ಸಿರಿಧಾನ್ಯಗಳು ಮನುಷ್ಯ ಮತ್ತು ಪ್ರಾಣಿಗಳ ಸೇವನೆಗೆ ಬಳಸಲಾಗುವ ಏಕದಳ ಧಾನ್ಯಗಳ ಗುಂಪು.
ಆನೇಕ ರೋಗಗಳು ಸಿರಿಧಾನ್ಯಗಳ ಕೃಷಿಯ ಮೇಲೆ ಗಣನೀಯವಾಗಿ ಪರಿಣಾಮ ಬೀರುತ್ತವೆ.
ರೋಗಗಳಿಂದ ಉಂಟಾಗುವ ಹಾನಿಯು ಸಿರಿಧಾನ್ಯಗಳ ಉತ್ಪಾದನೆ ಮತ್ತು ಉತ್ಪಾದಕತೆಯ ಸುಧಾರಣೆಗೆ ಸಂಬಂಧಿಸಿದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.
ಸೋಂಕಿತ ಬೆಳೆಯ ಬೆಳವಣಿಗೆಯ ಹಂತ, ರೋಗದ ಪ್ರಕಾರ, ಅತಿಥೇಯ ಸಸ್ಯದ ಮೇಲೆ ಬೆಳೆಯ ನಷ್ಟಗಳ ತೀವ್ರತೆಯು ಬದಲಾಗುತ್ತವೆ.
ಈ ಕುರಿತು ಡಾ. ಸೈಯದ ಸಮೀನ ಅಂಜುಮ್, ವಿಜ್ಞಾನಿ (ಸಸ್ಯರೋಗ ಶಾಸ್ತ್ರ) ಮತ್ತು ಡಾ. ಎಸ್.ಎನ್. ಚಟ್ಟನ್ನಾವರ್, ನಿವೃತ್ತ ಪ್ರಧಾನ ವಿಜ್ಞಾನಿ
(ಸಸ್ಯರೋಗ ಶಾಸ್ತ್ರ) ಕೃಷಿ ವಿಶ್ವವಿದ್ಯಾಲಯ, ಧಾರವಾಡ (ಅಖಿಲ ಭಾರತ ಸಮನ್ವಯ ಜೋಳ ಅಭಿವೃದ್ಧಿ ಯೋಜನೆ, ಮುಖ್ಯ ಕೃಷಿ ಸಂಶೋಧನಾ ಕೇಂದ್ರ) ಅವರು ವಿವರಿಸಿದ್ದಾರೆ.
ಸಿರಿಧಾನ್ಯಗಳಲ್ಲಿ ದುಂಡಾಣು ಹಾಗೂ ನಂಜು ರೋಗಗಳನ್ನು ಹೋಲಿಸಿದರೆ ಶಿಲೀಂಧ್ರ ರೋಗಗಳು ಹೆಚ್ಚಿನ ಹಾನಿಯನ್ನುಂಟು ಮಾಡುತ್ತವೆ.
ಜೋಳದಲ್ಲಿ ಕಾಳಿನ ಬುಳುಸು ರೋಗ (ಕಾಳಿನ ಬೂಷ್ಟ್ ರೋಗ), ತುಕ್ಕು ರೋಗ, ಕೇದಿಗೆ ರೋಗ, ಎಲೆ ಅಂಗಮಾರಿ ರೋಗ, ಜೋನಿ ರೋಗ ಮತ್ತು ಕಪ್ಪು ಕಾಂಡ ಕೊಳೆ ರೋಗ ಹೆಚ್ಚಾಗಿದ್ದರೆ.
ಸಜ್ಜೆಯಲ್ಲಿ ಕೇದಿಗೆ ರೋಗ, ತುಕ್ಕು ರೋಗ, ಜೋನಿ ರೋಗ, ಬೆಂಕಿ ರೋಗ ಹಾಗೂ ರಾಗಿಯಲ್ಲಿ ಬೆಂಕಿ ರೋಗ ಮತ್ತು ಎಲ್ಲಾ ಸಿರಿಧಾನ್ಯಗಳಲ್ಲಿ ಕಾಡಿಗೆ
ರೋಗವು ಬೆಳೆ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.
ಈ ಧಾನ್ಯಗಳ ಗುಣಮಟ್ಟ ಮತ್ತು ಇಳುವರಿಯನ್ನು ಸುಧಾರಿಸಲು ಅವುಗಳನ್ನು ಸಮರ್ಥಕವಾಗಿ ನಿರ್ವಹಿಸಬೇಕು.
ರೋಗಗಳು
1) ಸಸಿ ಮಡಿ ರೋಗಗಳು:
ಸಸಿ ಕೊಳೆ ರೋಗ, ಬುಡ ಕೊಳೆ ರೋಗ, ಚಿಬ್ಬು ರೋಗ ಮತ್ತು ಸಸಿ ಅಂಗಮಾರಿ ರೋಗಗಳು ಸಸಿ ಹಂತದಲ್ಲಿ ಕಂಡು ಬರುತ್ತದೆ.
ಸಸಿ ಕೊಳೆ ರೋಗ ಮತ್ತು ಚಿಬ್ಬು ರೋಗಗಳು ಜೋಳದ ಸಸಿಮಡಿಯಲ್ಲಿ ಕಂಡು ಬರುತ್ತವೆ.
ಸೋಂಕಿನ ತೀವ್ರತೆಯ ಮೇಲೆ ಸಸಿಗಳು ಕೊಳೆಯುವುದು ಮತ್ತು ಸಾಯುವುದು. ಹುಳಿ ಮಣ್ಣಲ್ಲಿ ಬೆಳೆಯುವ ಸಿರಿಧಾನ್ಯಗಳಲ್ಲಿ ಸಸಿ ಕೊಳೆ ರೋಗವು ಹೆಚ್ಚಾಗಿ ಕಂಡುಬರುತ್ತದೆ.
ಬುಡ ಕೊಳೆ ರೋಗ ಮಣ್ಣಿನಲ್ಲಿನ ಶಿಲೀಂಧ್ರದಿಂದ ಉಂಟಾಗುವುದರಿಂದ ಎಲ್ಲಾ ಸಸಿಗಳಲ್ಲಿ ಕಾಣದೆ ಆಯ್ದ ಸಸಿಗಳಲ್ಲಿ ಕಂಡು ಬರುತ್ತದೆ.
ರೋಗಪೀಡಿತ ಸಸಿಗಳು ಬಾಡಿ ಕುಗ್ಗಿದಂತಾ ಕ್ರಮೇಣ ಬುಡ ಕೊಳೆತು ನಾಶವಾಗುವುದು.
2) ತೆನೆ ರೋಗಗಳು:
ಹಲವು ರೋಗಕಾರಕಗಳು ಹೂವು ಮತ್ತು ತೆನೆಗಳಿಗೆ ಸೊಂಕು ಹರಡಿಸುತ್ತವೆ. ಎಲ್ಲಾ ತೆನೆ ರೋಗಗಳಲ್ಲಿ ಕಾಳಿನ ಬುಳುಸು ರೋಗವು ಬಹಳ ಹಾನಿಕಾರಕವಾದದು.
ಕಾಳಿನ ಬುಳುಸು ರೋಗವು ವಿವಿಧ ರೋಗಕಾರಕಗಳಾದ ಫ್ಯುಸೇರಿಯಂ, ಕರ್ವುಲೇರಿಯಾ, ಆಲ್‍ಟರ್ನೇರಿಯಾ,
ಫೊಮಾ, ಬೈಪೋಲಾರಿಸ್, ಆಸ್ಪರಗಿಲಸ್ ಮತ್ತು ಪೆನಿಸಿಲ್ಲಿಯಮ್ ಶಿಲೀಂಧ್ರಗಳಿಂದ ಉಂಟಾಗುತ್ತದೆ. ಬಳಸುವ ತಳಿ ರೋಗವು ಜೋಳದ ತೆನೆಗಳಲ್ಲಿ ಕಂಡುಬರುತ್ತದೆ.
ಈ ರೋಗದಿಂದಾಗಿ ಶೇ.30 ರಿಂದ 100 ರಷ್ಟು ಇಳುವರಿ ಕುಂಠಿತವಾಗುತ್ತದೆ.
ಈ ರೋಗವು ಮಳೆ ಪ್ರಾರಂಭವಾಗಿ ಹೂ ಹಂತದಿಂದ ಕಾಳು ಮಾಗುವ ಸಂದರ್ಭದಲ್ಲಿ ಹವಾಮಾನದಲ್ಲಿ ನೀರಿನ ಪ್ರಮಾಣ ಹೆಚ್ಚಾದಾಗ ಕಾಣಿಸಿಕೊಳ್ಳುತ್ತದೆ.
ಕಾಳಿನ ಬಣ್ಣ ಕಪ್ಪಾಗುವುದು. ರೋಗಕಾರಕಗಳು ವಿಷಕಾರಿ ವಸ್ತುವನ್ನು ಉತ್ಪತಿಮಾಡುವುದರಿಂದ ಅದು ಮನುಷ್ಯ, ಪ್ರಾಣಿ ಮತ್ತು ಕೋಳಿಗಳಿಗೆ ಹಾನಿಕಾರಕವಾಗಿತ್ತದೆ.
ಇತರ ತೆನೆ ರೋಗಗಳೆಂದರೆ ಜೋನಿ ರೋಗ ಮತ್ತು ಕಾಡಿಗೆ ರೋಗಗಳು.
3) ಜೋನಿ ರೋಗ:
ಜೋನಿರೋಗವು ಸಂಕರಣ ತಳಿಗಳ ಬೀಜ ಉತ್ಪಾದನೆಗೆ ಸೀಮಿತಗೊಳಿಸುವುದಾಗಿದೆ.
ಈ ರೋಗವು ಹೆಚ್ಚಾಗಿ ಜೋಳ ಮತ್ತು ಸಜ್ಜೆಯಲ್ಲಿ ಕಂಡುಬರುತ್ತದೆ. ಇದರ ಮೊದಲ ಲಕ್ಷಣಗಳೆಂದರೆ ದಪ್ಪ, ಜಿಗುಟಾದ ಜೇನು ಹನಿಯ ಹೊರ ಸೂಸುವಿಕೆ.
ಇದು ಗುಲಾಬಿ ಮತ್ತು ಕಂದು ಬಣ್ಣದಿಂದ ಕೂಡಿರುತ್ತದೆ. ರೋಗ ಪೀಡಿತ ಗಿಡಗಳಲ್ಲಿ ತೆನೆಗಳು ಉತ್ಪತಿಯಾಗುವುದಿಲ್ಲ.
ಈ ರೋಗವು ಸಾಮಾನ್ಯವಾಗಿ ಜೋಳ ಮತ್ತು ಸಜ್ಜೆಯಲ್ಲಿ ಕಂಡುಬಂದು ಜೋಳದಲ್ಲಿ ಶೇ10-80 ಮತ್ತು ಸಜ್ಜೆಯಲ್ಲಿ ಶೇ.50-70ರಷ್ಟು ನಷ್ಟವ ನ್ನುಂಟು ಮಾಡುತ್ತದೆ.
ರೋಗಕಾರಕವು ಹೊಲದಲ್ಲಿ ಉಳಿದಿರುವ ಸೋಂಕಿತ ತೆನೆಗಳಲ್ಲಿ ಅಥವಾ ಸಂಸ್ಕರಣೆ ಸಮಯದಲ್ಲಿ ಬೀಜದೊಂದಿಗೆ ಬೆರೆತಿರುವ
ಸ್ಕ್ಲಿರೋಷಿಯಾ ಬೀಜಕಣಗಳ ಮೂಲಕ ಹರಡುತ್ತದೆ.
ಕಾಡಿಗೆ ರೋಗ
ಕಾಡಿಗೆ ರೋಗ ಪೀಡಿತ ಬೆಳೆಯ ಬೆಳವಣಿಗೆ ಕುಂಠಿತವಾಗುವುದು.
ಬೇರಿನ ಮೂಲಕ ರೋಗಾಣು ಬೆಳೆದು ತೆನೆಯಲ್ಲಿ ಕೆಲವು ಕಾಳುಗಳ ಮೇಲೆ ರೋಗ ಕಂಡು ಬಂದು ಕಾಳಾಗಿ ಬೆಳೆಯುವ ಬದಲು ಶಿಲೀಂಧ್ರ ಕೋಶಗಳಾಗಿ ಮಾರ್ಪಾಡಾಗುತ್ತವೆ.
3) ಎಲೆ ರೋಗಗಳು
ಎಲೆ ರೋಗಗಳಲ್ಲಿ ಕೇದಿಗೆ ರೋಗ, ಬೆಂಕಿ ರೋಗ, ತುಕ್ಕು ರೋಗ, ಚಿಬ್ಬು ರೋಗ, ಎಲೆ ಅಂಗಮಾರಿ ರೋಗ ಹಾಗೂ ಎಲೆಚುಕ್ಕೆ ರೋಗಗಳು ಎಲೆಯ ಮೇಲೆ ಹೆಚ್ಚಾಗಿ ಕಂಡುಬರುತ್ತವೆ.
4) ಕೇದಿಗೆ ರೋಗ:
ಕೇದಿಗೆ ರೋಗವು ಜೋಳ ಮತ್ತು ಸಜ್ಜೆಯಲ್ಲಿ ಪ್ರಮುಖವಾಗಿ ಕಂಡುಬರುವುದು. ಇದು ರಾಗಿ ಮತ್ತು ನವಣೆಯಲ್ಲೂ ಸಹ ಕಂಡು ಬರುತ್ತದೆ.
ಕೇದಿಗೆ ರೋಗವು ಪ್ರಮುಖ ರೋಗಗಳಲ್ಲಿ ಒಂದಾಗಿದ್ದು, ಬೆಳೆಗಳ ಇಳುವರಿಯನ್ನು ಕುಂಠಿತಗೊಳಿಸುತ್ತದೆ. ಕೇದಿಗೆ ರೋಗ ಬಂದ ಸಸಿಗಳ ಬೆಳವಣಿಗೆ ಕಡಿಮೆಯಾಗುವುದು.
ರೋಗಪೀಡಿತ ಸಸಿಗಳು ಹಳದಿಯಾಗಿ ತಿರುಗುತ್ತವೆ. ಎಲೆಗಳ ಕೆಳಗೆ ರೋಗ ತರುವ ರೋಗಾಣುಗಳು ಬೆಳೆದು ಬಿಳಿ ಬಣ್ಣಕ್ಕೆ ತಿರುಗುತ್ತವೆ.
ಅದು ಮುಂದುವರಿದಂತೆ ಕಂದು ಬಣ್ಣಕ್ಕೆ ಬರುವವು ನಂತರ ಎಲೆಗಳು ಸೀಳುತ್ತವೆ.
ಸೋಂಕಿನ ಸಮಯ, ಹವಾಮಾನ ಮತ್ತು ಬಳಸುವ ತಳಿಯ ಅನುಗುಣವಾಗಿ ಸಜ್ಜೆಯಲ್ಲಿ ಪ್ರತಿಶತ 100 ಹಾಗೂ ಜೋಳ
ಮತ್ತು ರಾಗಿಯಲ್ಲಿ ಶೇ. 20 ರಷ್ಟು ನಷ್ಟವು ಉಂಟಾಗಿತ್ತದೆ.
ಮಳೆಗಾಲದಲ್ಲಿ ಅತೀ ಹೆಚ್ಚು ತೇವಾಂಶವಿರುವ ಪ್ರದೇಶದಲ್ಲಿ ಬೆಳೆಯು 20-25 ದಿನಗಳ ಸಸಿ ಹಂತದಲ್ಲಿ ರೋಗದ ಚಿನ್ಹೆಗಳು ಕಾಣಿಸಿಕೊಳ್ಳುತ್ತವೆ.
ರೋಗತಗುಲಿದ ಗಿಡಗಳಲ್ಲಿ ತೆನೆಗಳು ಉತ್ಪತಿಯಾಗುವುದಿಲ್ಲ. ರೋಗಪೀಡಿತ ಬೀಜ, ಮಣ್ಣು, ನೀರು ಮತ್ತು ಗಾಳಿಯ ಮೂಲಕ ರೋಗ ಪ್ರಸಾರವಾಗುತ್ತದೆ.
ಸಜ್ಜೆಯಲ್ಲಿ ಕೇದಿಗೆ ರೋಗದ ಲಕ್ಷಣಗಳು “ಹಸಿರು ತೆನೆ” ಯಂತೆ ಕಾಣುತ್ತದೆ. ಅಂದರೆ ತೆನೆಯು ಹೂವಿನಿಂದ ಕೂಡಿರದೇ
ಸಣ್ಣ ಸಣ್ಣ ಹಲವಾರು ಎಲೆಗಳಾಗಿ ಮಾರ್ಪಾಡಾಗುತ್ತವೆ.
5) ಬೆಂಕಿ ರೋಗ:
ಬೆಂಕಿ ರೋಗವು ರಾಗಿ ಮತ್ತು ಸಜ್ಜೆ ಬೆಳೆಯಲ್ಲಿ ಹೆಚ್ಚಿನ ಹಾನಿಯನ್ನುಂಟುಮಾಡುತ್ತದೆ.
ಇದರ ಲಕ್ಷಣಗಳೆಂದರೆ ಎಲೆಯ ಮೇಲೆ ವಜ್ರಾಕಾರದ ಸಣ್ಣ ಚುಕ್ಕೆಗಳು ಕಾಣಿಸಿಕೊಂಡು ಕ್ರಮೇಣ ಚುಕ್ಕೆಗಳು ದೊಡ್ಡದಾಗುತ್ತವೆ.
ಈ ಮಚ್ಚೆಗಳು ಕೆಂಪುಮಿಶ್ರಿತ ಕಂದು ಬಣ್ಣದ್ದಾಗಿದ್ದು ಮಧ್ಯಭಾಗದಲ್ಲಿ ಬೂದು ಬಣ್ಣದಿಂದ ಕೂಡಿರುತ್ತವೆ.
ಹಲವಾರು ಚುಕ್ಕೆಗಳು ಎಲೆಯ ಮೇಲೆ ಕಂಡು ಬಂದು ವಿಸ್ತರಿಸುತ್ತಾ ಒಂದಕ್ಕೊಂದು ಸೇರಿಕೊಂಡು ಎಲೆಗಳು ಒಣಗಿ ಸುಟ್ಟಂತೆ ಕಾಣುತ್ತವೆ.
ತೆನೆಯು ಬರುವಾಗ ಈ ರೋಗದ ಮಚ್ಚೆಗಳು ತೆನೆಯ ಕೆಳಭಾಗದಲ್ಲಿ ಕಾಣಿಸಿಕೊಂಡು ಕ್ರಮೇಣ ಕುತ್ತಿಗೆಯ ಭಾಗವನ್ನೆಲ್ಲಾ ಆವರಿಸಿ,
ಆ ಭಾಗವು ಕೊಳೆತು ಕಪ್ಪು ಬಣ್ಣಕ್ಕೆ ತಿರಗುತ್ತದೆ.
ರೋಗವು ತೆನೆಯಲ್ಲಿ ಇಲುಕುಗಳ ಮೇಲೆ ಸಾಮಾನ್ಯವಾಗಿ ಕಂಡು ಬಂದು ಪೂರ್ಣ ಇಲುಕು ಅಥವಾ ಕೆಲವು ಕಾಳು ಕಟ್ಟದೆ ಜೊಳ್ಳಾಗುತ್ತದೆ.
ಈ ರೋಗದ ಶಿಲೀಂಧ್ರವು ಗಾಳಿಯಿಂದ ಹರಡುತ್ತದೆ ಅಥವಾ ಬೀಜವೂ ಮೂಲವಾಗಿರುವುದು.
ಬೆಳೆಯು ಬೆಳೆದಂತೆ ರೋಗವು ಹರಡುತ್ತದೆ. ಈ ರೋಗವು ರಾಗಿ ಬೆಳೆಯಲ್ಲಿ ಪ್ರತಿ ವರ್ಷವು ಕಂಡು ಬಂದು ಶೇ. 28-36 ರಷ್ಟು ಇಳುವರಿ
ಕುಂಠಿತ ಮಾಡುವ ಸಾಧ್ಯತೆ ಇದೆ. ಸ್ಥಳೀಯ ಪ್ರದೇಶಗಳಲ್ಲಿ ಶೇ. 90 ರಷ್ಟು ಇಳುವರಿ ಕಡಿಮೆಗೊಳ್ಳುತ್ತದೆ.
ರಾಗಿಯಲ್ಲಿ ಎಲೆ, ಕುತ್ತಿಗೆ ಮತ್ತು ತೆನೆಯ ಬೆಂಕಿ ರೋಗಗಳು
1.) ತುಕ್ಕು ರೋಗ :
ಹೆಚ್ಚಿನ ಸಿರಿಧಾನ್ಯಗಳು ತುಕ್ಕು ರೋಗಕ್ಕೆ ತುತ್ತಾಗುತ್ತವೆ. ಸಾಮಾನ್ಯವಾಗಿ ಬೆಳೆ ಬೆಳೆಯುವ ನಂತರದ ಹಂತದಲ್ಲಿ ಈ ರೋಗವು ಕಂಡುಬರುತ್ತದೆ.
ಕೆಲವು ಬಾರಿ ಬೆಳೆಯ ಆರಂಭಿಕ ಹಂತಗಳಲ್ಲೂ ಸಹ ಈ ರೋಗವು ಕಂಡುಬಂದು ಇಳುವರಿಯನ್ನು ಕುಂಠಿತಗೊಳಿಸುತ್ತದೆ.
ತುಕ್ಕು ರೋಗದಲ್ಲಿ ಮೊದಲು ಕೆಳಗಿನ ಎಲೆಗಳ ಮೇಲೆ ರೋಗ ತರುವ ರೋಗಾಣುವಿನ ಕಂದು ಅಥವಾ ಕೆಂಪು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುವವು
ನಂತರ ಮೇಲಿನ ಎಲೆಗಳಿಗೆ ಹರಡುತ್ತವೆ. ಕ್ರಮೇಣ ಚುಕ್ಕೆಗಳ ಸಂಖ್ಯೆ ಹೆಚ್ಚಾಗಿ ಇಡೀ ಎಲೆಯನ್ನೆಲ್ಲಾ ಆವರಿಸಿಕೊಂಡು ಎಲೆ ಒಣಗುತ್ತದೆ.
ತದನಂತರ ಕೆಂಪು ಚುಕ್ಕೆಗಳು ಕಪ್ಪು ಬಣ್ಣಕ್ಕೆ ತಿರುಗಿ ಎಲೆ ಉದುರುವುದಕ್ಕೆ ಕಾರಣವಾಗುತ್ತದೆ.
ರೋಗವು ಗಾಳಿಯ ಮೂಲಕ ಯುರಿಡಿಯಾ ಎಂಬ ಬೀಜಕಣಗಳಿಂದ ಪ್ರಸಾರವಾಗುತ್ತದೆ.
ಜೋಳದ ಎಲೆ ತುಕ್ಕು ರೋಗ
- ಚಿಬ್ಬು ರೋಗ:
ಚಿಬ್ಬು ರೋಗವು ಎಲ್ಲಾ ಸಿರಿಧಾನ್ಯಗಳಿಗಿಂತ ಜೋಳದ ಬೆಳೆಯಲ್ಲಿ ಹೆಚ್ಚಾಗಿ ಕಂಡು ಬರುವುದು.
ರೋಗ ಲಕ್ಷಣಗಳೆಂದರೆ, ಸಸಿ ಕೊಳೆ ರೋಗ, ಎಲೆ ಅಂಗಮಾರಿ ರೋಗ, ಕಾಂಡ ಕೊಳೆ ರೋಗ ಮತ್ತು ತೆನೆ ಅಂಗಮಾರಿ ರೋಗ.
ಚುಕ್ಕೆಗಳು ಎಲೆಯ ಮೇಲೆ ಚಿಕ್ಕದಾದ ಅಂಡಾಕಾರದಂತೆ ಮಧ್ಯಭಾಗದಲ್ಲಿ ಒಣ ಹುಲ್ಲಿನ ಬಣ್ಣ ಮತ್ತು ವಿಶಾಲವಾದ ಅಂಚೆಗಳೊಂದಿಗೆ ತುಂಬಿರುತ್ತದೆ.
ಕ್ರಮೇಣ ಚುಕ್ಕೆಗಳು ಒಂದಕ್ಕೊಂದು ಕೂಡಿಕೊಂಡು ಎಲೆಯು ಒಣಗುತ್ತದೆ. ತೀವ್ರ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಶೇ. 50 ರಷ್ಟು ಇಳುವರಿ ಕುಂಠಿತಗೊಳಿಸುತ್ತದೆ.
3).ಎಲೆ ಅಂಗಮಾರಿ ರೋಗ:
ಈ ರೋಗವು ಇತ್ತೀಚಿಗೆ ಜೋಳದಲ್ಲಿ ಗಮನಾರ್ಹ ನಷ್ಟವನ್ನು ಉಂಟುಮಾಡುತ್ತಿದೆ. ಬಿತ್ತಿದ 25-30 ದಿವಸಗಳ ಎಳೆಯ ಸಸಿಗಳಿಗೆ ತಗುಲಿದಾಗ ಅವು ಒಣಗಿ ಸಾಯಲು ಪ್ರಾರಂಭಿಸುತ್ತವೆ.
ಬಲಿತ ಸಸ್ಯಗಳಿಗೆ ರೋಗ ಬಂದಾಗ ಎಲೆಗಳ ಮೇಲೆ ಅಂಡಾಕಾರದ ಬೂದು ಮಿಶ್ರಿತ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ.
ಇಂತಹ ಹಲವಾರು ಚುಕ್ಕೆಗಳು ಒಂದರೊಡನೆ ಕೂಡಿ ಎಲೆಯನ್ನೆಲ್ಲಾ ಆವರಿಸಿ ಎಲೆ ಸುಟ್ಟಂತೆ ಕಾಣುತ್ತದೆ.
ಈ ಶಿಲೀಂಧ್ರ ರೋಗದ ಸೋಂಕು ಬಿತ್ತನೆ ಬೀಜ, ಹೊಲದಲ್ಲಿ ಇರುವ ರೋಗ ಪೀಡಿತ ಎಲೆಗಳು ಮತ್ತು ಕೋಲಿಗಳಿಂದ ಗಾಳಿಯ ಮೂಲಕ ಪ್ರಸಾರವಾಗುತ್ತದೆ.
ಜೋಳದಲ್ಲಿ ಚಿಬ್ಬು ರೋಗ ಜೋಳದ ಎಲೆ ಅಂಗಮಾರಿ ರೋಗದ ಲಕ್ಷಣಗಳು
ಸಿರಿಧಾನ್ಯಗಳು ವಿವಿಧ ರೀತಿಯ ಎಲೆ ಚುಕ್ಕೆಗಳಿಂದ ಸೊಂಕಿಗೆ ಒಳಗಾಗುತ್ತವೆ.
ಜೋಳದಲ್ಲಿ ಕಂದು ಎಲೆ ಚುಕ್ಕೆ, ಜೋನೇಟ್ ಎಲೆ ಚುಕ್ಕೆ ಮತ್ತು ಉರುಟು ಎಲೆ ಚುಕ್ಕೆ ರೋಗ; ಸಜ್ಜೆಯಲ್ಲಿ ಸರ್ಕೋಸ್ಪರ ಎಲೆ ಚುಕ್ಕೆ ರೋಗ ,
ಕರ್ವುಲೇರಿಯಾ ಎಲೆ ಚುಕ್ಕೆ ರೋಗ ,ಡಾಕ್ಟುಲಿಯೋಫೋರ ಎಲೆ ಚುಕ್ಕೆ ರೋಗ ಮತ್ತು ಫಿಲ್ಲಾಕೋರ ಎಲೆ ಚುಕ್ಕೆ ರೋಗ
ಹಾಗೂ ವಿವಿಧ ಸಿರಿಧಾನ್ಯಗಳಲ್ಲಿ ಹೆಲ್ಮಿಂಥೋಸ್ಪೋರಿಯಂ ಎಲೆ ಚುಕ್ಕೆ ರೋಗ ಮತ್ತು ಸರ್ಕೋಸ್ಪರ ಎಲೆ ಚುಕ್ಕೆ ರೋಗಗಳು ಕಾಣಿಸಿಕೊಳ್ಳುತ್ತವೆ.
ಈ ಎಲ್ಲಾ ರೋಗಗಳು ಕಡಿಮೆ ಪ್ರಮಾಣದಲ್ಲಿದ್ದು ಹೆಚ್ಚಿನ ಹಾನಿಯನ್ನುಂಟು ಮಾಡುವುದಿಲ್ಲ.
ಕಂದು ಎಲೆ ಚುಕ್ಕೆ ರೋಗ ತಗುಲಿದ ಸಸಿಗಳಲ್ಲಿ ಮೊದಲು ಎಲೆಯ ಮೇಲೆ ಸಣ್ಣ ಅಂಡಾಕಾರದ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ.
ರೋಗ ತೀವ್ರವಾದಾಗ ರೋಗದ ಸೋಂಕು ಕಾಂಡ ಮತ್ತು ತೆನೆಯ ಮೇಲೆ ಕಾಣಿಸಿಕೊಂಡು ಬೆಳೆಯು ಅಕಾಲದಲ್ಲಿ ಒಣಗುತ್ತದೆ.
- ಬೀಜೋಪಚಾರ:
ಜೈವಿಕ ಶಲೀಂಧ್ರನಾಶಕಗಳಾದ ರಂಜಕ ಕರಗಿಸುವ ಅಣುಜೀವಿ (ಸುಡೋಮೊನಾಸ ಪ್ಲುರೆಸೆನ್ಸ್) ಅಥವಾ ಟ್ರೈಕೋಡರ್ಮಾ ಜೈವಿಕ ಶೀಲಿಂದ್ರನಾಶಕಗಳಿಂದ
(10 ಗ್ರಾಂ ಪ್ರತಿ ಕಿ.ಗ್ರಾಂ ಬೀಜಕ್ಕೆ) ಬೀಜೋಪಚಾರವನ್ನು ಮಾಡುವುದರಿಂದ ಮಣ್ಣು ಮತ್ತು ಬೀಜದಿಂದ ಉಂಟಾಗುವ ರೋಗಗಳನ್ನು
(ಕಾಡಿಗೆ ರೋಗ, ಕಪ್ಪು ಕಾಂಡ ಕೊಳೆ ರೋಗ, ಬುಡ ಮತ್ತು ಸಸಿ ಕೊಳೆ ರೋಗಗಳು ಇತ್ಯಾದಿ) ಸ್ವಲ್ಪ ಮಟ್ಟಿಗೆ ತಡೆಗಟ್ಟಬಹುದು.
- ಬೆಳೆ ನಿರ್ವಹಣೆ:
ವಿಶಾಲ ಅಂತರ ಮತ್ತು ಹೂ ಬಿಡುವ ಸಮಯದಲ್ಲಿ ನೀರಾವರಿಯನ್ನು ತಡೆಯುವುದರಿಂದ ಹಿಂಗಾರಿ ಜೋಳದಲ್ಲಿ ಕಪ್ಪು ಕಾಂಡ ಕೊಳೆ
ರೋಗವನ್ನು ಕಡಿಮೆಗೊಳಿಸಬಹುದು. ಬೆಳೆ ಹೂವಾಡುವ ಹಂತದಿಂದ ಕಾಳು ಕಟ್ಟುವ ಹಂತದವರೆಗೆ ಮಣ್ಣಿನಲ್ಲಿ ತೇವಾಂಶವಿರುವಂತೆ ನೋಡಿಕೊಳ್ಳಬೇಕು.
- ರೋಗ ನಿರೋಧಕ ತಳಿಗಳ ಬಳಕೆ:
ಸಿರಿಧಾನ್ಯಗಳು ಹೆಚ್ಚಾಗಿ ಕಡಿಮೆ ಖರ್ಚಿನಲ್ಲಿ ಬೆಳೆಯುವುದರಿಂದ ರೋಗ ನಿರೋಧಕ ತಳಿಗಳ ಬಳಕೆಯು ಒಂದು ಅತ್ಯುತ್ತಮ ಆಯ್ಕೆಯಾಗಿದೆ.
ತಳಿಗಳ ವಿವರ
ಬೆಳೆ |
ತಳಿಗಳು |
ವಲಯ ಮತ್ತು ಸನ್ನಿವೇಶ |
ಅವಧಿ (ದಿನಗಳಲ್ಲಿ)/ವಿಶೇಷತೆ |
ಮುಂಗಾರು ಜೋಳ- ಸಂಕರಣ ತಳಿ |
ಸಿಎಸ್‍ಎಚ್-30 |
ಜಿ.ಪಿ.ಯು- 48 |
105-110 / ಬೇಗ ಮಾಗುವ ಮತ್ತು ಕಾಳಿನ ಬೂಷ್ಟ್ ರೋಗ ತಡೆದುಕೊಳ್ಳುವ ಶಕ್ತಿಯನ್ನು ಪಡೆದಿದೆ. |
ಮುಂಗಾರು ಜೋಳ- ಸುಧಾರಿತ ತಳಿ |
ಡಿಎಸ್‍ವಿ-6 |
1,2,3 ಮತ್ತು 8 |
120-125/ ದ್ವಿ ಉಪಯೋಗಿ ತಳಿಯಾಗಿದ್ದು ಉತ್ತಮ ಗುಣಮಟ್ಟದ ಕಾಳು ಮತ್ತು ಮೇವನ್ನು ಕೊಡುತ್ತದೆ. ಮಳೆಗೆ ಸಿಕ್ಕರೂ ಕಾಳು ಕಪ್ಪಾಗುವುದಿಲ್ಲ. |
ಹಿಂಗಾರಿ ಜೋಳ- ಸಂಕರಣ ತಳಿ |
ಡಿಎಸ್‍ಎಚ್-4 |
1,2,3 ಮತ್ತು 8 |
115-120/ ಬರ ನಿರೋಧಕ ಹಾಗೂ ಬೇಗ ಮಾಗುವ ತಳಿಯಾಗಿದ್ದು, ಇದ್ದಲು ಕಾಂಡ ಕೊಳೆ ನಿರೋಧಕ ಶಕ್ತಿ ಹೊಂದಿದೆ. |
ಹಿಂಗಾರಿ ಜೋಳ - ಸುಧಾರಿತ ತಳಿ |
ಎಸ್.ಪಿ.ವಿ-2217 |
8 |
120-125 ಇದ್ದಲು ಕಾಂಡ ಕೂಳೆ ರೋಗ ತಡೆದುಕೊಳ್ಳುವ ಶಕ್ತಿ ಹೊಂದಿರುತ್ತದೆ. |
ನವಣೆ |
ಎಸ್‍ಐಎ-2644 |
2 |
90-95/ ದಪ್ಪಕಾಳು, ತುಕ್ಕು ರೋಗಕ್ಕೆ ಮಧ್ಯಮ ನಿರೋಧಕತೆ |
ರಾಗಿ |
ಜಿ.ಪಿ.ಯು- 45 |
- |
ಬೆಂಕಿ ರೋಗಕ್ಕೆ ನಿರೋಧಕತೆ |
ರಾಗಿ |
ಜಿ.ಪಿ.ಯು- 48 |
- |
ಬೆಂಕಿ ರೋಗಕ್ಕೆ ನಿರೋಧಕತೆ |
- ಸಸ್ಯ ಭಾಗಗಳನ್ನು ತೆಗೆಯುವುದು:
ಸೋಂಕಿತ ಸಸಿ ಮತ್ತು ಸಸ್ಯ ಭಾಗಗಳನ್ನು ತೆಗೆಯುವುದರಿಂದ, ಜೋಳ ಮತ್ತು ಸಜ್ಜೆಯಲ್ಲಿ ಬರುವ ಕೇದಿಗೆ ರೋಗ, ಎಲ್ಲಾ ಧಾನ್ಯಗಳಲ್ಲಿ ಕಂಡು ಬರುವ
ಕಾಡಿಗೆ ರೋಗಗಳು ಮತ್ತು ಎಲೆ ರೋಗಗಳಾದ ಚಿಬ್ಬು ರೋಗ, ಎಲೆ ಅಂಗಮಾರಿ ರೋಗ ಮತ್ತು ಎಲೆ ಚುಕ್ಕೆ ರೋಗವನ್ನು ಹತೋಟಿಮಾಡಿಕೊಳ್ಳಬಹುದು.
ಕಾಡಿಗೆ ರೋಗದ ತೆನೆಗಳನ್ನು ಬಟ್ಟೆ ಚೀಲದಲ್ಲಿ ಆಯ್ದು ಕುದಿಯುವ ನೀರಿನಲ್ಲಿ ಅದ್ದಿ ರೋಗಕಾರಕವನ್ನು ಕೊಲ್ಲುವುದರಿಂದ ರೋಗದ
ಸಂಭವವನ್ನು ಕಡಿಮೆಗೊಳಿಸಬಹುದು.
10: ರೋಗನಾಶಕಗಳ ಬಳಕೆ:
ಬೆಳೆದು ನಿಂತಿರುವ ಬೆಳೆಗಳಲ್ಲಿ ರಾಸಾಯನಿಕ ಬಳಕೆಯಿಂದ ರೋಗವನ್ನು ವೇಗವಾಗಿ ನಿರ್ವಹಿಸಬಹದು.
ಅದಾಗ್ಯೂ ರೋಗನಾಶಕಗಳು ಕೊನೆಯ ಆಯ್ಕೆಯಾಗಿರಬೇಕು.
ಅ) ಕಾಡಿಗೆ ರೋಗ ನಿರ್ವಹಣೆ:
ಒಂದು ಕಿ. ಗ್ರಾಂ. ಬೀಜಕ್ಕೆ 3 ಗ್ರಾಂ (ಕಾರ್ಬಾಕ್ಸಿನ್ 37.5% + ಥೈರಾಮ 37.5% ಡಬ್ಲೂ. ಪಿ) ಶೀಲಿಂಧ್ರನಾಶಕದಿಂದ ಬೀಜೊಪಚಾರಮಾಡಿ ಬಿತ್ತಬೇಕು
ಅಥವಾ ಒಂದು ಕಿ. ಗ್ರಾಂ ಬೀಜಕ್ಕೆ 2 ಗ್ರಾಂ ಪ್ರಮಾಣದಲ್ಲಿ ಕಾರ್ ನ್‍ಡೈಜಿಮ್ 50 ಡಬ್ಲೂ.ಪಿ.
ಅಥವಾ ಥೈರಾಮ್ 75 ಡಬ್ಲೂ.ಪಿ. ಶಿಲೀಂಧ್ರನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು.
ಆ) ಹಸಿರು ತೆನೆ ರೋಗ/ ಕೇದಿಗೆ ರೋಗ ನಿರ್ವಹಣೆ:
ಒಂದು ಕಿ. ಗ್ರಾಂ. ಬೀಜಕ್ಕೆ 2 ಗ್ರಾಂ ಮೆಟಲಾಕ್ಸಿಲ್ (4%) +. ಮ್ಯಾಂಕೊಜೆಬ್ (68 %) 72 ಡಬ್ಲೂ.ಪಿ ಶಿಲೀಂಧ್ರನಾಶಕದಿಂದ ಬೀಜೋಪಚಾರ ಮಾಡಿ ಬಿತ್ತಬೇಕು.
ಇ) ಕಂದು ಚುಕ್ಕೆ ರೋಗ ನಿರ್ವಹಣೆ :
ಒಂದು ಕಿ. ಗ್ರಾಂ ಬೀಜಕ್ಕೆ 2 ಗ್ರಾಂ ಮ್ಯಾಂಕೋಜೆಬ್ 75 ಡಬ್ಲೂ.ಪಿ. ಶಿಲೀಂಧ್ರನಾಶಕವನ್ನು ಬೆರೆಸಿ ಬಿತ್ತನೆ ಮಾಡಬೇಕು.
ಬೆಳೆಯು ಹೂ ಬಿಡುವ ಹಂತದಲ್ಲಿ ರೋಗವು ಕಾಣಿಸಿಕೊಂಡರೆ ಮ್ಯಾಂಕೋಜೆಬ್ 75 ಡಬ್ಲೂ.ಪಿ. ಶಿಲೀಂಧ್ರನಾಶಕವನ್ನು
1 ಲೀ. ನೀರಿಗೆ 2 ಗ್ರಾಂ ಪ್ರಮಾಣದಲ್ಲಿ ಬೆರೆಸಿ ಸಿಂಪಡಿಸಬೇಕು.
ಈ) ಬೆಂಕಿ ರೋಗ ನಿರ್ವಹಣೆ:
ಶೇ. 50-75 ಭಾಗದಷ್ಟು ತೆನೆಯು ಹೊರಬಂದ ನಂತರ ಶಿಲೀಂಧ್ರನಾಶಕಗಳಾದ ಮ್ಯಾಂಕೊಜೆಬ್ 75 ಡಬ್ಲೂ.ಪಿ 2.0 ಗ್ರಾಂ ಅಥವಾ
ಕಾರ್ಬನ್‍ಡೈಜಿಮ್ 50 ಡಬ್ಲೂ.ಪಿ 0.5 ಗ್ರಾಂ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಈ ರೋಗದ ಬೆಳವಣಿಗೆಗೆ ಅನುಕೂಲಕರವಾದ ವಾತಾವರಣವು ಕಂಡುಬಂದಲ್ಲಿ ಇನ್ನೊಂದು ಬಾರಿ ಅಂದರೆ ಮೊದಲನೆ ಸಿಂಪರಣೆಯ
12 ದಿನಗಳ ನಂತರ ಸಿಂಪಡಿಸಬೇಕು.
ಸಸಿಮಡಿಯಲ್ಲಿ ಸಣ್ಣ ಸಸಿಗಳ ಮೇಲೆ ರೋಗ ಕಾಣಿಸಿಕೊಂಡಲ್ಲಿ ನಾಟಿ ಮಾಡುವುದಕ್ಕೆ ಮೊದಲು ಸಸಿಗಳಿಗೆ
ಒಂದು ಸಲ ಮೇಲೆ ತಿಳಿಸಿದ ಕ್ರಮಗಳನ್ನು ಅನುಸರಿಸಬೇಕು.
ಉ) ತುಕ್ಕು ರೋಗ ನಿರ್ವಹಣೆ:
ಪ್ರತಿ ಲೀಟರ್ ನೀರಿನಲ್ಲಿ 2 ಗ್ರಾಂ. ಮ್ಯಾಂಕೋಜೆಬ್ 75 ಡಬ್ಲೂ.ಪಿ. ಬೆರೆಸಿ ಸಿಂಪಡಿಸಬೇಕು.
ಈ ಸಿಂಪಡಣೆಯನ್ನು 10 ದಿನಗಳ ನಂತರ ಪುನಃ ಕೊಡಬೇಕು ಅಥವಾ ಬಿತ್ತನೆಯಾದ 35-50 ದಿವಸಗಳಲ್ಲಿ 1 ಮಿ. ಲೀ.
ಹೆಕ್ಸಾಕೋನಾಜೋಲ್ 5 ಇ. ಸಿ. ಅಥವಾ 1 ಮಿ. ಲೀ. ಸಂಯುಕ್ತ ಶಿಲೀಂಧ್ರನಾಶಕವಾದ
(ಅಜೋಕ್ಸಿಸ್ಟ್ರೋಬಿನ್ 18.2% + ಡೈಫೈನ್‍ಕೊನಾಜೋಲ್ 11.4%- ಅಮಿಸ್ಟರ್ ಟಾಪ್) ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಊ) ಕಪ್ಪು ಕಾಂಡ ಕೊಳೆ ರೋಗ ನಿರ್ವಹಣೆ:
ಪ್ರತಿ ಕಿ.ಗ್ರಾಂ ಬೀಜಕ್ಕೆ 5 ಮಿ.ಲೀ. ಥೈರಾಮ್ 40 ಎಫ್.ಎಸ್. ನಿಂದ ಬೀಜೋಪಚಾರ ಮಾಡುವುದು ಸೂಕ್ತ.
ಸಮತೋಲನ ರಸಗೊಬ್ಬರ ಬಳಸಬೇಕು. ಅದರಲ್ಲೂ ಮುಖ್ಯವಾಗಿ ಮೂಲ ಗೊಬ್ಬರವಾಗಿ ಪೋಟ್ಯಾಷ್ ಬಳಸಬೇಕು.