Agripedia

ಕಡಲೆ ಬೆಳೆಗೆ ಬೀಜೋಪಚಾರ ಮಾಡಿ, ಹೆಚ್ಚಿನ ಇಳುವರಿ ಪಡೆಯಿರಿ

16 November, 2020 2:30 PM IST By:

 ಕಡಲೆ  ದ್ವಿದಳಧಾನ್ಯವಾಗಿದ್ದು, ಇದು ಉತ್ತರ ಕರ್ನಾಟಕದ ಪ್ರಮುಖ ಹಿಂಗಾರು ಬೆಳೆಯಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಾದ ಗದಗ್, ಧಾರವಾಡ, ಬೆಳಗಾವಿ ಹಾಗೂ ಕೊಪ್ಪಳದಲ್ಲಿ ಇದನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.

ಕಡಲೆಯಲ್ಲಿ ಕಂಡುಬರುವ ಸಿಡಿರೋಗ ಹಾಗೂ ಕುಂಕುಮ ರೋಗಗಳ ಕಾರಣಗಳಿಂದಾಗಿ ಕಡಲೆಯಲ್ಲಿ ಇಳುವರಿ ತುಂಬಾ ಕಡಿಮೆಯಾಗುತ್ತಿದೆ.  ಹಾಗಾಗಿ ರೈತರು ಇದನ್ನು ನಿಯಂತ್ರಿಸಲು  ಹಲವಾರು ತರಹದ ಔಷಧಿಗಳನ್ನು ಸಿಂಪಡಿಸಿ ಬೆಳೆ ರಕ್ಷಿಸಿ ಹೆಚ್ಚು ಇಳುವರಿ ಪಡೆದುಕೊಳ್ಳುತ್ತಾರೆ.

ಕಡಲೆಗೆ ಬರುವ ರೋಗವನ್ನು ಆರಂಭದ ಹಂತದಲ್ಲಿಯೂ ತಡೆಯಬಹುದು. ಬೀಜೋಪಚಾರ ಮಾಡಿ ಬಿತ್ತಿದರೆ ರೋಗ ನಿಯಂತ್ರಣವಾಗುತ್ತದೆ. ಹೀಗಾಗಿ ನಾವು ಕಡಲೆ ಬೀಜವನ್ನು ಬಿತ್ತುವ ಮುನ್ನ ಬೀಜೋಪಚಾರ ಮಾಡಿ  ಬಿತ್ತಿದರೆ ಹೆಚ್ಚು ಇಳುವರಿ ಪಡೆಯಬಹುದು. ಬೀಜೋಪಚಾರಕ್ಕಾಗಿ ಕೃಷಿ ವಿಶ್ವವಿದ್ಯಾಲಯಗಳು ಹಲವಾರು ತರಹದ ಜೈವಿಕ ಗೊಬ್ಬರಗಳನ್ನು  ಸಿದ್ಧಪಡಿಸಿದ್ದಾರೆ ಹಾಗೂ ಬಳಕೆಗೆ ಶಿಫಾರಸು ಮಾಡಿದ್ದಾರೆ.

ಕೃಷಿ ವಿಶ್ವವಿದ್ಯಾಲಯವು ಕಡಲೆ ಬೆಳೆಯಲ್ಲಿ ಬೀಜೋಪಚಾರಕ್ಕಾಗಿ ಮೂರು ಜೈವಿಕ ಗೊಬ್ಬರಗಳನ್ನು ಶಿಫಾರಸು ಮಾಡಿದೆ. ಯಾವುದೆಂದರೆ

  1. ಟ್ರೈಕೋಡರ್ಮಾ ಇದು ಒಂದು ಶಿಲೀಂದ್ರನಾಶ
  2. ರೈಜೋಬಿಯಂ ಇದು ಗಾಳಿಯಲ್ಲಿರುವ ಸಾರಜನಕವನ್ನು ಗಿಡಕ್ಕೆ ಒದಗಿಸುತ್ತದೆ
  3. ರಂಜಕ ಕರಗಿಸುವ ಬ್ಯಾಕ್ಟೀರಿಯಾ

ಬೀಜೋಪಚಾರ ಪ್ರಕ್ರಿಯೆ:

 ಒಂದು ಎಕರೆಗೆ ಬೇಕಾಗುವಷ್ಟು ಕಡಲೆ ಬೀಜಗಳನ್ನು ತೆಗೆದುಕೊಳ್ಳಬೇಕು,  ನಂತರ ಒಂದು ಲೀಟರ್ ನೀರಿನಲ್ಲಿ 250 ಗ್ರಾಂ ಬೆಲ್ಲವನ್ನು ಹಾಕಿ ಕುದಿಸಿ ಅದನ್ನು ಆರಿಸಬೇಕು. ಮೊದಲಿಗೆ ಒಂದು ಎಕರೆಗೆ ಬೇಕಾಗುವ 25ರಿಂದ 30 ಕೆಜಿ ಕಡಲೆ ಮೇಲೆ ಬೆಲ್ಲದ ಪಾಕವನ್ನು ಸ್ವಲ್ಪ ಹಾಕಬೇಕು. ಅದಾದ ನಂತರ ಪ್ರತಿ ಕೆಜಿ ಬೀಜಕ್ಕೆ 6 ಗ್ರಾಂನಂತೆ ಟ್ರೈಕೋಡರ್ಮಾ ಸೇರಿಸಿ ಪ್ರತಿಯೊಂದು ಬೀಜಕ್ಕೂ ಅಂಟುವ ಹಾಗೆ ಸರಿಯಾಗಿ ಅದನ್ನು ಲೇಪಿಸಬೇಕು. ಇದನ್ನು ಮಾಡುವುದರಿಂದ ನಮಗೆ ಬೀಜ ಹಾಗೂ ಮಣ್ಣಿನ ಮೂಲಕ ಹುಟ್ಟುವಂತಹ ರೋಗಗಳನ್ನು ತಡೆಯಬಹುದು ಹಾಗೂ ಕಡಲೆಗೆ ತಗಲುವ ಸಿಡಿ ರೋಗವನ್ನು ಟ್ರೈಕೋಡರ್ಮದಿಂದ ನಿಯಂತ್ರಿಸಬಹುದು.

ಎರಡನೇದಾಗಿ ಇದರ ಮೇಲೆ ಮತ್ತೆ ಸ್ವಲ್ಪ ಬೆಲ್ಲದ ಪಾಕವನ್ನು ಹಾಕಿ ಎಕರೆಗೆ 500 ಗ್ರಾಂ ರೈಜೋಬಿಯಂ ಅನ್ನು ಹಾಕಿ ಅದನ್ನು ಕೂಡ ಸರಿಯಾಗಿ ಅಂಟುವ ಹಾಗೆ ಕಲಿಸಬೇಕು. ರೈಜೋಬಿಯಂ ಜೈವಿಕಗೊಬ್ಬರವು ಗಿಡದ ಬೇರಿನಲ್ಲಿ ಗಂಟುಗಳನ್ನು ಮಾಡಿ ಇದರ ಮೂಲಕ ಗಾಳಿಯಲ್ಲಿರುವ ಸಾರಜನಕವನ್ನು ಕರಗಿಸಿ ಗಿಡಗಳಿಗೆ ನೀಡುತ್ತದೆ. ಇದನ್ನು ಬಳಸುವುದರಿಂದ ನಾವು ರಾಸಾಯನಿಕ ಗೊಬ್ಬರಗಳ ಮೇಲಿನ ಬಳಕೆಯನ್ನು ನಿಯಂತ್ರಿಸಬಹುದು ಹಾಗೂ ಸಾವಯವ ಕೃಷಿಗೆ ಮಣ್ಣನೆ ನೀಡಬಹುದು.

ಲೇಖಕರು: ಚಿನ್ನಪ್ಪ ಎಸ್. ಅಂಗಡಿ