Agripedia

ಬಿದಿರು ಕೃಷಿಯಿಂದ 80 ವರ್ಷ ನಿರಂತರ ಆದಾಯ ಗ್ಯಾರಂಟಿ!

04 June, 2021 9:46 PM IST By: KJ Staff
ಬಿದಿರು ಬೆಳೆ

ಬಿದಿರು ಇಲ್ಲದೆ ಬದುಕೇ ಇಲ್ಲ. ಹುಟ್ಟು-ಸಾವು ಎರಡೂ ಬಿದಿರಿನ ಜೊತೆ ನಂಟು ಹೊಂದಿವೆ. ಹುಟ್ಟಿದಾಗ ಮಗುವನ್ನು ಬಿದಿರಿನ ಮೊರದಲ್ಲಿ ಹಾಕಿ, ಆ ಮಗುವಿಗೊಂದು ಅಂದವಾದ ಹೆಸರಿಟ್ಟು ಭೂಮಿಗೆ ಬರಮಾಡಿಕೊಂಡರೆ, ಮನುಷ್ಯ ಕೊನೆಯುಸಿರೆಳೆದಾಗ ಆತನನ್ನು ರುದ್ರಭೂಮಿಯವರೆಗೆ ಹೊತ್ತೊಯ್ಯಲು ಕಟ್ಟುವ ಚಟ್ಟಕ್ಕೂ ಬಿದಿರೇ ಬೇಕು. ಈ ಆರಂಭ ಮತ್ತು ಅಂತ್ಯದ ನಡುವೆ ಪ್ರತಿ ದಿನವೂ ಬಿದಿರಿನ ಜೊತೆ ನಮ್ಮ ಒಡನಾಟ ಇದ್ದೇ ಇರುತ್ತದೆ. ಅದರಲ್ಲೂ ರೈತರ ಮನೆಗಳಲ್ಲಿ ಬಿದಿರು ಮತ್ತು ಬಿದಿರಿನ ಉತ್ಪನ್ನಗಳು ಹಾಸುಹೊಕ್ಕಾಗಿರುತ್ತವೆ.

ಬಿದಿರು ಬುಟ್ಟಿ, ಬಿದಿರಿನ ಮೊರ, ಬಿದಿರು ಬಂಬುಗಳಿAದ ಮಾಡಿದ ಏಣಿ, ಬಿದಿರಿನ ಪೀಠೋಪಕರಣಗಳು, ಆಟಿಕೆಗಳು, ಕಿಟಕಿ ಪರದೆ, ಚಾಪೆ ಹೀಗೆ ಅನೇಕ ವಿಧದಲ್ಲಿ ಬಿದಿರು ನಮ್ಮ ಸುತ್ತಮುತ್ತ ರಾರಾಜಿಸುತ್ತಿರುತ್ತದೆ. ಆದರೆ ಪ್ರತಿ ದಿನವೂ ಬಿದಿರನ್ನು ಬಳಸುವ ರೈತರು, ಅದನ್ನು ಬೆಳೆಯುವ ವಿಚಾರ ಬಂದಾಗ ಮಾತ್ರ ಹಿಂದೆ ಸರಿಯುತ್ತಾರೆ. ಬಿದಿರು ಒಂದು ಕೃಷಿ ಬೆಳೆಯೇ ಅಲ್ಲ, ಅದೊಂದು ಕಾಡು ಸಸ್ಯ ಎನ್ನುವುದೇ ಬಹುತೇಕ ರೈತರ ವಾದವಾಗಿದೆ. ಆದರೆ, ಎಲ್ಲರೂ ಅಂದುಕೊAಡಿರುವಹಾಗೆ ಬಿದಿರು ಕೃಷಿಗೆ ಯೋಗ್ಯವಲ್ಲದ ಬೆಳೆಯಲ್ಲ. ಹಸಿರು ಹೊನ್ನು ಎಂದು ಕರೆಸಿಕೊಳ್ಳುವ ಬಿದಿರನ್ನು ಬೆಳೆದರೆ ರೈತರ ಬಾಳೂ ಬಂಗಾರವಾಗುತ್ತದೆ.

ಹಾಗಾದರೆ, ಬಿದಿರು ಬೆಳೆಯುವುದು ಹೇಗೆ, ಅದರಿಂದ ಆದಾಯ ಗಳಿಸುವುದು ಹೇಗೆ, ಬಿದಿರು ಬೆಳೆಯಬೇಕೆಂದರೆ ಸಸಿಗಳು ಎಲ್ಲಿ ಸಿಗುತ್ತವೆ, ಮಾರುಕಟ್ಟೆ ಹೇಗಿದೆ, ಈ ಕೃಷಿಯಲ್ಲಿ ತೊಡಗಿಕೊಂಡರೆ ಎಷ್ಟು ವರ್ಷಗಳ ಕಾಲ ಆದಾಯ ಗಳಿಸಬಹುದು ಎಂಬೆಲ್ಲಾ ಮಾಹಿತಿಯನ್ನು ‘ಕೃಷಿ ಜಾಗರಣ’ ನಿಮಗಾಗಿ ಈ ಲೇಖನದ ಮೂಲಕ ಹೊತ್ತು ತಂದಿದೆ.

ಕಾನೂನಿನ ತೊಡಕಿಲ್ಲ

ಬಿದಿರು ಒಂದು ಅರಣ್ಯ ಗಿಡ ಎಂದು ಹಲವರು ಭಾವಿಸಿದ್ದರು. ಹಿಂದೆಲ್ಲಾ ಅತ್ಯಲ್ಪ ಮಂದಿ ಬಿದಿರು ಬೆಳೆದರೂ ಅದನ್ನು ಒಂದು ವಾಣಿಜ್ಯ ಬೆಳೆಯಾಗಿ ಕಂಡದ್ದು ತೀರಾ ಕಡಿಮೆ. ಏಕೆಂದರೆ, ಬಿದಿರು ಕಡಿಯಲು, ಸಾಗಿಸಲು ಮತ್ತು ಕಡಿದ ಬಿದಿರನ್ನು ಮಾರಾಟ ಮಾಡಲು ಸರ್ಕಾರದಿಂದ ಪರವಾನಗಿ ಅಥವಾ ಅನುಮತಿ ಪಡೆಯುವುದು ಕಡ್ಡಾಯವಾಗಿತ್ತು. ಹೀಗಾಗಿ ಅಲ್ಲಿ ಇಲ್ಲಿ ಕೆಲವರು ಬೆಳೆದರೂ ತಮ್ಮ ಮನೆಯ ಉಪಯೋಗಕ್ಕೆ ಆಗುವಷ್ಟನ್ನು ಮಾತ್ರ ಬೆಳೆದುಕೊಳ್ಳುತ್ತಿದ್ದರು. ಆದರೆ, ಬಿದಿರಿನ ಮೇಲಿದ್ದ ಎಲ್ಲ ಕಾನೂನು ನಿರ್ಬಂಧಗಳನ್ನು ಹಲವು ವರ್ಷಗಳ ಹಿಂದೆಯೇ ಸರ್ಕಾರ ತೆರವುಗೊಳಿಸಿದೆ. ಹೀಗಾಗಿ ಈಗ ಯಾರುಬೇಕಾದರೂ ಬಿದಿರು ಬೆಳೆಯಬಹುದು. ಅಷ್ಟೇ ಅಲ್ಲದೆ ಪ್ರತಿ ಬಿದಿರು ಗಿಡದ ನಿರ್ವಹಣೆಗೆ ಸರ್ಕಾರದಿಂದ ಪ್ರೋತ್ಸಾಹ ಧನ ಕೂಡ ಸಿಗುತ್ತದೆ.

ಬಿದಿರು ಸ್ಸಂಸ್ಕರಣಾ ಘಟಕ

ಬೆಳೆಯುವುದು ಹೇಗೆ?

ಬಿದಿರು ಬೆಳೆಯಬೇಕೆಂದರೆ ಮೊದಲು ರಾಷ್ಟಿçÃಯ ಬಿದಿರು ಮಿಷನ್ ಅಥವಾ ಅರಣ್ಯ ಇಲಾಖೆಯನ್ನು ಸಂಪರ್ಕಿಸಿ ಬಿದಿರು ಬೆಳೆಯುವ ರೈತರಾಗಿ ಹೆಸರು ನೋಂದಾಯಿಸಬೇಕು. ನಂತರ ಅರ್ಜಿಗಳ ಹಿರಿತನದ ಆಧಾರದಲ್ಲಿ ರೈತರಿಗೆ ಬಿದಿರಿನ ಸಸಿಗಳನ್ನು ಸರ್ಕಾರ ವಿತರಿಸುತ್ತದೆ. ಜೊತೆಗೆ, ರೈತರಿಗೆ ಬಿದಿರು ಬೆಳೆಯಲು ಅಗತ್ಯವಿರುವ ತರಬೇತಿ, ಪ್ರಾತ್ಯಕ್ಷಿಕೆಯನ್ನೂ ಸಹ ನೀಡಲಾಗುತ್ತದೆ. ರಾಷ್ಟಿçÃಯ ಬಿದಿರು ಮಿಷನ್ ಅಡಿಯಲ್ಲಿ ಹೆಸರು ನೋಂದಣಿ ಮಾಡಿಕೊಂಡ ಬಿದಿರು ಬೆಳೆಗಾರರಿಗೆ ಸರ್ಕಾರದ ವತಿಯಿಂದ 50 ಸಾವಿರ ರೂ. ಪ್ರೋತ್ಸಾಹಧನ ದೊರೆಯುತ್ತದೆ.

ಅಂಗಾಂಶ ಸಸಿ

ಭಾರತದಲ್ಲಿ ಸುಮಾರು 1400ಕ್ಕೂ ಅಧಿಕ ಬಿದಿರು ಜಾತಿಗಳಿವೆ. ಇದರಲ್ಲಿ ಬಹುತೇಕ ಜಾತಿಯ ಬಿದಿರುಗಳು ಪೆಳೆ ರೀತಿ ಬೆಳೆಯುತ್ತಿದ್ದು, ಮುಳ್ಳುಗಳು ಹೆಚ್ಚಾಗಿರುತ್ತವೆ. ಈ ಕಾರಣದಿಂದಲೇ ರೈತರು ಬಿದಿರು ಬೆಳೆಯಲು ಹಿಂಜರಿಯುತ್ತಿದ್ದರು. ಇದನ್ನು ಅರಿತ ಕೃಷಿ ವಿಜ್ಞಾನಿಗಳು ಅಂಗಾAಶ ಕೃಷಿ ತಂತ್ರಜ್ಞಾನ (ಟಿಷ್ಯುಕಲ್ಚರ್) ಬಳಸಿಕೊಂಡು ಹೈಬ್ರೀಡ್ ಸಸಿಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಈ ತಳಿಗಳಲ್ಲಿ ಮುಳ್ಳುಗಳು ಇರುವುದಿಲ್ಲ. ಅಲ್ಲದೆ ಅಂಗಾAಶ ಕೃಷಿಯ ಸಸಿಗಳನ್ನು ಹಾಕಿ ಬಿದಿರು ಬೆಳೆಯುವ ರೈತರಿಗೆ ಮಾತ್ರ ಸರ್ಕಾರದಿಂದ ಪ್ರೋತ್ಸಾಹಧನ ಮತ್ತು ಸಹಾಯಧನ ಸೌಲಭ್ಯ ಸಿಗುತ್ತದೆ.

ಬೆಳೆಯುವ ವಿಧಾನ

ಬಿದಿರನ್ನು ಒಂದು ಪೂರ್ಣ ಪ್ರಮಾಣದ ಬೆಳೆಯಾಗಿ ಬೆಳೆಯಬಹುದು. ಇಲ್ಲವೇ ಜಮೀನಿನ ಸುತ್ತ ಬೇಲಿ ರೂಪದಲ್ಲೂ ಬೆಳೆಸಬಹುದು. ಪೂರ್ಣ ಪ್ರಮಾಣದ ಬೆಳೆಯಾಗಿ ಬೆಳೆಯುವಾಗ ಪ್ರತಿ ಗಿಡದ ನಡುವೆ 6 ಅಡಿ ಹಾಗೂ ಪ್ರತಿ ಸಾಲಿನ ನಡುವೆ 10 ಅಡಿಗಳ ಅಂತರ ಕಾಯ್ದುಕೊಂಡು ಸಸಿ ನೆಡಬೇಕು. ಬಳಿಕ ಕಬ್ಬಿನ ಬೆಳೆಯಲ್ಲಿ ತೆಗೆಯುವಂತೆ ಸಾಲುಗಳ ನಡುವೆ ಟ್ರಂಚ್ ತೆಗೆದು, ನೀರು ಹರಿಸಬೇಕು. ಬೇಸಿಗೆಯಲ್ಲಿ ನೀರು ಗಿಡಗಳ ಬಳಿಯೇ ಉಳಿಯುವಂತೆ ಮಾಡಲು (ತೇವಾಂಶ ಹಿಡಿದಿಡಲು) ಹಸಿರೆ, ತೆಂಗು, ಅಡಕೆಯಗರಿಗಳನ್ನು ಟ್ರಂಚ್‌ಗೆ ಹಾಕಿ ಮಣ್ಣು ಮುಚ್ಚ, ಅದರ ಮೇಲೆ ನೀರು ಹಾಯಿಸಬೇಕು. ಬಿದಿರಿನ ನಡುವೆ ಬೇರಾವುದೇ ಬೆಳೆ ಬೆಳೆಯಬಾರದು.

80 ವರ್ಷಗಳವರೆಗೂ ಆದಾಯ!

ತಜ್ಞರು ಸಲಹೆ ಮಾಡಿದ ರೀತಿಯಲ್ಲೇ ನಿಗದಿತ ಅಂತರದಲ್ಲಿ ನಾಟಿ ಮಾಡಿದಾಗ ಒಂದು ಎಕರೆಗೆ 900 ರಿಂದ 1000 ಬಿದಿರಿನ ಗಿಡಗಳು ಕೂರುತ್ತವೆ. 3 ವರ್ಷಗಳ ನಂತರ ಬಿದಿರು ಕಟಾವಿಗೆ ಸಿದ್ಧವಾಗಿ, ಆದಾಯ ಬರಲು ಆರಂಭವಾಗಲಿದ್ದು, ಒಂದು ಸಾವಿರ ಬಿದಿರಿನ ಗಿಡಗಳಿಂದ 40 ಟನ್ ಬಿದಿರು ತೆಗೆಯಬಹುದು. ಪ್ರಸ್ತುತ ಮಾರುಕಟ್ಟೆ ದರದಂತೆ ಒಂದು ಟನ್ ಬಿದಿರಿನಿಂದ 5000 ರೂ. ಸಿಗಲಿದ್ದು, ಮೊದಲ ವರ್ಷ 1.50 ಲಕ್ಷದಿಂದ 2 ಲಕ್ಷ ರೂ.ವರೆಗೆ ಆದಾಯ ಗಳಿಸಬಹುದು. ಮೂರನೇ ವರ್ಷ ಆರಂಭವಾಗುವ ಈ ಆದಾಯ ಸುಮಾರು 80-90 ವರ್ಷಗಳವರೆಗೆ ನಿರಂತರವಾಗಿ ಮುಂದುವರಿಯುತ್ತದೆ. ಬೆಳೆದ ಬಿದಿರು ಮಾರಾಟಕ್ಕೆ ಹೆಚ್ಚು ಕಷ್ಟಪಡುವ ಅಗತ್ಯವಿಲ್ಲ. ಪೀಠೋಪಕರಣಗಳಿಗೆ ಬಿದಿರು ಹೆಚ್ಚು ಬಳಕೆಯಾಗುವ ಕಾರಣ ನೀವು ಬೆಳೆಯುವ ವಿಷಯ ತಿಳಿದರೆ ಹಲವು ಕಂಪನಿಗಳು ಸ್ವತಃ ರೈತರ ಬಳಿ ತೆರಳಿ ಬಿದಿರು ಖರೀದಿಸುತ್ತವೆ.

ಬಿದಿರಿನ ಉಪಯೋಗ ಹಲವು

ಎರಡು ವರ್ಷಗಳ ಹಿಂದೆ ಪ್ರತಿ ವರ್ಷ 60ರಿಂದ 70 ಸಾವಿರ ಟನ್ ಬಿದಿರನ್ನು ಚೀನಾ ಮತ್ತು ವಿಯೆಟ್ನಾಂನಿAದ ಭಾರತ ಆಮದು ಮಾಡಿಕೊಳ್ಳುತ್ತಿತ್ತು. ಇತ್ತೀಚೆಗೆ ನಮ್ಮಲ್ಲಿ ಬಿದಿರು ಕೃಷಿ ಮಾಡುವವರ ಸಂಖ್ಯೆ ಹೆಚ್ಚಾಗಿರುವ ಕಾರಣ ಆಮದು ಪ್ರಮಾಣ ಕುಸಿದಿದೆ. ನಮ್ಮಲ್ಲೇ ಬೆಳೆಯುವ ಬಿದಿರನ್ನು ಕಟಾವು ಮಾಡಿ, ಸಂಸ್ಕರಣೆ ಘಟಕಗಳಿಗೆ ಕೊಂಡೊಯ್ದು ಸೂಕ್ತ ರೀತಿಯಲ್ಲಿ ಹದಗೊಳಿಸಿ ಕಾರ್ಖಾನೆಗಳಿಗೆ ಕಳುಹಿಸಲಾಗುತ್ತದೆ. ನಂತರ ಹದಗೊಂಡ ಬಿದಿರನ್ನು ಕಂಪ್ರೆಸ್ ಮಾಡಿ ಮರದ ದಿಮ್ಮೆಗಳಾಗಿ ಪರಿವರ್ತಿಸುವ ತಂತ್ರಜ್ಞಾನ ಬಳಕೆಯಲ್ಲಿದೆ. ಹೀಗಾಗಿ ಮೊದಲಿನಂತೆ ಬಿದಿರು ಕೇವಲ ಸಣ್ಣ ಪುಟ್ಟ ಪೀಠೋಪಕರಣ, ಆಟಿಕೆ ತಯಾರಿಸಲು ಸೀಮಿತವಾಗಿಲ್ಲ. ಬದಲಿಗೆ, ದೊಡ್ಡ ಪೀಠೋಪಕರಣ, ನಿರ್ಮಾಣ ಕ್ಷೇತ್ರದಲ್ಲೂ ವ್ಯಾಪಕವಾಗಿ ಬಳಕೆಯಲ್ಲಿದೆ. ಜೊತೆಗೆ ಫಾರ್ಮಿಕ್ ಶೀಟ್ ತಯಾರಿಸಲು ಸಹ ಬಿದಿರು ಬೇಕು. ಹಿಗಾಗಿ ಬಿದಿರು ಬೆಳೆದರೆ ಆದಾಯಕ್ಕೇನೂ ಕೊರತೆ ಇಲ್ಲ ಎನ್ನುತ್ತಾರೆ ತಜ್ಞರು.