ಎರೆಹುಳು ಗೊಬ್ಬರ ಉಪಯೋಗಿಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುವುದಲ್ಲದೆ ಒಂದು ಎಕರೆ ಜಾಗದಲ್ಲಿ ವರ್ಷಕ್ಕೆ 4 ಲಕ್ಷ ರುಪಾಯಿಗಿಂತ ಹೆಚ್ಚು ಆದಾಯ ಸಂಪಾದಿಸಬಹುದು. ಎರೆಹುಳುಗಳನ್ನು ರೈತನ ಮಿತ್ರ, ರೈತ ಬಂಧು ಎಂದು ಕರೆಯಲಾಗುತ್ತದೆ. ರೈತನಂತೆ ಭೂಮಿಯಲ್ಲಿ ನಿರಂತರವಾಗಿ ಕೆಲಸ ಮಾಡುವ ಹುಳುಗಳು ನೈಸರ್ಗಿವಾಗಿ ಪೋಷಕಾಂಶ ಯುಕ್ತ ಗೊಬ್ಬರವನ್ನು ರೈತರಿಗೆ ಒದಗಿಸುತ್ತವೆ. ಎರೆಹುಳು ಗೊಬ್ಬರ ರೈತರಿಗೆ ಸಹಾಯಕವಾಗಿದೆ. ಎಲ್ಲಾ ಸಾವಯವ ಬೆಳೆಗಳ ಕಸಕಡ್ಡಿ ಮಿಗಿಲು ಪದಾರ್ಥಗಳನ್ನು ಬಳಸಿಕೊಂಡು ಎರೆಹುಳದ ಸಹಾಯದಿಂದ ಒಳ್ಳೆಯ ಗೊಬ್ಬರ ತಯಾರಿಸಬಹುದು. ಮಣ್ಣಿನ ಫಲವತ್ತತೆ ಹೆಚ್ಚಿಸಲು ಈ ಗೊಬ್ಬರ ಉಪಯುಕ್ತವಾಗಿದೆ.
ಪ್ರತಿಯೊಬ್ಬ ರೈತ ಸಹಜ ಮತ್ತು ಸೂಸ್ಥಿರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವದು ಇಂದಿನ ಅವಶ್ಯಕತೆಯಾಗಿರುತ್ತದೆ. ಹಾಗೂ ಈ ಮೇಲ್ಕಂಡ ಎಲ್ಲಾ ಸಮಸ್ಯೆಗಳಿಗೆ ಚಿಕ್ಕ ಉತ್ತರ “ಎರೆಹುಳು ಕೃಷಿ”. ಹಲವಾರು ಸಂಶೋಧನೆಗಳಿಂದ ಗೊತ್ತುಪಡಿಸಿದ ಸಂಗತಿ ಏನೆಂದರೆ, ಸಾಗುವಳಿಗೆ ಯೋಗ್ಯವಾದ ಮಣ್ಣಿನ 3 ಸೆಂ.ಮೀ. ಮೇಲ್ಪದರು ತಯಾರಾಗಲು ಒಂದು ಸಾವಿರ ವರ್ಷಗಳು ಬೇಕು. ಆದರೆ ಈ ಪರೋಪಕಾರಿ ಜೈವಿಕ ನೇಗಿಲ (ಎರೆಹುಳು) ದಿಂದ ಕಲ್ಲು ಉಸುಕಿನ ಹೊಲವನ್ನು ಹುಲ್ಲು ಗದ್ದೆಯಾಗಿ ಪರಿವರ್ತಿಸಲು ಕೇವಲ ಹತ್ತು ವರ್ಷಗಳು ಸಾಕು.
ಎರೆಹುಳು ಗೊಬ್ಬರ ಬಳಕೆಯ ಉಪಯೋಗ:
ಅತಿಮುಖ್ಯವಾದ ಪೋಷಕಾಂಶಗಳನ್ನು ಹೊಂದಿರುತ್ತದೆ (1-1.5% ಸಾರಜನಕ, 0.8% ರಂಜಕ, 0.7% ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿರುತ್ತದೆ). ಬೆಳೆಯ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚಿನ ಇಳುವರಿಯನ್ನು ಕೊಡುತ್ತದೆ.
ಹಣ್ಣು ಹಾಗೂ ತರಕಾರಿ ಮತ್ತು ಹೂವಿನ ಬೆಳೆಯ ಯೋಗ್ಯತೆಯನ್ನು ಹೆಚ್ಚು ಮಾಡಲು ಸಹಾಯ ಮಾಡುತ್ತದೆ. ಮಣ್ಣಿನಲ್ಲಿ ಸಾವಯವ ಅಂಶವನ್ನು ಹೆಚ್ಚಿಸುತ್ತದೆ. ಮಣ್ಣಿನಲ್ಲಿ ತೇವಾಂಶವನ್ನು ಹಿಡಿದುಕೊಳ್ಳುವ ಸಾಮರ್ಥ್ಯ ಹೆಚ್ಚಿಸುತ್ತದೆ. ಕಡಿಮೆ ಖರ್ಚಿನಲ್ಲಿ ಸುಲಭ ರೀತಿಯಲ್ಲಿ ತಯಾರಿಸಲಾಗುವುದು. ಮಣ್ಣನ್ನು ಸವಳು ಮತ್ತು ಆಮ್ಲ ಗುಣಧರ್ಮಕ್ಕೆ ಬದಲಾವಣೆಯಾಗುವುದನ್ನು ಕಡಿಮೆ ಮಾಡುತ್ತದೆ. ಮಣ್ಣಿನ ಸವಕಳಿಯನ್ನು ಕಡಿಮೆ ಮಾಡುತ್ತದೆ. ಕೀಟಗಳ ಹಾವಳಿಯಿಂದ ರಕ್ಷಣೆ ಒದಗಿಸುತ್ತದೆ.
ಎರೆಹುಳುವಿನ ಚಟುವಟಿಕೆಗಳು:
ಎರೆಹುಳುವಿನ ಮುಖ್ಯ ವಟುವಟಿಕೆಗಳು ಅಂದರೆ ಭೂಮಿಯನ್ನು ಉಳುಮೆ ಮಾಡುವುದು ಮತ್ತು ಹಿಕ್ಕೆಗಳನ್ನು ಹಾಕುವುದು. ಭೂಮಿಯನ್ನು ಸಾಮಾನ್ಯ ಉಳುಮೆ ಮಾಡುವುದರಿಂದ 30 ಸೆಂ.ಮೀ. ವರೆಗೆ ಮಾಡಬಹುದು. ಆದರೆ ಎರೆಹುಳುಗಳು 3 ಮೀಟರ್ ವರೆಗೆ ಉಳುಮೆಯನ್ನು ಬೆಳೆಗೆ ಯಾವುದೇ ದುಷ್ಪರಿಣಾಮವಿಲ್ಲದೆ ಮಾಡುತ್ತವೆ. ಬೆಳೆಗಳ ಉಳುವಿಕೆಯನ್ನು ಸಾವಯವ ವಸ್ತುಗಳನ್ನು ಮತ್ತು ಹೆಂಡಿಯನ್ನು ಮಣ್ಣಿನಲ್ಲಿ ಬೆರೆಸುತ್ತವೆ. ಆದ್ದರಿಂದ ಭುಮಿಯಲ್ಲಿ ವಿವಿಧ ಪದರಗಳಲ್ಲಿ ಪೋಷಕಾಂಶಗಳನ್ನು ಮಿಶ್ರಣ ಮಾಡುವುದಲ್ಲದೆ ಪೋಷಕಾಂಶಗಳನ್ನು ಬೆಳೆಗಳ ಬೇರಿನ ಹತ್ತಿರ ತಂದು ಅವುಗಳನ್ನು ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ. ಎರೆಹುಳುಗಳು ಭೂಮಿಯನ್ನು ಉಳುಮೆ ಮಾಡುತ್ತಾ ಹೋಗುವಾಗ ಸಾವಯವ ಪದಾರ್ಥಗಳನ್ನು ತಿನ್ನುತ್ತಾ ಸಾಗುವ ಸಮಯದಲ್ಲಿ ಅದರ ಭೂಮಿಯಲ್ಲಿ ಅಲ್ಪ ಪ್ರಮಾಣದ ಆದ್ರತೆ ಮತ್ತು ಯೂರಿಯಾವನ್ನು ಅದರ ಮೂತ್ರದ ಮೂಲಕ ಸೇರಿಸುತ್ತಾ ಹೊಗುತ್ತದೆ. ಎರೆಹುಳು ಪೊಷಕಾಂಶಗಳನ್ನು ವಿಭಜಿಸಿ ಭೂಮಿಗೆ ಒದಗಿಸುವ ಮುಖಾಂತರ ಬೇರುಗಳ ಬೆಳವಣಿಗೆ ಚೆನ್ನಾಗಿ ಆಗುತ್ತದೆ. ಎರೆಹುಳು ಭೂಮಿಯಲ್ಲಿ ರಂಧ್ರಗಳನ್ನು ಮಾಡುವುದರಿಂದ ಭೂಮಿಯಲ್ಲಿ ಗಾಳಿಯಾಡಿ ಹೆಚ್ಚಿನ ಆಮ್ಲಜನಕವನ್ನು ಒದಗಿಸುವುದರಿಂದ ಅನೇಕ ಸೂಕ್ಷ್ಮಾಣು ಜೀವಿಗಳ ವೃದ್ಧಿಗೆ ಅನುಕೂವಾಗುತ್ತದೆ. ಎರೆಹುಳುಗಳ ಹೊಟ್ಟೆಯಲ್ಲಿ ಇರುವ ಉಪಯುಕ್ತ ಸೂಕ್ಷ್ಮಾಣುಗಳು ಹಿಕ್ಕೆಯ ಜೊತೆಗೆ ಹೊರ ಬರುತ್ತವೆ.
ಎರೆಹುಳುಗಳನ್ನು ಕೃಷಿಯಲ್ಲಿ ಬಳಸುವ ವಿಧಾನಗಳು :
1.ಎರೆಗೊಬ್ಬರದ ನೇರ ಬಳಕೆ: ಎರೆಹುಳುಗಳಿಂದ ತಯಾರಿಸಿದ ಗೊಬ್ಬರವನ್ನು ಬೆಳೆಗಳಿಗೆ ಸುಮಾರು ಒಂದು ಟನ್ ಪ್ರತಿ ಎಕರೆಗೆ ಬಳಸಬಹುದು.
2.ಇನ್‍ಸಿಟು (ಸ್ಥಾನಿಕ) ಎರೆ ಕೃಷಿ : ಹೊಲಗಳಲ್ಲಿ, ತೋಟಗಳಲ್ಲಿ, ಬೆಳೆಗಳಲ್ಲಿಯೆ ಎರೆಹುಳುಗಳನ್ನು ಬಿಟ್ಟು ಎರೆಕೃಷಿ ಮಾಡಬಹುದು. ಇದಕ್ಕೆ ಇನ್‍ಸಿಟು (ಸ್ಥಾನಿಕ) ಎರೆ ಕೃಷಿ ಎನ್ನುತ್ತಾರೆ. ಈ ಪದ್ಧತಿಯು ಕಬ್ಬು, ದ್ರಾಕ್ಷಿ, ದಾಳಿಂಬೆ, ನಿಂಬೆ, ಮಾವು ಮತ್ತು ಇನ್ನಿತರ ಹನಿ ನೀರಾವರಿ ಅಳವಡಿಸುವ ಬೆಳೆಗಳಿಗೆ ಬಹಳ ಸೂಕ್ತವಾಗಿದೆ. ಸಾಕಷ್ಟು ಕೃಷಿ ತ್ಯಾಜ್ಯ ವಸ್ತುಗಳನ್ನು ಹಾಕಿ ಮೇಲೆ ಹುಲ್ಲು ಹಾಸಿಗೆ ಹೊದಿಸಿ ಸುಮಾರು 30,000-50,000 ಎರೆಹುಳುಗಳನ್ನು ಪ್ರತಿ ಎಕರೆ ಪ್ರದೇಶಕ್ಕೆ ಗಿಡಗಳ ಸಾಲುಗಳ ಮಧ್ಯೆ ಅಥವಾ ಗಿಡಗಳ ಬುಡಕ್ಕೆ ಬಿಡಬೇಕು. ಈ ಪದ್ಧತಿ ಬಳಸಿ ಶೇ. 50 ರಷ್ಟು ರಾಸಾಯನಿಕ ಗೊಬ್ಬರದ ಬಳಕೆಯನ್ನು ಕಡಿಮೆ ಮಾಡಬಹುದಲ್ಲದೆ ಒಳ್ಳೆಯ ಗುಣಮಟ್ಟದ ಮತ್ತು ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ.
3.ಎರೆತೊಳೆ /ಎರೇಜಲ(ವಮೀ ವಾಶ್) ಬಳಕೆ: ಎರೆಗೊಬ್ಬರ ನೆನೆಸಿ ಬಂದ ದ್ರಾವಣಕ್ಕೆ ಎರೆತೊಳೆ ಅಥವಾ ವರ್ಮಿ ವಾಶ್ ಎನ್ನುತಾರೆ. ಈ ಎರೆತೊಳೆ ವಿವಿಧ ಪೋಷಕಾಂಶಗಳನ್ನು ಮತ್ತು ಬೆಳೆ ವರ್ಧಕಗಳನ್ನು ಹೊಂದಿರುವುದರಿಂದ ಇದನ್ನು ಬೆಳೆಗಳಿಗೆ ಸಿಂಪರಣೆ ಅಥವಾ ಬುಡಗಳಿಗೆ ಸುರಿಯುವುದರಿಂದ ಬೆಳೆಗಳು ಸಮೃದ್ಧಿಯಾಗಿ ಬೆಳೆಯುತ್ತವೆ. ಈ ದ್ರಾವಣವನ್ನು ಬದನೆ, ಈರುಳ್ಳಿ, ಮೆಣಸಿನಕಾಯಿ ಮತ್ತು ಟೊಮ್ಯಾಟೊ ಬೆಳೆಗಳ ಮೇಲೆ ಸಿಂಪರಣೆ ಮಾಡಿದಾಗ ಈ ತರಕಾರಿಗಳ ಗುಣಮಟ್ಟ ಮತ್ತು ಇಳುವರಿಯಲ್ಲಿ ಹೆಚ್ಚಾದದ್ದು ಕಂಡು ಬಂದಿದೆ.
ಎರೆಹುಳು ಗೊಬ್ಬರದ ಮಹತ್ವ :
ಎರೆಹುಳು ಸಾವಯವ ವಸ್ತುಗಳಾದ ಕೃಷಿ ತ್ಯಾಜ್ಯ ವಸ್ತುಗಳನ್ನು ತಿಂದು ತನ್ನ ಜಠರದಲ್ಲಿ ವಿಭಜಿಸಿ, ವಿವಿಧ ಪೋಷಕಾಂಶಗಳನ್ನೊಳಗೊಂಡ ಹಿಕ್ಕೆಗಳನ್ನು ಹಾಕುತ್ತದೆ. ಎರೆಗೊಬ್ಬರವನ್ನು ಸುಮಾರು ಎಕರೆಗೆ 1 ಟನ್‍ನಂತೆ ಬಳಸಿ ಉತ್ತಮ ಗುಣಮಟ್ಟದ ಇಳುವರಿಯನ್ನು ಪಡೆಯಬಹುದು.ಎರೆಹುಳುವಿನ ಅನ್ನನಾಳದಲ್ಲಿ ಅಧಿಕ ಸಂಖ್ಯೆಯಲ್ಲಿ ಸೂಕ್ಷ್ಮಾಣು ಜೀವಿಗಳು ವೃದ್ಧಿ ಹೊಂದಿ ಹುಳುವಿನ ಹಿಕ್ಕೆಯೊಡನೆ ಹೊರ ಬರುತ್ತವೆ.ಸಾಮಾನ್ಯವಾಗಿ ಬ್ಯಾಕ್ಟೀರಿಯಾ, ಪ್ರೋಟೊಜೊವಾ, ಆಕ್ಟಿನೋಮೈಸಿಟ್ಸ್ ಹಾಗೂ ಶಿಲೀಂದ್ರಗಳು ಹುಳುವಿನ ಹಿಕ್ಕೆಯೊಡನೆ ಕಾಣುವ ಸೂಕ್ಷಾಣು ಜೀವಿಗಳಾಗಿರುತ್ತವೆ. ಈ ಸೂಕ್ಷಾಣು ಜೀವಿಗಳು ತಮ್ಮ ಪ್ರತಿಕ್ರಿಯೆಯಿಂದ ಅ:ಓ (ಕಾರ್ಬನ್ : ನೈಟ್ರೋಜನ್) ಮತ್ತು ಅ:P (ಕಾರ್ಬನ್ : ಪಾಸ್ಪರಸ್) ಸಂಬಂಧಗಳನ್ನು ನಿಗದಿತ ಪ್ರಮಾಣದಲ್ಲಿ ಇರಲು ಶ್ರಮಿಸುತ್ತವೆ.
ಎರೆಹುಳುವಿನ ಪರಿಚಯ:
ಎರೆಹುಳುಗಳಲ್ಲಿ ಹಲವು ಜಾತಿಯ ಹುಳುಗಳಿವೆ. ಆದರೆ ಇವುಗಳಲ್ಲಿ ಮುಖ್ಯವಾಗಿ ಕೆಂಪು ಎರೆಹುಳು (ಐಸೀನಿಯಾ ಪೊಟಿಡಾ) ಮತ್ತು ಯುಡ್ರಿಲಸ ಯೂಜಿನಿಯ ವನ್ನು ಗೊಬ್ಬರ ತಯಾರಿಕೆಗೆ ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ಏಕೆಂದರೆ, ಇವು ಅತಿ ವೇಗವಾಗಿ ಬೆಳವಣಿಗೆಯಾಗುತ್ತವೆ ಮತ್ತು ಕಡಿಮೆ ಸಮಯದಲ್ಲಿ ತನ್ನ ಸಂಖ್ಯೆಯನ್ನು ವೃದ್ಧಿಸಿಕೊಳ್ಳುತ್ತವೆ. ಹೀಗಾಗಿ ಸಾವಯವ ತ್ಯಾಜ್ಯಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಿ ಅತ್ಯುತ್ತಮ ಗುಣಮಟ್ಟದ ಗೊಬ್ಬರವಾಗಿಸುತ್ತವೆ. ಕೆಂಪು ಎರೆಹುಳವಿನ ಕೋಶದಿಂದ ಹೊರಬಂದ ಹಳದಿ ಮಿಶ್ರಿತ ಕೆಂಪು ಬಣ್ಣದ ಚಿಕ್ಕ ಮರಿಹುಳು ಸುಮಾರು ಅರ್ಧ ಇಂಚು ಉದ್ದವಿರುತ್ತದೆ. ಮನುಷ್ಯನ ತಲೆಯ ನಾಲ್ಕು ಕೂದಲು ಸೇರಿದರೆ ಎಷ್ಟು ದಪ್ಪವಾಗುತ್ತದೆಯೊ ಅಷ್ಟೇ ದಪ್ಪವಿರುತ್ತದೆ. ಬೆಳೆಯುತ್ತಾ ಸುಮಾರು 3 ರಿಂದ 10 ಸೆಂ.ಮೀ. ಉದ್ದ, 0.4 ರಿಂದ 0.6 ಗ್ರಾಂ ತೂಕವಾಗುತ್ತವೆ, 50 ರಿಂದ 60 ದಿನಗಳಲ್ಲಿ ಕಡುಗೆಂಪು ಬಣ್ಣದ ವಯಸ್ಕ ಹುಳುವಾಗುತ್ತವೆ.
ಈ ಹುಳುಗಳು 3 ರಿಂದ 6 ತಿಂಗಳ ಅವಧಿಯಲ್ಲಿ ಸುಮಾರು 100 ಮೊಟ್ಟೆಗಳಿರುವ ಕೋಶಗಳನ್ನಿಟ್ಟು ಅದರಿಂದ 300 ರಿಂದ 700 ಮರಿಗಳನ್ನು ಪಡೆಯುತ್ತವೆ. ಒಂದು ಸಾವಿರ ಹುಳುಗಳಿದ್ದರೆ ಒಂದು ತಿಂಗಳ ಸಂತಾನಾಭಿವೃದ್ಧಿಯಲ್ಲಿ 2.5 ಲಕ್ಷದಿಂದ 3 ಲಕ್ಷದಷ್ಟು ಹೆಚ್ಚಬಲ್ಲವು. ಇವು 2 ರಿಂದ 3 ವರ್ಷ ಬದುಕಿರಬಲ್ಲವು.
ಗೊಬ್ಬರ ತಯಾರಿಕೆ ವಿಧಾನ:
ಸಣ್ಣ ಪ್ರಮಾಣದಲ್ಲಿ ಯಾದರೆ 5–10 ಟನ್ ಎರೆಹುಳು ಗೊಬ್ಬರ ತಯಾರಿಕೆಗೆ ಘಟಕವನ್ನು ಸ್ಥಾಪಿಸಿಕೊಳ್ಳಬಹುದು. ವಾಣಿಜ್ಯ ವಹಿವಾಟಿಗಾಗಿ ಬೇಡಿಕೆ ಇದ್ದರೆ 80 ರಿಂದ100 ಟನ್ ಸಾಮರ್ಥ್ಯದ ದೊಡ್ಡ ಪ್ರಮಾಣದ ಘಟಕವನ್ನು ಸ್ಥಾಪಿಸಿಕೊಳ್ಳಬಹುದು. ಘಟಕ ಸ್ಥಾಪನೆಯ ಖರ್ಚು-ವೆಚ್ಚವು ಉಪಯೋಗಿಸುವ ಸ್ಥಳ ಮತ್ತು ಕಚ್ಚಾ ವಸ್ತುಗಳ ಮೇಲೆ ಅವಲಂಬಿಸಿರುತ್ತದೆ. ಒಂದು ನೂರು ಕೆ.ಜಿ. ಎರೆ ಗೊಬ್ಬರವಾಗಿಸಲು ಸುಮಾರು ಮೂರು ಸಾವಿರ ಹುಳುಗಳು ಒಂದು ತಿಂಗಳ ಸಮಯ ತೆಗೆದುಕೊಳ್ಳುತ್ತವೆ.
ವಿಧಾನಗಳು ಹೀಗಿವೆ:
ಬೆಡ್ / ಮಡಿ ವಿಧಾನ: ಇದು ಸಾಮಾನ್ಯವಾಗಿ ಪ್ರಚಲಿತದಲ್ಲಿರುವ ವಿಧಾನ. ಇದರಲ್ಲಿ ಕಚ್ಚಾ ಅಥವಾ ಪಕ್ಕಾ ರೂಪದ ನೆಲಹಾಸು ಮತ್ತು ತೆಂಗಿನ ಗರಿ ಅಥವಾ ಕಾಂಕ್ರೀಟ್‌ನ ಹೊದಿಕೆಯ ಛಾವಣಿ ಹಾಕಬಹುದು. ಪ್ರತಿ ಬೆಡ್‌ಗಳು 6 ಅಡಿ ಉದ್ದ, 2 ಅಡಿ ಅಗಲ 2 ಅಡಿ ಎತ್ತರವಿರುವಂತೆ ನಿರ್ಮಿಸಬೇಕು.
ಟಾರ್ಪಲಿನ್ ತೊಟ್ಟಿ ವಿಧಾನ: ಇದು ಟಾರ್ಪಲಿನ್ ನಿಂದ ತಯಾರಿಸಿದ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾರ್ಪಲಿನ್ ತೊಟ್ಟಿ. ನಮಗೆ ಬೇಕಾದ ಅಳತೆ ಮತ್ತು ಆಕಾರದಲ್ಲಿ ದೊರೆಯುತ್ತಿವೆ. ಸಾಮಾನ್ಯವಾಗಿ 10 ಅಡಿ ಉದ್ದ, 4 ಅಡಿ ಅಗಲ 1.5 ಅಡಿ ಎತ್ತರ ಮತ್ತು 12 ಅಡಿ ಉದ್ದ, 4 ಅಡಿ ಅಗಲ 2 ಅಡಿ ಎತ್ತರವಿರುವ ಟಾರ್ಪಲಿನ್ ತೊಟ್ಟಿ ಮಾರುಕಟ್ಟೆಯಲ್ಲಿ ಲಭ್ಯ. ಸುತ್ತ ಮತ್ತು ಛಾವಣಿಗೆ ತೆಂಗಿನ ಗರಿಯಿಂದ ತಯಾರಿಸಿದ ತಡಿಕೆ ಅಥವಾ ಸುಲಭವಾಗಿ ಸಿಗಬಹುದಾದ ಹುಲ್ಲಿನಿಂದ ತಡಿಕೆಯ ಹೊದಿಕೆಯಿಂದ ನಿರ್ಮಿಸಬಹುದು. ಈ ವಿಧಾನದಲ್ಲಿ ಗಾಳಿಯಾಡಲು ಅನುಕೂಲವಿರುತ್ತದೆ, ಬಳಸಲು ಸುಲಭ, ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಳಾಂತರಿಸಲೂಬಹುದು. ಆದ್ದರಿಂದ ಇದು ಇಂದಿನ ದಿನಗಳಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ವಿಧಾನವಾಗಿದೆ.
ತೊಟ್ಟಿ /ಪಿಟ್ ವಿಧಾನ: ಇದು ಸಿಮೆಂಟ್ ಅಥವಾ ಕಾಂಕ್ರೀಟ್‌ನಿಂದ ತಯಾರಿಸಿದ 10 ಮೀಟರ್ ಉದ್ದ, 2ಮೀಟರ್ ಅಗಲ, 0.6 ಮೀಟರ್ ಎತ್ತರವಿರುವಂತೆ ನಿರ್ಮಿಸಬೇಕು. ತೆಂಗಿನ ಗರಿಯಿಂದ ತಯಾರಿಸಿದ ತಡಿಕೆ ಅಥವಾ ಸುಲಭವಾಗಿ ಸಿಗಬಹುದಾದ ಹುಲ್ಲಿನಿಂದ ತಡಿಕೆಯ ಹೊದಿಕೆಯಿಂದ ನಿರ್ಮಿಸಬಹುದು. ಈ ವಿಧಾನದಲ್ಲಿ ಗಾಳಿಯ ಕೊರತೆ ಮತ್ತು ತೊಟ್ಟಿಯಲ್ಲಿ ನೀರು ನಿಲ್ಲುವುದರಿಂದ ಮತ್ತು ಘಟಕ ಸ್ಥಾಪನೆಯ ಖರ್ಚು ಹೆಚ್ಚು.
ಎರೆಹುಳು ಗೊಬ್ಬರ ತಯಾರಿಕೆ ಪ್ರಕ್ರಿಯೆ: ಎರೆಹುಳು ಗೊಬ್ಬರ ತಯಾರಿಕೆ ಘಟಕವನ್ನು ತಂಪಾದ, ತೇವಾಂಶಯುಳ್ಳ, ನೆರಳಿರುವ ಜಾಗದಲ್ಲಿ ನಿರ್ಮಿಸಬೇಕು. ಸೆಗಣಿ ಗೊಬ್ಬರ, ಕೃಷಿಯ (ಬೆಳೆ ಕಟಾವಿನ ನಂತರ ಉಳಿದ ಹುಲ್ಲು, ಹೊಟ್ಟು, ಹಸಿರು ಕಳೆ ಗಿಡಗಳು, ಕೆಟ್ಟ ತರಕಾರಿ, ಹಣ್ಣುಗಳ) ತ್ಯಾಜ್ಯಗಳನ್ನು ಚಿಕ್ಕದಾಗಿ ಕತ್ತರಿಸಿ 3:1 ಪ್ರಮಾಣದಲ್ಲಿ ಮಿಶ್ರಣಮಾಡಿ 15–20 ದಿನಗಳವರೆಗೆ ಮುಚ್ಚಿಡಬೇಕು. ಹಾಗೆ ಇಟ್ಟ ಮಿಶ್ರಣ ಅರೆಬರೆ ಕೊಳೆತಿರುತ್ತದೆ.
ಒಣಗಿದ ಎಲೆ ಮತ್ತು ಹುಲ್ಲಿನಿಂದ ಸುಮಾರು 15 ರಿಂದ 20 ಸೆಂ.ಮೀ.ನಷ್ಟು ತೆಳು ಹಾಸನ್ನಾಗಿ (ಮೊದಲ ಪದರು) ಹಾಕಬೇಕು. ನಂತರ ಸೆಗಣಿ ಗೊಬ್ಬರ, ಕೃಷಿಯ ತ್ಯಾಜ್ಯಗಳ ಅರೆಬರೆ ಕೊಳೆತ ಮಿಶ್ರಣವನ್ನು ಸುಮಾರು 1.5 ನಿಂದ 2 ಕ್ವಿಂಟಾಲ್‌ನಷ್ಟು ತುಂಬಿಸಬೇಕು. ಹಾಗೆ ತುಂಬಿದ ತೊಟ್ಟಿ/ ಮಡಿಯ ಮೇಲ್ಭಾಗದಲ್ಲಿ 1500 ರಿಂದ 2000 ಎರೆಹುಳು ಬಿಡಬೇಕು.
ಎರೆಹುಳು ಬಿಟ್ಟ ತಕ್ಷಣ ನೀರು ಚಿಮುಕಿಸಬೇಕು ಮತ್ತು ತೊಟ್ಟಿ/ಮಡಿಯಲ್ಲಿ ಸದಾ ಹಸಿಯಾಗಿರುವಂತೆ ನೀರು ಚಿಮುಕಿಸುತ್ತಿರಬೇಕು. ಗೊಬ್ಬರವನ್ನು 30 ದಿನಗಳಿಗೊಮ್ಮೆ ತಿರುವಿ ಹಾಕಬೇಕು. ಹಾಗೆ ಮಾಡುವುದರಿಂದ ಗೊಬ್ಬರದಲ್ಲಿ ಗಾಳಿಯಾಡಲು ಅನುಕೂಲವಾಗುತ್ತದೆ ಮತ್ತು ಮಿಶ್ರಣದ ಸಂಪೂರ್ಣ ಭಾಗ ಗೊಬ್ಬರವಾಗಿ ಪರಿವರ್ತನೆಯಾಗಲು ಎರೆಹುಳುವಿಗೆ ಅವಕಾಶವಾಗುತ್ತದೆ. ಸುಮಾರು 45–55 ದಿನಗಳಲ್ಲಿ ಎರೆ ಗೊಬ್ಬರ ತಯಾರಾಗಿರುತ್ತದೆ, ಹಾಗೆ ತಯಾರಾದ ಮುಕ್ಕಾಲು ಭಾಗವನ್ನು ಮಾತ್ರ ತೆಗೆದುಕೊಳ್ಳಬೇಕು.
ಎರೆಹುಳು ಗೊಬ್ಬರದ ಕಟಾವು
ತೊಟ್ಟಿ/ಮಡಿಯಲ್ಲಿ ಹಾಕಿದ ಎಲ್ಲಾ ಮಿಶ್ರಣವು 45 ರಿಂದ 50 ದಿನಗಳಲ್ಲಿ ಕಪ್ಪು ಬಣ್ಣದ ಹರಳು ರೂಪ ಪಡೆದಿರುತ್ತದೆ. ಹೀಗೆ ಕಂಡು ಬಂದಾಗ ನೀರು ಚಿಮುಕಿಸುವುದನ್ನು ನಿಲ್ಲಿಸಬೇಕು ಮತ್ತು ತೊಟ್ಟಿ/ಮಡಿಯಿಂದ ತೆಗೆದು ಅರೆ ಕೊಳೆತ ಸೆಗಣಿ ಗೊಬ್ಬರವನ್ನು ಕೆಳ ಭಾಗಕ್ಕೆ ಮೇಲೆ ಎರೆ ಗೊಬ್ಬರ ಹಾಕಿ ರಾಶಿ ಮಾಡಬೇಕು. ಹೀಗೆ ಮಾಡುವುದರಿಂದ ಎರೆಹುಳು ಗಳು ಕೆಳ ಭಾಗದ ಸೆಗಣಿ ಗೊಬ್ಬರಕ್ಕೆ ವರ್ಗಾವಣೆಯಾಗುತ್ತವೆ. ಹುಳುಗಳಿಂದ ಬೇರ್ಪಟ್ಟ ಎರೆ ಗೊಬ್ಬರ ಸುಮಾರು 8–12 ದಿನಗಳು ನೆರಳಿನಲ್ಲಿ ಒಣಗಿಸಿದ ನಂತರ ಜರಡಿ ಹಿಡಿದು ತ್ಯಾಜ್ಯ ಬೇರ್ಪಡಿ ಸಬೇಕು, ಹಾಗೆ ಸಂಗ್ರಹವಾದ ಕಪ್ಪು ಬಣ್ಣದ ಹರಳು ರೂಪದ ಎರೆಹುಳು ಗೊಬ್ಬರ ಉಪಯೋಗಿಸಲು ಸಿದ್ಧ.
ಮುಂಜಾಗ್ರತಾ ಕ್ರಮಗಳು: ಎರೆಹುಳು ಗೊಬ್ಬರ ತಯಾರಿಕೆ ಘಟಕದ ನೆಲಹಾಸು ಗಟ್ಟಿಯಾಗಿರಬೇಕು, ಇಲ್ಲದಿದ್ದಲ್ಲಿ ಹುಳುಗಳು ಮಣ್ಣಿನಲ್ಲಿ ಹೋಗಿ ಸೇರುವ ಸಾಧ್ಯತೆ ಇರುತ್ತದೆ. ಸಾಗುವಳಿ ಘಟಕದ ಬಳಿ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು ಹಾಗೆಯೇ ಇರುವೆ, ಗೆದ್ದಲು ಇಲಿ, ಹೆಗ್ಗಣಗಳು ಸುಳಿಯಬಾರದು. ಇವುಗಳ ತೊಂದರೆ ಕಂಡು ಬಂದಲ್ಲಿ ಉಪ್ಪಿಗೆ ಅರಿಶಿಣ ಬೆರೆಸಿ ಮಡಿಯ ಸುತ್ತಲೂ ಹಾಕಬೇಕು.
ಎರೆಹುಳು ಗೊಬ್ಬರಕ್ಕೆ ಉಪಯೋಗಿಸುವ ಸೆಗಣಿ ಗೊಬ್ಬರ ಕನಿಷ್ಠ 15 ರಿಂದ 20 ದಿನ ಹಳೆಯದಾಗಿರ ಬೇಕು, ಇಲ್ಲವಾದಲ್ಲಿ ತೊಟ್ಟಿ/ ಮಡಿಯಲ್ಲಿ ಉಷ್ಣಾಂಶ ಹೆಚ್ಚಾಗಿ ಹುಳುಗಳಿಗೆ ತೊಂದರೆಯಾಗುವ ಸಂಭವವಿರುತ್ತದೆ. ತೊಟ್ಟಿ/ಮಡಿಯ ಉಷ್ಣಾಂಶ 20 ರಿಂದ 30 ಡಿಗ್ರಿ ಸೆ. ಮತ್ತು ತೇವಾಂಶ ಶೇ 40 ರಿಂದ 50 ರಷ್ಟು ಇರಬೇಕು. ತೇವಾಂಶ ಅಥವಾ ನೀರಿನ ಪ್ರಮಾಣ ಏರುಪೇರಾದಲ್ಲಿ ಅದರಲ್ಲಿನ ರಸಸಾರ ಕಡಿಮೆಯಾಗಿ ಹುಳುಗಳ ಬೆಳವಣಿಗೆ ಕುಂಠಿತವಾಗಬಹುದು.
ಎರೆಜಲ: ಎರೆಹುಳುವಿನ ದೇಹದಿಂದ ಹೆಚ್ಚು ಪೌಷ್ಠಿಕಾಂಶವುಳ್ಳಂತಹ ಮತ್ತು ಸಸ್ಯ ಪ್ರಚೋದಕಗಳನ್ನೊಳಗೊಂಡ ತ್ಯಾಜ್ಯ ಸ್ರವಿತವಾಗುತ್ತದೆ. ಇದನ್ನು ತೊಳೆದು ತೆಗೆಯಲು ಒಂದು ದೊಡ್ಡ ಪಾತ್ರೆಯಲ್ಲಿ ಸಣ್ಣ ಪಾತ್ರೆಯನ್ನು ತಲೆಕೆಳಗಾಗಿ ಇಡಬೇಕು.
ನೀರಿನ ಒಂದು ನಲ್ಲಿಯನ್ನು ಈ ಎರಡು ಪಾತ್ರೆಗೆ ಸೇರುವಂತೆ ಜೋಡಿಸಬೇಕು, ನಂತರ ಚೆನ್ನಾಗಿ ಕೊಳೆತ ಸಾವಯವ ಗೊಬ್ಬರವನ್ನು ದೊಡ್ಡ ಪಾತ್ರೆಯಲ್ಲಿ 100 ಕೆ.ಜಿ.ಯಷ್ಟು ಹಾಕಿ ಅದಕ್ಕೆ 5 ಕೆ.ಜಿ. ಎರೆಹುಳುಗಳನ್ನು ಬಿಡಬೇಕು. ಈ ಪಾತ್ರೆಗೆ ಪ್ರತಿದಿನ 5 ಲೀ. ನೀರನ್ನು 50 ದಿನದವರೆಗೆ ಹಾಕಬೇಕು ಎರೆಹುಳು ಮತ್ತು ಗೊಬ್ಬರವನ್ನು ತೊಳೆದು ಸಣ್ಣ ಪಾತ್ರೆಯಲ್ಲಿ ಸಂಗ್ರಹವಾಗುತ್ತದೆ, ಇದನ್ನು ‘ಎರೆಜಲ’ ಎಂದು ಕರೆಯುತ್ತಾರೆ. ಇಪ್ಪತ್ತು ಲೀಟರ್ ನೀರಿಗೆ 1 ಲೀಟರ್ ಎರೆಜಲ (20:1ರ ಅನುಪಾತದಲ್ಲಿ) ಬೆರೆಸಿ ಬೆಳೆಗೆ ಸಿಂಪಡಿಸಿದಾಗ ಉತ್ತಮ ಗುಣಮಟ್ಟದ ಬೆಳೆಯಿಂದ ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ.
ಎರೆಗೊಬ್ಬರ ಲಾಭಾಧಯಕ ಹೇಗೆ:
12 ಮೀಟರ್ ಉದ್ದ, 2 ಮೀಟರ್ ಅಗಲ ಹಾಗೂ 0.6ಮೀಟರ್ ಎತ್ತರವಿರುವ ಒಂದು ತೊಟ್ಟಿಯಿಂದ 3ತಿಂಗಳಲ್ಲಿ ಸುಮಾರು 50ಕೆಜಿ ಇರುವ ಬ್ಯಾಗಗಳನ್ನು ಕನಿಷ್ಟ 30 ರಿಂದ 40 ಬ್ಯಾಗಾಗಳಷ್ಟು ಎರೆಗೊಬ್ಬರ ತಯಾರಿಸಬಹುದು. ಒಂದು 50ಕೆಜಿ ಬ್ಯಾಗನ ಬೆಲೆ 300 ರೂಪಾಯಿ ಅಂತೆ ಮಾರಾಟ ಮಾಡಲಾಗುವದು. ಒಂದು ತೊಟ್ಟಿಯಿಂದ ಕನಿಷ್ಟ 30 ಬ್ಯಾಗ್ ಉತ್ಪಾದನೆ ಮಾಡಿದರೆ ,20ತೊಟ್ಟಿಯಿಂದ ಒಂದು acre ಜಾಗದಲ್ಲಿ 600 ಬ್ಯಾಗುಗಳನ್ನು ಉತ್ಪಾದನೆ ಮಾಡಬಹುದು, ಅಂದರೆ 3 ತಿಂಗಳಲ್ಲಿ 20 ತೊಟ್ಟಿಯಿಂದ 1,80,000 ಸಂಪಾದಿಸಬಹುದು ,ಹಾಗೆ ವರ್ಷದಲ್ಲಿ 4 ಸಲಾ ಉತ್ಪಾದನೆ ಮಾಡಿದರೆ ವರ್ಷಕ್ಕೆ ಎಲ್ಲ ಖರ್ಚು ತಗೆದು 4 ರಿಂದ 5 ಲಕ್ಷದವರೆಗೆ ಸಂಪಾದಿಸಬಹುದು, ಇನ್ನೂ ಮಾರಾಟ ಮಾಡುವ ವಿಷಯಕ್ಕೆ ಬಂದರೆ ಎರೆಗೊಬ್ಬರವನ್ನೂ ರೈತರಿಗೆ ಮಾರಾಟ ಮಾಡಬಹುದು ಹಾಗೂ ಸಾವಯವ ಕೃಷಿ ಮಾಡುವ ರೈತರು ಈ ಗೊಬ್ಬರವನ್ನು ಜಾಸ್ತಿ ಖರೀದಿಸುತ್ತಾರೆ.
ಸರ್ಕಾರದಿಂದ ಸಹಾಯಧನ ಹೇಗೆ ಪಡೆಯುವದು:
ಸರ್ಕಾರದಿಂದ ಸಾಮಾನ್ಯ ವರ್ಗದವರಿಗೆ ಎರೆಗೊಬ್ಬರ ತಯಾರಿಕೆ ತೊಟ್ಟಿಗಳನ್ನು ನಿರ್ಮಿಸಲು 25% ಸಹಾಯಧನ ಮಾಡಲಾಗುವದು ಹಾಗೂ SC ಮತ್ತು ST ಅವರಿಗೆ 33.3% ಸಹಾಯಧನವನ್ನು ಸಿಂಡಿಕೇಟ್, ಕೆನರಾ ಹಾಗೂ ಕೃಷಿ ಗ್ರಾಮೀಣ ಬ್ಯಾಂಕ್ಗಳಲ್ಲಿ ಕೊಡಲಾಗುವುದು. ಹೆಚ್ಚಿನ ಮಾಹಿತಿಗೆ ಈ ನನ್ನ ಮೊಬೈಲ್ ನಂಬರ್ ಗೆ ಕರೆ ಮಾಡಿ 9113025350.
ತರಬೇತಿ ಮತ್ತು ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರ ಧಾರವಾಡ - 9886526653, ಕೃಷಿ ವಿಜ್ಞಾನ ಕೇಂದ್ರ ಬಾಗಲಕೋಟೆ - 7411628470, ಕೃಷಿ ವಿಜ್ಞಾನ ಕೇಂದ್ರ ಗಂಗಾವತಿ - 7353637711 ಸಂಪರ್ಕಿಸಬಹುದು.
ಲೇಖಕರು: ಮಹಾಂತೇಶ ಎಸ್ ತೊಣ್ಣೆ,
ಎಮ್ ಎಸ್ ಸಿ (ಕೃಷಿ ಕೀಟ ಶಾಸ್ತ್ರ) ರಾಯಚೂರು Mob. No: 9113025350