Agripedia

ರೈತರಿಗೆ ಸಹಕಾರ ಸಂಘಗಳ ಮೂಲಕ 14 ಸಾವಿರ ಕೋಟಿ ಬೆಳೆ ಸಾಲ

21 May, 2020 8:28 PM IST By:

ಕೋರೋನಾದಿಂದಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ರೈತರಿಗೆ ನೆರವು ನೀಡಲು ಕೇಂದ್ರ ಸರ್ಕಾರದೊಂದಿಗೆ ರಾಜ್ಯಸರ್ಕಾರವು ಸಹ ಮುಂದಾಗಿದೆ. ಪ್ರಸಕ್ತ ವರ್ಷದಲ್ಲಿ ರೈತರಿಗೆ ಸಹಕಾರ ಸಂಘಗಳ ಮೂಲಕ 14 ಸಾವಿರ ಕೋಟಿ ರೂಪಾಯಿ ಬೆಳೆ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದ್ದಾರೆ.
 ವಿಧಾನಸೌಧದಲ್ಲಿ  ಬುಧವಾರ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರು ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಗತ್ಯ ಇರುವ ಎಲ್ಲ ರೈತರಿಗೆ ಸಕಾಲದಲ್ಲಿ ಸಾಲ ನೀಡಲು ಜಿಲ್ಲಾ ಸಹಕಾರಿ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಕಳೆದ ವರ್ಷ 13 ಸಾವಿರ ಕೋಟಿ ರೂಪಾಯಿ ಸಾಲ ನೀಡಲಾಗಿತ್ತು. ಈ ವರ್ಷ 14 ಸಾವಿರ ಕೋಟಿ ರೂಪಾಯಿ ಸಾಲ ನೀಡುವ ಗುರಿ ಹೊಂದಲಾಗಿದೆ. ಈಗಾಗಲೇ 1,35,977 ರೈತರಿಗೆ 916 ಕೋಟಿ ರೂಪಾಯಿ ಸಾಲ ನೀಡಲಾಗಿದೆ. ರೈತರಿಗೆ ಸಾಲ ಹಾಗೂ  ಸವಲತ್ತು ಗಳ ವಿತರಣೆಯಲ್ಲಿ 2-3 ಜಿಲ್ಲೆಗಳು ಮಾತ್ರ ಶೇ.100 ಸಾಧನೆ ಮಾಡಿವೆ. ಉಳಿದ ಜಿಲ್ಲೆಗಳಲ್ಲಿ ಸಾಧನೆ ಕಡಿಮೆಯಿದ್ದು ಶೇ.100 ರಷ್ಟು ಸಾಧನೆ ಮಾಡಲು ಸೂಚನೆ ನೀಡಲಾಗಿದೆ ಎಂದರು. ಸ್ವ ಸಹಾಯ ಸಂಘಗಳಿಗೆ ಶೂನ್ಯ ಬಡ್ಡಿದರದಲ್ಲಿ  ಸಾಲ ವಿತರಣೆ ಮಾಡುತ್ತಿದ್ದು ಅವರು ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಂಡು ಮರು ಪಾವತಿ ಮಾಡುತ್ತಿದ್ದಾರೆ. ಬಡವರ ಬಂಧು, ಕಾಯಕ ಯೋಜನೆಯಡಿ ಡಿಸಿಸಿ ಬ್ಯಾಂಕ್‌ಗಳಲ್ಲಿ ನೂರಕ್ಕೆ ನೂರರಷ್ಟು ಸಾಲ ಮರು ಪಾವತಿಯಾಗುತ್ತಿದೆ. ಅಂತಹವರಿಗೆ ಹೆಚ್ಚಿನ ಆದ್ಯತೆ ನೀಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.