Agripedia

ಮಾವಿನ ಬೆಳೆಗೆ ಚಳಿಗಾಲದಲ್ಲಿ ತಗಲುವ ರೋಗ, ಕೀಟಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ನಿರ್ವಹಣಾ ಕ್ರಮಗಳು

13 January, 2021 7:12 AM IST By:
Mango

ಮಾವು ಬೆಳೆಯುವ ರೈತರು ಚಳಿಗಾಲದಲ್ಲಿ ತೋಟಗಾರಿಕೆಯಿಂದ ನೀಡಲಾದ ಈ ಕೆಳಕಂಡ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು (ರಾ.ವ.) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

 ಮಾವಿನ ಬೆಳೆಯಲ್ಲಿ ಬೂದಿರೋಗ ಕಂಡು ಬಂದಿದ್ದು, ಚಳಿಗಾಲದಲ್ಲಿ ಆರಂಭವಾಗಿ ಬೇಸಿಗೆ ಪ್ರಾರಂಭವಾಗುವವರೆಗೆ ಕಂಡು ಬರುತ್ತದೆ. ಈ ರೋಗದ ಸೋಂಕಿದಾಗ ಎಳೆಯ ಮಾವಿನ ಎಲೆಗಳು ಹಸಿರು ತಿರುಗುವ ಮುನ್ನವೇ ಆಕಾರ ವಿರೂಪವಾಗಿ ಬೆಳೆವಣಿಗೆ ಅಸಮರ್ಪಕವಾಗುತ್ತದೆ. ಎಲೆಗಳ ಮೇಲೆ ಬೂದಿ ಬಣ್ಣದ ಶಿಲಿಂಧ್ರ ಅಗಲಗವಾಗಿ ಹರಡಿ ಇಡೀ ಎಲೆಯನ್ನು ಆವರಿಸುತ್ತದೆ. ಹೂ ಗೊಂಚಲು ಇನ್ನು ಮೊಗ್ಗಾಗಿದ್ದಾಗ ಅಲ್ಲಿಯ ಬೂದಿ ಬಣ್ಣದ ಶಿಲಿಂಧ್ರ ಕಾಣಬಹುದು. ಹೂವು ತೊಟ್ಟಿನ ಮೇಲೆ ಮತ್ತು ಎಳೆ ಕಾಯಿಗಳ ಮೇಲೆ ಸೋಂಕು ತಗುಲಿದಾಗ ಹೂವು ಮತ್ತು ಕಾಯಿಗಳು ಉದುರುತ್ತವೆ. ಈ ರೋಗದ ನಿರ್ವಹಣೆಗಾಗಿ ರೈತರು ಹೂವು ಬಿಡುವ ಮುಂಚೆ ಹಾಗೂ ಕಾಯಿ ಕಟ್ಟಿದ ಕೂಡಲೆ ಶಿಲಿಂದ್ರನಾಶಕಗಳಾದಂತಹ ಕರಗುವ ಗಂಧಕ (3 ಗ್ರಾಂ) ಅಥವಾ ಮೈಕೋಬ್ಯುಟಾನಿಲ್ (1 ಗ್ರಾಂ.) ಅಥವಾ ಟ್ರೈಡೆಮಾರ್ಫ (0.5 ಮೀ.ಲಿ.) ಅಥವಾ ಹೆಕ್ಸಾಕೋನೋಜೋಲ್ (1 ಗ್ರಾಂ.) ನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಯಿಸಿ ಸಿಂಪಡಿಸಬೇಕು.

ಶಲ್ಕ ಕೀಟ: ಸಾಮಾನ್ಯವಾಗಿ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಈ ಕೀಟಗಳು ಮೊಟ್ಟೆಯಿಂದ ಹೊರಬಂದು ಟೊಂಗೆಗಳ ಮೇಲೆ ಗುಂಪು-ಗುಂಪುಗಳಾಗಿ ರಸ ಹೀರುತ್ತಾ ಮೈಮೇಲೆ ಬಿಳಿ ಮೇಣವನ್ನು ಬೆಳೆಸಿಕೊಳ್ಳುತ್ತವೆ. ಈ ಕೀಟಗಳು ಎಲೆ, ಕಾಂಡ ಮತ್ತು ಟೊಂಗೆಗಳ ಮೇಲೆ ವಿಸರ್ಜಿಸಿದ ದ್ರವರೂಪದ ಅಂಟು ಪದಾರ್ಥದ ಮೇಲೆ ಕಪ್ಪು ಶಿಲಿಂದ್ರ ಬೆಳೆದು ಟೊಂಗೆಗಳು ಒಣಗುತ್ತವೆ ಹಾಗೂ ಹೂವು ಕಾಯಿಗಳು ಕೂಡಾ ಉದುರುತ್ತವೆ.  ಇದರ ನಿರ್ವಹಣೆಗಾಗಿ ರೈತರು ಕೀಟಭಾದಿತ ಟೊಂಗೆಗಳನ್ನು ಕತ್ತರಿಸಿ ಕೀಟಗಳ ಸಮೇತ ಸುಡಬೇಕು. ಈ ಕೀಟಗಳ ನಿಯಂತ್ರಣಕ್ಕಾಗಿ ಡೈಕ್ಲೊರೋವಾಸ (2ಮೀ.ಲಿ.) ಅಥವಾ ಡೈಮಿಥೊಯೆಟ (1.7ಮೀ.ಲಿ.) ಅಥವಾ ಫಾಸ್ಪೊಮಿಡಾನ (0.5 ಮೀ.ಲಿ.) ನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಯಿಸಿ ಹತ್ತು ದಿನಗಳ ಅಂತರದಲ್ಲಿ 3 ರಿಂದ 4 ಬಾರಿ ಸಿಂಪರಣೆ ಮಾಡಬೇಕು.

ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ನಗರದ ಐವಾನ್ ಶಾಹಿ ರಸ್ತೆಯಲ್ಲಿರುವ ತೋಟಗಾರಿಕೆ ಇಲಾಖೆ ವಿಷಯ ತಜ್ಞರಾದ (ಹಾರ್ಟಿ ಕ್ಲಿನಿಕ್) ಮಂಜುನಾಥ ಪಾಟೀಲ ಇವರ ಮೊಬೈಲ್ ಸಂಖ್ಯೆ  7259984026ಗೆ ಸಂಪರ್ಕಿಸಲು ಕೋರಲಾಗಿದೆ.