Agripedia

ರೈತರ ಹೊಲಗಳಿಗೆ ಬೇಲಿಯಂತಿರುತ್ತಿದ್ದ ಕತ್ತಾಳೆ ರೈತರಿಗೆ ಬಹುಪಯೋಗಿ

31 May, 2021 8:03 PM IST By: KJ Staff
Agavaceae

ಕತ್ತಿಯಂತೆ ಮೊನಚಾಗಿ ಮಾರುದ್ದ ಬೆಳೆದ ಎಲೆ, ಆಚೀಚೆ ಎರಡೂ ಬದಿಯಲ್ಲಿ ಚೂಪಾದ ಮುಳ್ಳುಗಳು, ಖಾಲಿ ಜಾಗ ಸಿಕ್ಕರೆ ವಿಸ್ತಾರವಾಗಿ, ಸೊಂಪಾಗಿ ಬೆಳೆಯುವ ಗುಣ, ಕಣ್ಣಿಗೆ ಕಳೆಯಂತೆ ಕಂಡರೂ ಕೃಷಿಕರ ಪಾಲಿಗೆ ಬಹುಪಯೋಗಿ ಎನಿಸಿರುವ ರೈತಮಿತ್ರ. ಈ ಸಸ್ಯದ ಹೆಸರು ಕತ್ತಾಳೆ.

ಬಯಲು ಸೀಮೆಯಲ್ಲಿ ಕತ್ತಾಳೆಯ ಕಾರುಬಾರು ಹೆಚ್ಚು. ರೈತರ ನುಡಿಗಟ್ಟಿನಲ್ಲಿ ಗರಗಸ ಕಳ್ಳಿ (ಕರಕಸ ಕಳ್ಳಿ) ಅಥವಾ ಗರಗಸ ಗಿಡ ಎಂದೇ ಚಿರಪರಿಚಿತವಾಗಿರುವ, ಕಾಕ್ಟಸ್ ಜಾತಿಗೆ ಸೇರಿರುವ ಈ ಗಿಡ ದೈತ್ಯಾಕಾರವಾಗಿ ಬೆಳೆಯುವುದರಿಂದ ಕೆಲವೆಡೆ ಇದನ್ನು ರಕ್ಕಸಕಳ್ಳಿ ಎಂದೂ ಕರೆಯುವುದುಂಟು. ಬಯಲು ಸೀಮೆ ರೈತರು ತಮ್ಮ ಹೊಲದ ಬದುಗಳಲ್ಲಿ ಹಾಗೂ ತೋಟದ ಸುತ್ತ ಬೇಲಿ ರೂಪದಲ್ಲಿ ಕತ್ತಾಳೆ ಗಿಡಗಳನ್ನು ಬೆಳೆಸುತ್ತಾರೆ. ಬಿಟ್ಟರೆ ಎಲ್ಲೆಂದರಲ್ಲಿ ಕಳೆ ರೀತಿ ಬೆಳೆಯುವ ಈ ಕಳ್ಳಿ ಗಿಡ ಹಲವು ವಿಧಗಳಲ್ಲಿ ರೈತರಿಗೆ ಉಪಕಾರಿ. ಹೀಗಾಗಿ ಇದರ ಬಹುಪಯೋಗದ ಗುಣ ತಿಳಿದಿರುವ ರೈತರು ಇದನ್ನು ಕಳೆ ಎಂದು ಭಾವಿಸಿ ಕಿತ್ತೆಸೆಯುವುದಿಲ್ಲ. ಬದಲಿಗೆ ಇನ್ನಷ್ಟು ಹುಲುಸಾಗಿ ಬೆಳೆಯಲು ಬೇಕಿರುವ ವ್ಯವಸ್ಥೆ ಮಾಡುತ್ತಾರೆ.

ಈ ಕತ್ತಾಳೆ, ಮರುಭೂಮಿಯಲ್ಲಿ ಬೆಳೆಯುವ ಸಸ್ಯ ಪ್ರಭೇದಗಳಲ್ಲಿ ಒಂದಾಗಿದೆ. ಹೀಗಾಗಿ ಮಳೆ ನೀರನ್ನು ಹೆಚ್ಚು ದಿನಗಳವರೆಗೆ ಹಿಡಿದಿಟ್ಟುಕೊಳ್ಳುವ ಗುಣ ಇದರ ಹುಟ್ಟಿನೊಂದಿಗೇ ಬಂದಿದೆ. ಈ ಒಂದು ಕಾರಣದಿಂದಾಗಿ ಕತ್ತಾಳೆಯು ಬಯಲು ಸೀಮೆಗೆ ಹೇಳಿಮಾಡಿಸಿದ ಸಸ್ಯ ಎಂದೆನಿಸಿದೆ.

ಏನಿದರ ವಿಶೇಷತೆ

ಅಂತರ್ಜಲ ಸಂರಕ್ಷಣೆ, ಅಂತರ್ಜಲ ಮಟ್ಟ ಹೆಚ್ಚಿಸುವಿಕೆ ಸೇರಿ ಹಲವು ವಿಶೇಷತೆಗಳನ್ನು ಈ ಕತ್ತಾಳೆ ಗಿಡಗಳು ಹೊಂದಿವೆ. ಸಾಮಾನ್ಯವಾಗಿ ಬಯಲು ಸೀಮೆ ಪ್ರದೇಶಗಳಲ್ಲಿ ಮಳೆ ಪ್ರಮಾಣ ಕಡಿಮೆ. ಇಂತಹ ಪ್ರದೇಶದಲ್ಲಿ ಬೆಳೆಯುವ ಕತ್ತಾಳೆ ಗಿಡಗಳು, ಹೆಚ್ಚು ದಿನಗಳ ಕಾಲ ಮಳೆ ನಿರನ್ನು ಹಿಡಿದುಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುತ್ತವೆ. ಅಷ್ಟೇ ಅಲ್ಲ, ಎಂಥ ಬಿಸಿಲೇ ಇರಲಿ ಇವುಗಳು ತಮ್ಮೊಳಗಿನ ನೀರನ್ನು ಆವಿಯಾಗಲು ಬಿಡುವುದಿಲ್ಲ. ಇವೆಲ್ಲಕ್ಕಿಂತಲೂ ಮುಖ್ಯವಾಗಿ, ಕಡಿಮೆ ಮಳೆ ಬೀಳುವ ಬಯಲು ಸೀಮೆಯಲ್ಲಿ ಅಂತರ್ಜಲವನ್ನು ಕಾಪಾಡುವಲ್ಲಿ ಈ ಸಸ್ಯಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಕತ್ತಾಳೆ ಗಿಡಡಗಳು ಬೆಳೆದಿರುವಲ್ಲಿ ಮಣ್ಣಿನ ಸವಕಳಿ ಆಗುವುದಿಲ್ಲ. ಇದರಿಂದಾಗಿ ರೈತರ ಜಮೀನಿನಲ್ಲಿರುವ ಮಣ್ಣಿನ ಫಲವತ್ತತೆ ನಾಶವಾಗುವುದು ತಪ್ಪುತ್ತದೆ. ಹಾಗೇ, ಮಳೆ ನೀರನ್ನು ಭೂಮಿಯೊಳಗೆ ಇಂಗಿಸಿ, ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಕಾರ್ಯ ಕೂಡ ಈ ಸಸ್ಯಗಳಿಂದ ಆಗುತ್ತದೆ.

ರೈತರಿಗೇನು ಉಪಯೋಗ?

ಮೊದಲೇ ಹೇಳಿದಂತೆ ರೈತರ ಜಮೀನಿನಲ್ಲಿ ಬೆಳೆಯುವ ಕತ್ತಾಳೆ ಸಸ್ಯಗಳು ಮಳೆ ನೀರನ್ನು ಇಂಗಿಸಿ ಅಂತರ್ಜಲ ಮಟ್ಟ ವೃದ್ಧಿಸುತ್ತವೆ. ಇದರಿಂದ ಕೃಷಿ ಭೂಮಿಯಲ್ಲಿರುವ ಕೊಳವೆ ಬಾವಿಗಳಲ್ಲಿ ಬೇಸಿಗೆಯಲ್ಲೂ ನೀರು ಲಭ್ಯವಾಗುತ್ತದೆ. ಜೊತೆಗೆ ಮಣ್ಣಿನ ಒಳಗೆ ತೇವಾಂಶ ಬಹುದಿನಗಳವರೆಗೆ ಇರುತ್ತದೆ. ಬೆಳೆಯ ನಡುವೆ ಅಲ್ಲಲ್ಲಿ ಕತ್ತಾಳೆಯನ್ನು ಬೆಳೆಸುವುದರಿಂದ ಕೆಲ ದಿನಗಳ ಕಾಲ ಮಳೆ ಮರೆಯಾದರೂ ಬೆಳೆಗಳು ಒಣಗುವುದಿಲ್ಲ. ಈ ಸಸ್ಯಗಳು ನೈಸರ್ಗಿಕವಾಗಿ ಬಳೆಯುವುದರಿಂದ ಬೆಳೆ ಮೇಲೆ ಯಾವುದೇ ರೀತಿಯ ಅಡ್ಡ ಪರಿಣಾಮ ಆಗುವುದಿಲ್ಲ ಎನ್ನುತ್ತಾರೆ ತಜ್ಞರು.

ಬೇಲಿ, ಗೊಬ್ಬರ ಮತ್ತು ಕೀಟನಾಶಕ

ಹೊಲದ ಬದುಗಳಲ್ಲಿ ಹಾಗೂ ತೋಟದ ಸುತ್ತ ಬೇಲಿ ರೂಪದಲ್ಲಿ ಕತ್ತಾಳೆಯನ್ನು ಬೆಳೆಸುವುದರಿಂದ ಜಾನುವಾರುಗಳ ಹಾವಳಿಯಿಂದ ಬೆಳೆಗಳಿಗೆ ರಕ್ಷಣೆ ದೊರೆಯುತ್ತದೆ. ಎಲೆಯಂತೆ ತೋರುವ ಕತ್ತಾಳೆಯ ಕಾಂಡದ ಎರಡೂ ಬದಿಯಲ್ಲಿ ಮುಳ್ಳುಗಳು ಬೆಳೆಯುವುದರಿಂದ ಇವುಗಳನ್ನು ದಾಟಿಕೊಂಡು ಬೆಳೆಯತ್ತ ನುಗ್ಗುವ ಸಾಹಸವನ್ನು ದನಕರುಗಳು ಮಾಡುವುದಿಲ್ಲ. ಬೇಲಿಯಲ್ಲಿ ಕಳ್ಳಿ ಹಾಗೂ ಕತ್ತಾಳೆಗಿಡಗಳನ್ನು ಒಟ್ಟೊಟ್ಟಿಗೆ ಬೆಳೆಸಿದರೆ ಇನ್ನೂ ಉತ್ತಮ. ಸಾಮಾನ್ಯವಾಗಿ ಕತ್ತಾಳೆ ಗಿಡಗಳಿಗೆ ಯಾವುದೇ ಕೀಟ ಬಾಧೆ ಇರುವುದಿಲ್ಲ. ಹೀಗಾಗಿ ಸಾವಯವ ಕೀಟನಾಶಕ ತಯಾರಿಸುವಾಗ ಕತ್ತಾಳೆ ಗಿಡದ ಎಲೆಗಳನ್ನು ಬಳಸಲಾಗುತ್ತದೆ. ಜೊತೆಗೆ ಸಾವಯವ ಗೊಬ್ಬರ ತಯಾರಿಸುವಾಗಲೂ ಇವುಗಳನ್ನು ಪ್ರಮುಖ ಆಕರವಾಗಿ ಬಳಸಲಾಗುತ್ತದೆ. ದ್ರಾಕ್ಷಿ, ದಾಳಿಂಬೆ, ಬಾಳೆ, ಕಿತ್ತಳೆ ಹಾಗೂ ಇತರ ಹಣ್ಣಿನ ಬೆಳೆಗಳಿಗೆ ಸಿಂಪಡಿಸಲು ಕತ್ತಾಳೆ ರಸದಿಂದ ಸಾವಯವ ಔಷಧ ತಯಾರಿಸಲಾಗುತ್ತದೆ. ಈ ಗಿಡಗಳನ್ನು ಕಿತ್ತು ಆರು ತಿಂಗಳು ಕೊಳೆಸುವುದರಿಂದ ಅತ್ಯುತ್ತಮ ಕಾಂಪೋಸ್ಟ್ ಗೊಬ್ಬರ ಲಭ್ಯವಾಗುತ್ತದೆ.

ಕತ್ತಾಳೆ ಎಲೆಗಳಲ್ಲಿ ನಾರು ಹೆಚ್ಚಾಗಿರುತ್ತದೆ. ಈ ನಾರನ್ನು ಬಳಸಿ ರೈತರು ಬಳಸುವ ಹಗ್ಗ ತಯಾರಿಸಲಾಗುತ್ತದೆ. ಹಿಂದೆಲ್ಲಾ ಮಣ್ಣಿನ ಮಡಕೆ, ಗಡಿಗೆಗಳನ್ನು ಇರಿಸಲು ಬೇಕಿರುವ ಸಿಂಬೆಗಳನ್ನು ಈ ಕತ್ತಾಳೆ ನಾರಿನಿಂದಲೇ ತಯಾರಿಸುತ್ತಿದ್ದರು. ಈಗ ಮಣ್ಣಿನ ಮಡಕೆ, ಗಡಿಗೆಗಳನ್ನು ಬಳಸುವುದಿಲ್ಲವಾದ್ದರಿಂದ ನಾರಿನ ಸಿಂಬೆಗಳೂ ಮರೆಯಾಗಿವೆ. ಈ ನಾರಿನಿಂದ ಹಲವು ಅಲಂಕಾರಿಕ ವಸುಗಳು, ಬ್ಯಾಗ್, ರೈತೋಪಕರಣಗಳನ್ನು ತಯಾರಿಸಲಾಗುತ್ತದೆ. ನಾರಿನ ಅಲಂಕಾರಿಕ ವಸ್ತುಗಳಿಗೆ ನಗರ ಪ್ರದೇಶಗಳಲ್ಲಿ ಉತ್ತಮ ಬೇಡಿಕೆ, ಮಾರುಕಟ್ಟೆ ಎರಡೂ ಇದೆ.

ಮೆಕ್ಸಿಕೋ ಮೂಲ

ಅಮೆರಿಕ ಮತ್ತು ಮೆಕ್ಸಿಕೋ ಮೂಲದ್ದಾಗಿರುವ ಕತ್ತಾಳೆ, ೧೫ನೇ ಶತಮಾನದ ಆದಿಯಲ್ಲಿ ಭಾರತದ ಮಣ್ಣಿನಲ್ಲಿ ಬೆಳೆಯಲಾರಂಭಿಸಿತು ಎನ್ನಲಾಗಿದೆ. ಇವುಗಳನ್ನು ಭಾರತಕ್ಕೆ ತಂದ ಶ್ರೇಯ ಫ್ರೆಂಚರಿಗೆ ಸಲ್ಲುತ್ತದೆ. ಇಂಗ್ಲಿಷ್‌ನಲ್ಲಿ ಅಗೇವ್ ಎಂದು ಕರೆಯಲಾಗುವ ಕಾಕ್ಟಸ್‌ ಪ್ರಭೇದದಲ್ಲಿ ಒಟ್ಟು ೨೭೫ ವಿಧಗಳಿವೆ.

ಮರೆಯಾಗುತ್ತಿರುವ ಕತ್ತಾಳೆ

ಬಯಲುಸೀಮೆಯಲ್ಲಿ ಹಿಂದೆಲ್ಲಾ ಹೆಚ್ಚಾಗಿ ಕಾಣಸಿಗುತ್ತಿದ್ದ ಕತ್ತಾಳೆ ಈಗ ಅಷ್ಟಾಗಿ ಕಾಣುವುದಿಲ್ಲ. ಇದರ ಮಹತ್ವದ ಅರಿವಿನ ಕೊರತೆಯಿಂದಲೋ ಅಥವಾ ಇದೊಂದು ಕಳ್ಳಿ ಅಥವಾ ಕಳೆಯ ಗಿಡ ಎಂದು ಭಾವಿಸಿರುವುದರಿಂದಲೋ ಕತ್ತಾಳೆ ಗಿಡಗಳನ್ನು ಕತ್ತರಿಸಿ ಎಸೆಯಲಾಗುತ್ತಿದೆ. ರೈತರ ಪಾಲಿಗೆ ಉಪಕಾರಿಯಾಗಿರುವ ಈ ಸಸ್ಯಗಳನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎನ್ನುತ್ತಾರೆ ಬಳ್ಳಾರಿಯ ಮೃತ್ಯುಂಜಯ ನಾರ ಅವರು.