗು ರೋಗಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಿರುವ ಕ್ರಮಗಳ ಮಾಹಿತಿ ಇಲ್ಲಿದೆ.

ಬದನೆ ಕಾಯಿ ಬೆಳೆ

ಬದನೆ ಬೆಳೆಯಲ್ಲಿ ಕುಡಿ ಮತ್ತು ಕಾಯಿ ಕೊರೆಯುವ ಹುಳು ಬಾಧೆ ಕಂಡುಬರಲಿದ್ದು, ಎಲೆಯ ದೇಟು, ಮಧ್ಯದ ನರಗಳನ್ನು ಕೊರೆಯುವ ಹುಳುಗಳು, ಮೊಗ್ಗುಗಳನ್ನೂ ಕೊರೆದು ತಿನ್ನುತ್ತವೆ. ಜೊತೆಗೆ ಈಗಾಗಲೇ ಕಾಯಿಗಳು ಇದ್ದಲ್ಲಿ, ಕೊರೆದು ಒಳಗೆ ಸೇರುತ್ತವೆ. ಈ ಹುಳುವಿನ ಹತೋಟಿಗೆ ಪ್ರತಿ ಒಂದು ಲೀಟರ್ ನೀರಿಗೆ 0.5 ಮಿ.ಲೀ ಕ್ಲೋರಾಂಟ್ರಿನಿಲಿಪ್ರೋಲ್ 18.5ಎಸ್‌ಸಿ ಅಥವಾ 0.5 ಮಿ.ಲೀ ಸೈಪರ್ ಮೆಥ್ರಿನ್ 10ಇಸಿ ಇಲ್ಲವೇ 0.2 ಗ್ರಾಂ. ಇಮಾಮೆಕ್ಟಿನ್ ಬೆಂಜೋಯೆಟ್ 5ಎಸ್‌ಜಿ ಅನ್ನು ಬೆರೆಸಿ ಬೆಳೆಗಳಿಗೆ ಸಿಂಪಡಿಸಬೇಕು. ಇದರೊಂದಿಗೆ ಒಂದು ಎಕರೆಗೆ 10 ಮೋಹಕ ಬಲೆಗಳನ್ನು ಬಳಸುವ ಮೂಲಕವೂ ಕೀಟಗಳ ಹಾವಳಿ ನಿಯಂತ್ರಿಸಬಹುದು.

ತೊಗರಿ ಬೆಳೆ

ಮಳೆ ಹಾಗೂ ಅತಿ ಬಿಸಿಲು ಒಟ್ಟೊಟ್ಟಿಗೇ ಬೀಳುತ್ತಿರುವುದರಿಂದ ತೊಗರಿ ಬೆಳೆಯನ್ನು ಸೊರಗು ರೋಗ ಬಾಧಿಸುತ್ತಿದೆ. ಇದು ಬೀಜ ಮತ್ತು ಮಣ್ಣಿನ ಮೂಲಕ ಹರಡುವ ರೋಗವಾಗಿದ್ದು, ಬಿತ್ತನೆ ವೇಳೆ ಬೀಜೋಪಚಾರವೇ ಇದಕ್ಕೆ ಪ್ರಮುಖ ಮದ್ದಾಗಿದೆ. 30ರಿಂದ 45 ದಿನಗಳ ಹಂತದ ಬೆಳೆಯಲ್ಲಿ ರೋಗ ಕಾಣಿಸಿಕೊಂಡಿದ್ದರೆ ರೋಗ ಹೊಂದಿರುವ ಗಿಡಗಳನ್ನು ಕಿತ್ತು ನಾಶಪಡಿಸಿ. ಊಟದ ಜೋಳ ಅಥವಾ ಮೆಕ್ಕೆಜೋಳವನ್ನು ಮಿಶ್ರ ಬೆಳೆಯನ್ನಾಗಿ ಬೆಳೆಯುವ ಮೂಲಕವೂ ತೊಗರಿಯಲ್ಲಿ ಸೊರಗು ರೋಗ ನಿಯಂತ್ರಿಸಬಹುದು.

ನೆಲಗಡಲೆಗೆ ಸುರುಳಿ ಪೂಚಿ

ಉತ್ತರ ಕರ್ನಾಟಕ ಭಾಗದಲ್ಲಿ ನೆಲಗಡಲೆ ಅಥವಾ ಶೇಂಗಾ ಬೆಳೆಗೆ ಸಾಮಾನ್ಯವಾಗಿ ಕಾಡುವ ಕೀಟ ಬಾಧೆ ಸುರುಳಿ ಪೂಚಿ ಹುಳು. ಈ ಹುಳು ಎಲೆಯ ಹಸಿರು ಭಾಗವನ್ನು ಕೊರೆದು ತಿನ್ನುವುದರಿಂದ ಎಲೆಗಳು ಸುಟ್ಟಾಂತೆ ಆಗುತ್ತವೆ. ಹಗಲು ವೇಳೆ ಗಿಡದ ಸಂಧಿಯಲ್ಲಿ ಅಡಗಿರುವ ಪೂಚಿ ಹುಳು, ರಾತ್ರಿ ದಾಳಿ ಮಾಡಿ, ಎಲೆ ಮತ್ತು ಕಾಂಡಗಳನ್ನು ತಿನ್ನುತ್ತದೆ. ಮಳೆ ಬಂದ ಮಾರನೆಯ ದಿನ ಹೊಲದಲ್ಲಿ ಪೆಟ್ರೋಮ್ಯಾಕ್ಸ್ ಅಥವಾ ಕೀಟಗಳನ್ನು ಆಕರ್ಷಿಸುವ ವಿದ್ಯುತ್ ದೀಪಗಳನ್ನು ಇರಿಸಿ ಪೂಚಿ ಹುಳು ಅಥವಾ ಪತಂಗಳನ್ನು ಆಕರ್ಷಿಸಿ ಕೊಲ್ಲಬೇಕು. ಬಾಧೆ ಹೆಚ್ಚಿದ್ದರೆ ಪ್ರತಿ ಲೀಟರ್ ನೀರಿಗೆ 2 ಮಿ.ಲೀ ಪ್ರೊಫೆನೋಪಾಸ್ ಬೆರೆಸಿ ಬೆಳೆಗೆ ಸಿಂಪಡಿಸಿ.

ಟೊಮೇಟೊ ಅಂಗಮಾರಿ

ಈ ರೋಗ ಶಿಲಿಂದ್ರದಿಂದ ಹರಡುತ್ತಿದ್ದು, ಟೊಮೇಟೊ ಗಿಡದ ಎಲೆ, ಕಾಂಡ ಮತ್ತು ಹಣ್ಣಿನ ತೊಟ್ಟುಗಳ ಮೇಲೆ ಕಂದು ಮಿಶ್ರಿತ ಕಪ್ಪು ಬಣ್ಣದ ಚುಕ್ಕೆಗಳು ಕಾಣಿಸಿಕೊಂಡು, ದಿನಕಳೆದಂತೆ ಕಡುಗಪ್ಪು ಬಣ್ಣಕ್ಕೆ ತಿರುಗುತ್ತವೆ. ಜೊತೆಗೆ ಎಲೆಗಳ ಕೆಳಗೆ ಬಿಳಿ ಬಣ್ಣದ ಶಿಲಿಂದ್ರ ಬೆಳವಣಿಗೆ ಹೊಂದುತ್ತದೆ. ಈ ಶಿಲಿಂದ್ರ ನಾಶಪಡಿಸಲು ಪ್ರತಿ ಲೀಟರ್ ನೀರಿಗೆ 2 ಗ್ರಾಂ. ಮ್ಯಾಂಕೊಜೆಬ್ 75 ಡಬ್ಲ್ಯೂಪಿ ಅಥವಾ 1 ಗ್ರಾಂ. ಫೆಮೋಕ್ಷಡೆನ್ 16.6 + ಸೈಮೋಕ್ಷನಿಲ್ 22.1 ಡಬ್ಲ್ಯೂಪಿ ಬೆರೆಸಿ 15 ದಿನಗಳ ಅಂತರದಲ್ಲಿ ಮೂರು ಬಾರಿ ಬೆಳೆಗಳಿಗೆ ಸಿಂಪಡಿಸಬೇಕು.

ರೇಷ್ಮೆಗೆ ಬೆಂಕಿ ರೋಗ

ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಭಾಗದಲ್ಲಿ ರೇಷ್ಮೆ ಬೆಳೆಗೆ ಬೆಂಕಿ ರೋಗ ಕಾಣಿಸಿಕೊಳ್ಳುತ್ತಿದ್ದು, ಇದು ಬ್ಯಾಕ್ಟೀರಿಯಾಗಳಿದ ಬರುತ್ತದೆ. ಹಿಪ್ಪು ನೇರಳೆ ಎಲೆಯ ಕೆಳಭಾಗ ಹಾಗೂ ಚಿಗುರುಗಳ ತುದಿಯಲ್ಲಿ ಕಂದು ಬಣ್ಣದ ನೀರು ಗುಳ್ಳೆ ಕಲೆಗಳು ಕಾಣಿಸಿಕೊಂಡು ಎಲೆಯು ಹಳದಿ ಬಣ್ಣಕ್ಕೆ ತಿರುಗುತ್ತದೆ. ಮಳೆ ಮತ್ತು ಚಳಿಗಾಲದಲ್ಲಿ ಹೆಚ್ಚಾಗಿ ಕಂಡುಬರುವ ಈ ರೋಗವನ್ನು ನಿಯಂತ್ರಿಸಲು, ಶೇಕಡಾ 0.01 ಸ್ಟ್ರೆಪ್ರಟೋಮೈಸಿನ್ ಅಥವಾ ಶೇಕಡಾ 0.2 ಡೈಥೇನ್ ಎಂ45 ಇಲ್ಲವೇ ಇಂಡೋಫಿಲ್ ಎಂ45 ಅನ್ನು ಬೆಳೆಗೆ ಸಿಂಪಡಿಸಬೇಕು.